CONNECT WITH US  

ಹದಗೆಟ್ಟ ಕಂಡ್ಲೂರು-ಅಂಪಾರು ರಾ.ಹೆ.

5 ಕಿ.ಮೀ. ದೂರದ ರಸ್ತೆಯುದ್ದಕ್ಕೂ ಹೊಂಡ-ಗುಂಡಿಗಳದ್ದೇ ಕಾರುಬಾರು

ರಾಜ್ಯ ಹೆದ್ದಾರಿಯ ಮುಳ್ಳುಗುಡ್ಡೆ ಬಳಿ ಹದಗೆಟ್ಟ ರಸ್ತೆ.

ಕಂಡ್ಲೂರು: ಕುಂದಾಪುರ - ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಕಂಡ್ಲೂರಿನಿಂದ ಅಂಪಾರಿಗೆ ಹೋಗುವ ರಸ್ತೆಯ ಅಲ್ಲಲ್ಲಿ ಹೊಂಡ -ಗುಂಡಿಗಳಿಂದಾಗಿ ವಾಹನ ಸವಾರರು ನಿತ್ಯ ಸರ್ಕಸ್‌ ಮಾಡಿ ಸಂಚರಿಸುವ ಪರಿಸ್ಥಿತಿ ಬಂದೊದಗಿದೆ. ಸುಮಾರು 5 ಕಿ.ಮೀ. ದೂರದ ರಸ್ತೆಯುದ್ದಕ್ಕೂ ಅನೇಕ ಕಡೆಗಳಲ್ಲಿ ರಸ್ತೆ ಹದಗೆಟ್ಟಿದೆ.

ರಾಜ್ಯ ಹೆದ್ದಾರಿಯ ಕಂಡ್ಲೂರಿನಿಂದ ಆರಂಭಗೊಂಡು ದೂಪದಕಟ್ಟೆ, ಮುಳ್ಳುಗುಡ್ಡೆ, ನೆಲ್ಲಿಕಟ್ಟೆ, ಅಂಪಾರುವರೆಗೆ ಅಲ್ಲಲ್ಲಿ ಹೊಂಡ- ಗುಂಡಿಗಳಿಂದಾಗಿ ರಸ್ತೆಯ ಡಾಮರೇ ಮಾಯವಾದಂತಿದೆ.  

ಅಪಘಾತ ವಲಯ
ಹದಗೆಟ್ಟ ಈ ರಸ್ತೆಯಲ್ಲಿ ತೆರಳುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದಾರೆ. ಮಳೆಗಾಲಕ್ಕೆ ಮುನ್ನವೇ ರಸ್ತೆಯ ಅಲ್ಲಲ್ಲಿ ಹೊಂಡ- ಗುಂಡಿಗಳು ಕಾಣಿಸಿಕೊಂಡಿದ್ದರೂ, ಅದಕ್ಕೆ ತೇಪೆ ಹಾಕುವ ಕಾರ್ಯ ಮಾತ್ರ ಆಗಿರಲಿಲ್ಲ. ಈಗ ಈ ರಸ್ತೆಯಲ್ಲಿ ಮತ್ತಷ್ಟು ದೊಡ್ಡ - ದೊಡ್ಡ ಹೊಂಡಗಳಿದ್ದು, ಈ ಪ್ರದೇಶವೀಗ ಅಪಘಾತ ವಲಯವಾಗಿ ಮಾರ್ಪಾಡಾಗಿದೆ. 

ಸಾವಿರಕ್ಕೂ ಹೆಚ್ಚು ವಾಹನ ಸಂಚಾರ
ಕುಂದಾಪುರದಿಂದ ಬಾಳೇಬರೇ ಘಾಟಿ ಮೂಲಕವಾಗಿ ತೀರ್ಥಹಳ್ಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ - 52 ಇದಾಗಿದೆ. ಕುಂದಾಪುರದಿಂದ ಬಸ್ರೂರು, ಕಂಡ್ಲೂರು, ಅಂಪಾರು, ಹೊಸಂಗಡಿ, ನಗರವಾಗಿ ತೀರ್ಥಹಳ್ಳಿಗೆ ತೆರಳಲು ಈ ರಾಜ್ಯ ಹೆದ್ದಾರಿಯೇ ರಹದಾರಿಯಾಗಿದೆ. ನಿತ್ಯ ಸಾವಿರಕ್ಕೂ ಹೆಚ್ಚು ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ದಿನಂಪ್ರತಿ ನೂರಾರು ಬಸ್‌ಗಳು, ಶಾಲಾ ವಾಹನಗಳು ಇದೇ ರಸ್ತೆಯನ್ನು ಅವಲಂಬಿಸಿವೆ. 

ಘನ ವಾಹನದಿಂದ ಸಂಚಕಾರ
ಇನ್ನೆರಡು ದಿನ ಮಳೆ ಬಂದರೆ ಈ ರಸ್ತೆ ಸಂಪೂರ್ಣ ಹಾಳಾಗುತ್ತದೆ. ಕುಂದಾಪುರದಿಂದ ಬಸ್ರೂರು, ಬಳ್ಕೂರುವರೆಗೆ ರಸ್ತೆ ಚೆನ್ನಾಗಿದ್ದರೂ, ಕಂಡ್ಲೂರಿನಿಂದ ಈಚೇಗೆ ಕೆಟ್ಟು ಹೋಗಿದೆ. ಸಂಚಾರವೇ ದುಸ್ತರವಾಗಿದೆ. ದೂಪದಕಟ್ಟೆ ಬಳಿಯಂತೂ ಪ್ರತೀ ವರ್ಷ ಹದಗೆಡುತ್ತದೆ. ಘನ ವಾಹನಗಳ ಸಂಚಾರದಿಂದ ಈ ರಸ್ತೆ ಮತ್ತಷ್ಟು ಹಾಳಾಗಿದೆ. 
- ರಾಜು ದೇವಾಡಿಗ, ಹಳ್ನಾಡು

ಮಳೆಗಾಲ ಮುಗಿದಾಕ್ಷಣ ಡಾಮರು ಕಾಮಗಾರಿ
ಕಳೆದ ವರ್ಷ ಸಿಆರ್‌ಎಫ್‌ ಅನುದಾನದಡಿ 10 ಕೋ.ರೂ. ಮಂಜೂರಾಗಿದ್ದು, ಇದರ ಕಾಮಗಾರಿ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಬಿಟ್ಟುಕೊಟ್ಟಿದೆ. ಈಗಾಗಲೇ ಕೆಲವು ಕಡೆಗಳಲ್ಲಿ ವಿಸ್ತರಣೆ, ಡಾಮರೀಕರಣ ಆಗಿದೆ. ಮಳೆಗಾಲ ಮುಗಿದ ತತ್‌ಕ್ಷಣ ಕಂಡ್ಲೂರು, ಅಂಪಾರು ಭಾಗದಲ್ಲಿಯೂ ಡಾಮರೀಕರಣ ಆಗಲಿದೆ. 
 - ರಾಘವೇಂದ್ರ ನಾಯ್ಕ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ (ಪ್ರಭಾರ),  ಕುಂದಾಪುರ ಉಪ ವಿಭಾಗ

Trending videos

Back to Top