CONNECT WITH US  

ಉಪ ಚುನಾವಣೆ: ಸರಾಸರಿ ಶೇ 82 ರಷ್ಟು ಮತದಾನ

ಚಾಮರಾಜನಗರ/ಮೈಸೂರು: ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಸರಾಸರಿ ಶೇ.82 ರಷ್ಟು ಮತದಾನವಾಗಿದೆ. ನಂಜನಗೂಡಿನಲ್ಲಿ ಶೇ.77.56ರಷ್ಟು ಮತದಾನ ನಡೆದರೆ, ಗುಂಡ್ಲುಪೇಟೆಯಲ್ಲಿ ಶೇ.87.15 ರಷ್ಟು ಮತದಾನವಾಗಿದೆ.

ಗುಂಡ್ಲುಪೇಟೆಯ ಮಹದೇವ ಪ್ರಸಾದ್‌ ಬಡಾವಣೆಯಲ್ಲಿ ಮತದಾನ ಬಹಿಷ್ಕಾರ, ಗುಂಡ್ಲುಪೇಟೆ ತಾಲೂಕಿನ ಕೆಲವೆಡೆ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ನಡುವಿನ ಘರ್ಷಣೆ ಸೇರಿದಂತೆ ಸಣ್ಣ-ಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ, ಮತದಾನ ಬಹುತೇಕ ಶಾಂತಿಯುತವಾಗಿತ್ತು. ಮಾಜಿ ಸಚಿವ ಶ್ರೀನಿವಾಸ ಪ್ರಸಾದ್‌, ಕಳಲೆ ಕೇಶವಮೂರ್ತಿ, ಗೀತಾ ಮಹದೇವಪ್ರಸಾದ್‌ ಅವರುಗಳ ರಾಜಕೀಯ ಭವಿಷ್ಯ ಈಗ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಏ.13ರಂದು ಮತಗಳ ಎಣಿಕೆ ನಡೆಯಲಿದೆ. ಗುಂಡ್ಲುಪೇಟೆ ಪಟ್ಟಣದ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ, ಅಣ್ಣೂರು ಕೇರಿ, ಹೊನ್ನಶೆಟ್ಟರ ಹುಂಡಿಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಈ ವೇಳೆ, ಇಬ್ಬರು ಗಾಯಗೊಂಡಿದ್ದಾರೆ.

ಮೊದಲ ಬಾರಿಗೆ ವಿಪ್ಯಾಟ್‌ ಬಳಕೆ
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿಪ್ಯಾಟ್‌ಗಳನ್ನು ಬಳಸಲಾಗಿತ್ತು. ನಿಷ್ಪಕ್ಷಪಾತ ಮತದಾನ ಖಾತರಿಪಡಿಸಿಕೊಳ್ಳಲು ರಾಜಕೀಯ ಪಕ್ಷಗಳ ನಾಯಕರು, ಏಜೆಂಟರ ಸಮ್ಮುಖ ಮತದಾನ ಆರಂಭಕ್ಕೂ ಮುನ್ನ ಅಣುಕು ಮತದಾನ ನಡೆಸಲಾಯಿತು. ನಂತರ, ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿ, ಸಂಜೆ 5ಕ್ಕೆ ಮುಕ್ತಾಯವಾಯಿತು. ಮತದಾನ ಆರಂಭದಲ್ಲಿ ಚುರುಕು ಪಡೆದರೆ, ಬಿಸಿಲು ಏರುತ್ತಿದ್ದಂತೆ ಮಂದಗತಿಯಲ್ಲಿ ಸಾಗಿತು. ಸಂಜೆಯ ವೇಳೆ ಮತ್ತೆ ಬಿರುಸು ಪಡೆಯಿತು. ನಂಜನಗೂಡು ಕಾಂಗ್ರೆಸ್‌ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಸ್ವಗ್ರಾಮ ಕಳಲೆಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಬೆಳಗ್ಗೆಯೇ ಮತ ಚಲಾಯಿಸಿ, ನಂತರ ವಿವಿಧ ಗ್ರಾಮಗಳಿಗೆ ತೆರಳಿ ಅಂತಿಮ ಕ್ಷಣದಲ್ಲೂ ಮತದಾರರ ಮನವೊಲಿಸುವ ಯತ್ನ ನಡೆಸಿದರು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸಪ್ರಸಾದ್‌ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿಲ್ಲದ್ದರಿಂದ ನಂಜನಗೂಡು ಪಟ್ಟಣದ ತಮ್ಮ ಆಪ್ತ ಪದ್ಮನಾಭ ರಾವ್‌ ಮನೆಯಲ್ಲಿ ಕುಳಿತು ಕ್ಷೇತ್ರದಲ್ಲಿ ನಡೆಯುತ್ತಿರುವ ಮತದಾನದ ಬಗ್ಗೆ ಮಾಹಿತಿ ಕಲೆಹಾಕಿಕೊಂಡು ಸಮಾಲೋಚನೆ ನಡೆಸಿದರು.

ಗುಂಡ್ಲುಪೇಟೆಯ ಬಿಜೆಪಿ ಅ¸‌Âರ್ಥಿ ಸಿ.ಎಸ್‌.ನಿರಂಜನಕುಮಾರ್‌ ಅವರು ಸ್ವಗಾಮ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಎಂ.ಸಿ.ಮೋಹನಕುಮಾರಿ (ಡಾ.ಗೀತಾ ಮಹದೇವಪ್ರಸಾದ್‌) ಸ್ವಗಾಮ ತಾಲೂಕಿನ ಹಾಲಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಇದಕ್ಕೂ ಮೊದಲು ಬೆಳಗ್ಗೆ 8.30ರ ವೇಳೆ, ಹಾಲಹಳ್ಳಿಯ ತೋಟದ ಮನೆಯಿಂದ ಹೊರಟ ಅವರು, ಮಹದೇವಪ್ರಸಾದ್‌ ಅವರ ಸಮಾಧಿ ಸ್ಥಳಕ್ಕೆ ಬಂದು ಪೂಜೆ ಸಲ್ಲಿಸಿದರು. ಅಲ್ಲಿಂದ ನೇರವಾಗಿ ಮತಗಟ್ಟೆಗೆ ತೆರಳಿದರು.  ಈ ಮಧ್ಯೆ, ಮುಂಜಾಗ್ರತಾ ಕ್ರಮವಾಗಿ ಮತಗಟ್ಟೆಗಳಿಗೆ ಹೆಚ್ಚಿನ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕೈಕೊಟ್ಟ ಮತಯಂತ್ರ:
ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ, ಭೀಮನಬೀಡು, ತ್ರಿಯಂಬಕಪುರ, ಕುಂದಕರೆ, ತೆರಕಣಾಂಬಿಹುಂಡಿ, ತೆರಕಣಾಂಬಿ, ಸೋಮಹಳ್ಳಿ ಸೇರಿದಂತೆ ಕ್ಷೇತ್ರದ 23 ಮತಗಟ್ಟೆಗಳಲ್ಲಿ ಮತಯಂತ್ರಗಳು ಕೈಕೊಟ್ಟವು. ರಾಘವಾಪುರ ಗ್ರಾಮದ ಮತಗಟ್ಟೆ 36ರಲ್ಲಿ ಮೂರು ಬಾರಿ ಮತಯಂತ್ರ ಕೈಕೊಟ್ಟ ಪರಿಣಾಮ ಮತದಾರರು ಕಾದು ನಿಲ್ಲಬೇಕಾದ ಪರಿಸ್ಥಿತಿ ಇತ್ತು. ಇದರಿಂದ ಹಲವರು ಮತ ಚಲಾಯಿಸದೆ ವಾಪಸ್‌ ತೆರಳಿದ ಪ್ರಸಂಗವೂ ನಡೆದಿದೆ. ದುರಸ್ಥಿ ನಂತರ ಸುಗಮ ಮತದಾನಕ್ಕೆ ಅನುವು ಮಾಡಿಕೊಡಲಾಯಿತು. ಅಲ್ಲದೆ, ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದ ಮತಗಟ್ಟೆ ಸಂಖ್ಯೆ 74, ತೆರಕಣಾಂಬಿಯ ಮತಗಟ್ಟೆ ಸಂಖ್ಯೆ 108ರಲ್ಲಿ ವಿಪ್ಯಾಟ್‌ ಯಂತ್ರ ಕೆಟ್ಟು ಬೆಳಿಗ್ಗೆ 8.40 ರಿಂದ 9.20ರವರೆಗೆ ಮತದಾನ ಸ್ಥಗಿತವಾಗಿತ್ತು. ಚುನಾವಣಾ ಸಿಬ್ಬಂದಿ ಬಂದು ಬೇರೆ ಯಂತ್ರ ಅಳವಡಿಸಿದ ಬಳಿಕ ಮತದಾನ ನಡೆಸಲಾಯಿತು.

ಮತಗಟ್ಟೆ ಬಳಿ ಹಣ ಹಂಚಲು ಯತ್ನಿಸುತ್ತಿದ್ದ ವ್ಯಕ್ತಿ ಬಂಧನ:
ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಗ್ರಾಮದಲ್ಲಿ ಮತದಾನದ ದಿನವೂ ಮತದಾರರ ಹೆಸರು ಬರೆದಿದ್ದ ನೋಟ್‌ ಪುಸ್ತಕದಲ್ಲಿ 5,900 ಹಣವಿಟ್ಟುಕೊಂಡು ಮತದಾರರಿಗೆ ಹಂಚಲೆತ್ನಿಸುತ್ತಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯನಿರ್ವಾಹಕ ಮಾರಶೆಟ್ಟಿ ಎಂಬಾತನನ್ನು ಗ್ರಾಮಸ್ಥರೇ ಹಿಡಿದು, ಪೊಲೀಸರಿಗೊಪ್ಪಿಸಿದರು. ಕಾಂಗ್ರೆಸ್‌ ಪರವಾಗಿ ಮತ ನೀಡುವಂತೆ ಈತ ಮತದಾರರಿಗೆ ಹಣ ವಿತರಣೆ ಮಾಡಲು ಯತ್ನಿಸುತ್ತಿದ್ದ ಎನ್ನಲಾಗಿದೆ.

ಮತದಾನ ಬಹಿಷ್ಕಾರ:
ತಮ್ಮ ಬಡಾವಣೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ ಎಂದು ತೀವ್ರ ಅಸಮಾಧಾನಗೊಂಡ ಗುಂಡ್ಲುಪೇಟೆ ನಗರದ ಮಹದೇವ ಪ್ರಸಾದ್‌ ಬಡಾವಣೆಯ ನಿವಾಸಿಗಳು ಮಧ್ಯಾಹ್ನ 12 ಗಂಟೆವರೆಗೂ ಮತದಾನ ಕೇಂದ್ರಕ್ಕೆ ಆಗಮಿಸಲಿಲ್ಲ. ಎರಡೂ ಪಕ್ಷಗಳ ಮುಖಂಡರು ಆಗಮಿಸಿ, ಮನವೊಲಿಸಿದ ನಂತರ ಮಹಿಳೆಯರು ಗುಂಪು ಗುಂಪಾಗಿ ಆಟೋದಲ್ಲಿ ಮತ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದರು.

ಮತದಾನದ ನಂತರ ಸಾವು:
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ದೇವಮ್ಮ (83) ಎಂಬುವರು ಮತದಾನ ಮಾಡಿ ಮನೆಗೆ ತೆರಳಿದ ನಂತರ ಸಾವಿಗೀಡಾಗಿದ್ದಾರೆ. ಈ ಮಧ್ಯೆ, ಹುಂಡೀಪುರ ಗ್ರಾಮದ ದೇವೀರಮ್ಮ (89) ಎಂಬುವರು ಮೊಮ್ಮಕ್ಕಳ ನೆರವಿನಿಂದ ಮತದಾನ ಮಾಡಿದರೆ, ಬೇಗೂರಿನ ಕೆಂಪರಾಜೇ ಅರಸು (85) ಎಂಬುವರು ಗಾಲಿಕುರ್ಚಿಯಲ್ಲಿ ಆಗಮಿಸಿ ಮತದಾನ ಮಾಡಿದರು.

ಎರಡು ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಜಿತನಾದ ಬಗ್ಗೆ ಕ್ಷೇತ್ರದ ಜನರಲ್ಲಿ ಅನುಕಂಪವಿದೆ. ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹಾಗೂ ಸಂಸದ ಆರ್‌.ಧ್ರುವನಾರಾಯಣ ಪರಿಶ್ರಮದಿಂದ ಕಾಂಗ್ರೆಸ್‌ ಸೇರ್ಪಡೆಯಾಗಿ ಅಭ್ಯರ್ಥಿಯಾಗಿದ್ದೇನೆ. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಹೀಗಾಗಿ, ಮತದಾರರು ಕಾಂಗ್ರೆಸ್‌ ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ.
- ಕಳಲೆ ಎನ್‌.ಕೇಶವಮೂರ್ತಿ, ನಂಜನಗೂಡು ಕಾಂಗ್ರೆಸ್‌ ಅಭ್ಯರ್ಥಿ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುರಹಂಕಾರ ಮತ್ತು ನನ್ನ ಸ್ವಾಭಿಮಾನದ ನಡುವಿನ ಹೋರಾಟ ಈ ಉಪ ಚುನಾವಣೆ. ಈ ಚುನಾವಣೆಗೆ ಮುಖ್ಯಮಂತ್ರಿ ಈ ಮಟ್ಟಕ್ಕೆ ಇಳಿಯುತ್ತಾರೆ ಅಂದುಕೊಂಡಿರಲಿಲ್ಲ. ಕ್ಷೇತ್ರದಲ್ಲಿ ಹಣದ ಹೊಳೆಯನ್ನೇ ಹರಿಸಿದ್ದಾರೆ. ಇದರಿಂದ ನನ್ನ ಗೆಲುವಿನ ಅಂತರ ಕಡಿಮೆ ಆಗಬಹುದು. ಆದರೆ, ಅಂತಿಮವಾಗಿ ಗೆಲುವು ನನ್ನದೆ.
- ವಿ.ಶ್ರೀನಿವಾಸಪ್ರಸಾದ್‌, ನಂಜನಗೂಡು ಬಿಜೆಪಿ ಅಭ್ಯರ್ಥಿ.

ನಾನೂ ಸಹ 2 ಬಾರಿ ಮತ್ತು ನನ್ನ ತಂದೆಯವರು 2 ಬಾರಿ ಸೋತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಮತದಾರರ ಅಂತಕರಣದಲ್ಲಿ ನನಗೆ ಮತ ನೀಡಬೇಕೆಂಬುದು ಬಂದಿದೆ. ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆ ಬಯಸಿರುವ ಮತದಾರ, ಬಿಜೆಪಿಗೆ ಬಹುಮತ ನೀಡಲಿದ್ದಾನೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ನನ್ನದೇ ಗೆಲುವು.
- ಸಿ.ಎಸ್‌.ನಿರಂಜನಕುಮಾರ್‌, ಗುಂಡ್ಲುಪೇಟೆ ಬಿಜೆಪಿ ಅಭ್ಯರ್ಥಿ.

ಇದು ನಾನು ಈ ಗ್ರಾಮದಲ್ಲಿ ಮತ ಚಲಾಯಿಸುತ್ತಿರುವ ಎಂಟನೇ ಚುನಾವಣೆ. ಕಳೆದ ಏಳು ಚುನಾವಣೆಗಳಲ್ಲಿಯೂ ನನ್ನ ಜೊತೆ ಎಚ್‌.ಎಸ್‌.ಮಹದೇವಪ್ರಸಾದ್‌ ಇದ್ದರು. ಆದರೆ, ಈಗಿಲ್ಲ. ಕ್ಷೇತ್ರದೆಲ್ಲೆಡೆ ಕಾಂಗ್ರೆಸ್‌ ಪರವಾದ ಒಲವು ಮತದಾರರಲ್ಲಿ ಇದೆ. ಮಹದೇವಪ್ರಸಾದ್‌ ಅವರು ಮಾಡಿರುವ ಅಭಿವೃದ್ದಿ ಕಾರ್ಯಗಳು ನನ್ನ ಗೆಲುವಿಗೆ ಸಹಕಾರಿಯಾಗುತ್ತದೆ.
- ಎಂ.ಸಿ.ಮೋಹನಕುಮಾರಿ (ಡಾ.ಗೀತಾಮಹದೇವಪ್ರಸಾದ್‌), ಗುಂಡ್ಲುಪೇಟೆ ಕಾಂಗ್ರೆಸ್‌ ಅಭ್ಯರ್ಥಿ.


Trending videos

Back to Top