ಶಿಮ್ಲಾದಲ್ಲಿ ವಾಹನಗಳ ಭೂಸಮಾಧಿ
Team Udayavani, Sep 3, 2017, 7:05 AM IST
ಶಿಮ್ಲಾ: ಧಾರಾಕಾರ ಮಳೆಯಿಂದಾಗಿ ಚಂಡೀಗಢ-ಶಿಮ್ಲಾ ಹೆದ್ದಾರಿಯಲ್ಲಿ ಶನಿವಾರ ಭಾರೀ ಭೂಕುಸಿತ ಸಂಭವಿಸಿದ್ದು, ಹಲವು ವಾಹನಗಳು ಭೂಸಮಾಧಿಯಾಗಿವೆ. ಧಲ್ಲಿ ಸುರಂಗದ ಸಮೀಪದಲ್ಲೇ ಈ ಘಟನೆ ನಡೆದಿದೆ.
ಮಣ್ಣು ಕುಸಿದು ಬಿದ್ದು ಭೂಕುಸಿತ ಉಂಟಾದ ಪರಿಣಾಮ ಹೆದ್ದಾರಿಯಲ್ಲಿ ನಿಲ್ಲಿಸಲಾಗಿದ್ದ 6-7 ವಾಹನಗಳು ಮಣ್ಣಿನಡಿ ಹೂತುಹೋಗಿವೆ. ಜತೆಗೆ, ದೇವಾಲಯ ವೊಂದು ಭಾಗಶಃ ಹಾನಿಗೊಳಗಾಗಿದೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಮೂವರನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ. ಆದರೆ, ಸಾವು-ನೋವಿನ ಕುರಿತು ಮಾಹಿತಿ ದೊರೆತಿಲ್ಲ.
ಇತ್ತೀಚೆಗೆ ಇಲ್ಲಿನ ಮಂಡಿಯಲ್ಲಿ ಹಿಮಾ ಚಲ ರಸ್ತೆ ಸಾರಿಗೆ ಸಂಸ್ಥೆಯ ಎರಡು ಬಸ್ಗಳು ಭೂಕುಸಿತ ಹಾಗೂ ಮಳೆಯಿಂದ ಕೊಚ್ಚಿಕೊಂಡು ಹೋಗಿ ಕನಿಷ್ಠ 46 ಮಂದಿ ಮೃತಪಟ್ಟಿದ್ದರು. ಶನಿವಾರ ಭೂಕುಸಿತ ಸಂಭವಿಸಿದ ಪ್ರದೇಶವು ಇಲ್ಲಿಂದ ಸುಮಾರು 100 ಕಿ.ಮೀ. ದೂರದಲ್ಲಿದೆ.