CONNECT WITH US  

ಚುನಾವಣೆ ಕಣಕ್ಕೆ ಇಳಿಯುವುದಿಲ್ಲ: ಶ್ರೀನಿವಾಸ್‌ ಪ್ರಸಾದ್‌ ಘೋಷಣೆ

ಮೈಸೂರು: ನಂಜನಗೂಡು ಉಪ ಚುನಾವಣೆ ಸೋಲಿನ ಹಿನ್ನೆಲೆ ಚುನಾವಣಾ ರಾಜಕೀಯದಿಂದ ಹಿಂದೆ ಸರಿದು, ಸಕ್ರಿಯ ರಾಜಕೀಯದಲ್ಲಿ ಮುಂದುವರಿಯುವುದಾಗಿ ನಂಜನಗೂಡು ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ ಪ್ರಸಾದ್‌ ಘೋಷಿಸಿದ್ದಾರೆ. ಪತ್ರಕರ್ತರೊಂದಿಗೆ ಅವರು ಮಾತನಾಡಿ, ತನ್ನ ಅಭಿಪ್ರಾಯ ಪಡೆಯದೆ ಸಚಿವ ಸ್ಥಾನದಿಂದ ಕೆಳಗಿಳಿಸಿ ತನ್ನ ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡಿದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಬೇಕಾಯಿತು. ತಾನು ಈ ಹಿಂದೆಯೇ ತಿಳಿಸಿದಂತೆ 2018ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ ಬಿಜೆಪಿಯಲ್ಲಿ ಸಕ್ರಿಯ ರಾಜಕೀಯದಲ್ಲಿ ಮುಂದುವರಿಯುತ್ತೇನೆ ಎಂದರು.

ಹಣದ ಹೊಳೆ ಹರಿಸಿದರು
ಉಪ ಚುನಾವಣೆಯಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸುವ ವಿಶ್ವಾಸ ಹೊಂದಿದ್ದೆ. ಆದರೆ ಕೊನೆಯ 2 ದಿನ ಕಾಂಗ್ರೆಸ್‌ನವರು ಹಣದ ಹೊಳೆಯನ್ನೇ ಹರಿಸಿದರು. ಆದರೂ ಕನಿಷ್ಠ 5 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವ ಭರವಸೆ ಇತ್ತು. ಆದರೆ ಕ್ಷೇತ್ರದ ಮತದಾರರು ತಮ್ಮನ್ನು ಬೆಂಬಲಿಸಲಿಲ್ಲ. ಈ ಉಪಚುನಾವಣೆ ತನ್ನ ಹಾಗೂ ಸಿದ್ದರಾಮಯ್ಯ ನಡುವಿನ ಚುನಾವಣೆ ಎಂದಿದ್ದೆ. ಇದನ್ನು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ ಗೆಲುವು ಎಂದು ಒಪ್ಪುತ್ತೇನೆ. ಆದರೆ ಯಾವ ರೀತಿಯ ಗೆಲುವು ಸಾಧಿಸಿದರು ಎಂಬ ಬಗ್ಗೆ ಸಿದ್ದರಾಮಯ್ಯ ಆತ್ಮಸಾಕ್ಷಿಗೆ ಅನುಗುಣವಾಗಿ ಮಾತನಾಡಲಿ ಎಂದರು.

ಚಿರಋಣಿ
ಉಪ ಚುನಾವಣೆಯ ಸೋಲಿನಿಂದ ದುಃಖವಾಗಿಲ್ಲ. ಜನಾದೇಶಕ್ಕೆ ತಲೆ ಬಾಗುತ್ತೇನೆ. ತನ್ನನ್ನು ಬೆಂಬಲಿಸಿರುವ ಸಾವಿರಾರು ಮತದಾರರಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಈ ಸೋಲು ತಮ್ಮ ಹಾಗೂ ಕ್ಷೇತ್ರದ ಮತದಾರರ ಸ್ವಾಭಿಮಾನಕ್ಕೆ ಉಂಟಾದ ಸೋಲಾಗಿದೆ ಎಂದರು.

ಬಿಜೆಪಿಯಲ್ಲಿ ಸಕ್ರಿಯನಾಗಿರುವೆ
ಉಪ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದ್ದರೂ ಮುಂದಿನ ಚುನಾವಣೆಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ತಾನು ಚುನಾವಣಾ ರಾಜಕೀಯದಿಂದ ಹಿಂದೆ ಸರಿದರೂ ಬಿಜೆಪಿಯಲ್ಲಿ ಸಕ್ರಿಯವಾಗಿ ಮುಂದುವರಿಯುತ್ತೇನೆ ಎಂದು ಶ್ರೀನಿವಾಸ ಪ್ರಸಾದ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


Trending videos

Back to Top