CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಜಾರಕಿಹೊಳಿ ಸಹೋದರರ "ಕಾಳಗ' ಕೆಪಿಸಿಸಿಗೆ ತಲೆನೋವು

ಬೆಳಗಾವಿ: ಅತ್ತ ರಾಜ್ಯದಲ್ಲಿ ಮತ್ತೂಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನಾಯಕರು ಹೆಣಗಾಡುತ್ತಿದ್ದರೆ  ಇತ್ತ ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರ ಕಾಳಗ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಹಾಗೂ ಆತಂಕ ಮೂಡಿಸಿದೆ. 

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದ ಸ್ಪರ್ಧೆ ವಿಚಾರದಲ್ಲಿ ಹಾಲಿ ಶಾಸಕ ಸತೀಶ್‌ ಜಾರಕಿಹೊಳಿ ಹಾಗೂ ಅವರ ಸಹೋದರ ಲಖನ್‌ ಜಾರಕಿಹೊಳಿ ನಡುವೆ ನಡೆಯುತ್ತಿರುವ ಮಾತಿನ ಸಮರ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ವಲಯದಲ್ಲಿ ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಸತೀಶ್‌ ಜಾರಕಿಹೊಳಿ-ಲಖನ್‌ ಜಾರಕಿಹೊಳಿ ಮಾತಿನ ಸಮರದ ನಡುವೆ ಮತ್ತೂಬ್ಬ ಸಹೋದರ ಸಚಿವ ರಮೇಶ್‌ ಜಾರಕಿಹೊಳಿ ನೀಡುತ್ತಿರುವ ಹೇಳಿಕೆ, ರಾಜ್ಯ ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷರೂ ಆಗಿರುವ ಲಕ್ಷ್ಮಿ ಹೆಬ್ಟಾಳ್ಕರ್‌ ಅವರ ಮೌನ ರಣತಂತ್ರ,  ಈ ಎಲ್ಲ ಬೆಳವಣಿಗೆಗಳಿಂದ ಪಕ್ಷದ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ದೂರು ಕೆಪಿಸಿಸಿಗೆ ತಲುಪಿದೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರಬಲ ನೆಲೆ ಹೊಂದಿರುವ ಕಾಂಗ್ರೆಸ್‌ ಪಕ್ಷದಲ್ಲಿ ಚುನಾವಣೆ ಹೊಸ್ತಿಲಲ್ಲಿ ನಡೆಯುತ್ತಿರುವ  ಈ ವಿದ್ಯಮಾನಗಳಿಂದ ದಿನಕ್ಕೊಂದು ಗಾಳಿ ಸುದ್ದಿ ಹಬ್ಬುವಂತಾಗಿದೆ.  ಇಷ್ಟರ ನಡುವೆಯೂ, ಇದೆಲ್ಲವೂ ಪೂರ್ವನಿಯೋಜಿತ, ಚುನಾವಣೆ ಸಂದರ್ಭದಲ್ಲಿ ದಿಢೀರ್‌ ಬೆಳವಣಿಗೆಗಳು ಸಂಭವಿಸಿ ನಂತರ ಎಲ್ಲವೂ ಸರಿಹೋಗುತ್ತದೆ.

ಚುನಾವಣೆ ಫ‌ಲಿತಾಂಶ ಹೀಗೇ ಬರಬೇಕು ಎಂಬ ಉದ್ದೇಶದಿಂದಲೇ ಇವೆಲ್ಲವೂ ನಡೆಯುತ್ತಿವೆ. ಅಂತಿಮವಾಗಿ ಜಿಲ್ಲೆಯ ಅಡೆjಸ್ಟ್‌ಮೆಂಟ್‌ ರಾಜಕಾರಣದ ಪ್ರತಿಫ‌ಲ ಫ‌ಲಿತಾಂಶದಲ್ಲಿ ಕಾಣಿಸಿಕೊಳ್ಳುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜಾರಕಿಹೊಳಿ ಸಹೋದರರ ನಡುವಿನ ಮಾತಿನ ಸಮರ ಯಾವ ಮಟ್ಟಕ್ಕೆ ಹೋಗಿದೆ ಎಂದರೆ  ಲಖನ್‌, "ಬಾರ್‌, ಕ್ಲಬ್‌ ಮತ್ತು ಬ್ಲಾಕ್‌ವೆುàಲ್‌ ಸಂಸ್ಕೃತಿ ಸತೀಶ ಜಾರಕಿಹೊಳಿ ಅವರಿಗೆ ಮಾತ್ರ ಗೊತ್ತು. ನಮ್ಮ ಬಗ್ಗೆ ತಿಳಿದುಕೊಳ್ಳಲು ಯುವಕರು ಬಾರ್‌ ಅಥವಾ ಕ್ಲಬ್‌ಗಳಿಗೆ ಹೋಗಬೇಕಾಗಿಲ್ಲ. ಯಮಕನಮರಡಿ ಕ್ಷೇತ್ರದ ಜನರ ಬಳಿಗೆ ಹೋಗಿ ಕೇಳಿದರೆ ಗೊತ್ತಾಗುತ್ತದೆ.  ಒಂಬತ್ತು ವರ್ಷಗಳ ಅವಧಿಯಲ್ಲಿ ಜನರು ಎಲ್ಲವನ್ನೂ ಕಂಡಿದ್ದಾರೆ ಎಂಬುದು ಲಖನ್‌ ಮಾತು. ಎರಡು ಚುನಾವಣೆಗಳಲ್ಲಿ ನಾನೇ ಸತೀಶ ಅವರಿಗೆ ಈ ಕ್ಷೇತ್ರ ಬಿಟ್ಟುಕೊಟ್ಟೆ. 

ಈ ಬಾರಿ ನಾನೇ ನಿಲ್ಲಬೇಕು ಎಂಬುದು ಯಮಕನಮರಡಿ ಕ್ಷೇತ್ರದ ಜನರ ಆಸೆ. ಶಾಸಕರ ವಿರುದ್ಧ ನಮ್ಮಲ್ಲೂ ಬಹಳ ದೊಡ್ಡ ಅಸ್ತ್ರಗಳಿವೆ' ಎನ್ನುತ್ತಾರೆ. ಇದಕ್ಕೆ ತಿರುಗೇಟು ನೀಡಿರುವ ಸತೀಶ್‌, "ಯಮಕನಮರಡಿ ಕ್ಷೇತ್ರದಿಂದ ನಾನು ನಿಲ್ಲುತ್ತೇನೆ ಎಂದು ಹೇಳಲು ಲಖನ್‌ ಜಾರಕಿಹೊಳಿ ಯಾರು? ಅವರೇನು ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆಯೇ? ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆಯೇ? ಕ್ಷೇತ್ರದ ಜನರಲ್ಲಿ ಗೊಂದಲ ಉಂಟು ಮಾಡಲು ಈ ರೀತಿ ಅಸಂಬದ್ಧ ಹೇಳಿಕೆ ನೀಡುವುದು ಸರಿಯಲ್ಲ. ಲಖನ್‌ ಏನು, ಯಾವ ರೀತಿ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಪದೇ ಪದೇ ಅದನ್ನು ಹೇಳಬೇಕಿಲ್ಲ' ಎಂದು ಕಿಡಿಕಾರುತ್ತಾರೆ.   

ಇವೆಲ್ಲವನ್ನೂಗಮನಿಸಿದರೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ, ಎಪಿಎಂಸಿ ಚುನಾವಣೆ, ಆದಾಯ ತೆರಿಗೆ ದಾಳಿ ಘಟನಾವಳಿಗಳು ಜಿಲ್ಲಾ ಕಾಂಗ್ರೆಸ್‌ ಹಾಗೂ ಜಾರಕಿಹೊಳಿ ಕುಟುಂಬದಲ್ಲಿ ಒಂದಷ್ಟು ಬಿರುಕು ಮೂಡಿಸಿರುವವಂತೂ ಹೌದು.  ಈ ಮಧ್ಯೆ,  ಜಿಲ್ಲಾ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ. ಪಕ್ಷ ಕಟ್ಟಿದವರಿಗೆ ಕಿಮ್ಮತ್ತಿಲ್ಲ. ಸ್ವತಃ ಸಚಿವ ರಮೇಶ ಜಾರಕಿಹೊಳಿ ನನ್ನನ್ನು, ಸಂಸದ ಪ್ರಕಾಶ ಹುಕ್ಕೇರಿ, ಶಾಸಕ ಅಶೋಕ ಪಟ್ಟಣ ಹಾಗೂ ಫಿರೋಜ ಸೇಠ ಅವರನ್ನು ಸೋಲಿಸಲು ಕುತಂತ್ರ ಮಾಡುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ತೀವ್ರ ಹೊಡೆತ ಬೀಳಲಿದೆ. 

ಈ ಎಲ್ಲ ಅಂಶವನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದು ಜೂ. 1ರೊಳಗೆ ಎಲ್ಲವನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದ್ದೇವೆ. ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ. ನಮ್ಮ ಮನವಿಗೆ ಹೈಕಮಾಂಡ್‌ ಸ್ಪಂದಿಸದಿದ್ದರೆ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ನಾನು ಜಿಲ್ಲೆಗೆ ಸೀಮಿತವಾದ ನಾಯಕನಲ್ಲ. ರಾಜ್ಯಾದ್ಯಂತ ನನ್ನ ಕಾರ್ಯಕರ್ತರು ಹಾಗೂ ಅಭಿಮಾನಿಗಳಿದ್ದಾರೆ. 

ನನಗೆ ನೋವು ಅಥವಾ ಅವಮಾನವಾದರೆ ಅವರಿಗೂ ಆದಂತೆ ಎಂದೂ ಸತೀಶ ಜಾರಕಿಹೊಳಿ ಎಚ್ಚರಿಕೆಯನ್ನೂ ನೀಡಿದ್ದಾರೆ.  ಕೆಲ ತಿಂಗಳಿಂದ ಸಚಿವರು ಹಾಗೂ ಅವರ ಆಪ್ತರು ನನಗೆ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ನಮ್ಮ ಕಾರ್ಯಕರ್ತರು ಹಾಗೂ ಜಿಲ್ಲಾ ಪಂಚಾಯತ್‌ ಸದಸ್ಯರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ಹಲವು ವರ್ಷಗಳಿಂದ ಪಕ್ಷ ಕಟ್ಟಿದ ನನಗೆ ಇದನ್ನು ಸಹಿಸಿಕೊಂಡು ಸುಮ್ಮನೆ ಕೂಡಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ಪಕ್ಷದ ಹೈಕಮಾಂಡ್‌ಗೆ ಪತ್ರ ಬರೆದಿದ್ದೇನೆ ಎಂದು ಹೇಳುತ್ತಾರೆ. ಹೊಸ ಲೆಕ್ಕಾಚಾರ ಒಂದು ಮೂಲದ ಪ್ರಕಾರ,ಸತೀಶ ಜಾರಕಿಹೊಳಿ ಅವರನ್ನು ಜಿಲ್ಲೆಯಿಂದ ಅಥವಾ ಯಮಕನಮರಡಿ ಕ್ಷೇತ್ರದಿಂದ ಹೊರಗಡೆ ಕಳಿಸುವುದು ಕಾಂಗ್ರೆಸ್‌ನ ಒಂದು ಗುಂಪಿನ ಲೆಕ್ಕಾಚಾರ. ಹೀಗಾಗಿ ಸಚಿವ ರಮೇಶ ಜಾರಕಿಹೊಳಿ, ಲಖನ್‌ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಟಾಳಕರ ದಿನಕ್ಕೊಂದು ದಾಳ ಉರುಳಿಸುತ್ತಿದ್ದಾರೆ.ಸತೀಶ ಜಾರಕಿಹೊಳಿ ಮುಂದಿನ ಚುನಾವಣೆಯಲ್ಲಿ ಖಾನಾಪುರ ಇಲ್ಲವೇ ರಾಯಚೂರು ಜಿಲ್ಲೆಯಿಂದ ಸ್ಪರ್ಧೆ ಮಾಡುತ್ತಾರೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದು ಇದೇ ಲೆಕ್ಕಾಚಾರದಲ್ಲಿ ಎಂದು ಹೇಳಲಾಗಿದೆ. ಆದರೆ,  ಇದಕ್ಕೆ ಸತೀಶ್‌ ಜಾರಕಿಹೊಳಿ ತಮ್ಮದೇ ಧಾಟಿಯಲ್ಲಿ ತಿರುಗೇಟು ಸಹ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ರೀತಿಯ ರಾಜಕೀಯ ಬೆಳವಣಿಗೆಗಳಿಗೆ ಇದು ದಾರಿ ಮಾಡಿಕೊಡುತ್ತದೆಯೋ ಕಾದು ನೋಡಬೇಕಿದೆ.

ಗುಂಪುಗಾರಿಕೆ
ಜಿಲ್ಲಾ ಕಾಂಗ್ರೆಸ್‌ನಲ್ಲಿ ಮೂರ್‍ನಾಲ್ಕು ಗುಂಪುಗಳಿವೆ. ಸತೀಶ್‌ ಜಾರಕಿಹೊಳಿ, ರಮೇಶ್‌ ಜಾರಕಿಹೊಳಿ, ಲಕ್ಷ್ಮಿ ಹೆಬ್ಟಾಳ್ಕರ್‌, ಪ್ರಕಾಶ್‌ ಹುಕ್ಕೇರಿ ಹೀಗೆ ಪ್ರತಿಯೊಬ್ಬ ನಾಯಕರು ತಮ್ಮದೇ ಆದ ಗುಂಪು ಕಟ್ಟಿಕೊಂಡಿದ್ದಾರೆ. ಆಗ್ಗಾಗ್ಗೆ  ಈ ಗುಂಪುಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇರುತ್ತದೆ. ಕೆಲವೊಮ್ಮೆ ಅದು ಬಹಿರಂಗವಾಗಿಯೂ ಮಾತಿನ ಸಮರಕ್ಕೆ ತಿರುಗುತ್ತಿದೆ. ಒಟ್ಟಾರೆ ಬೆಳವಣಿಗೆ ಕಾಂಗ್ರೆಸ್‌ ವಲಯದಲ್ಲಿ ಇರುಸು ಮುರುಸು ಉಂಟಾಗಿರುವುದಂತೂ ನಿಜ.

- ಕೇಶವ ಆದಿ

ಇಂದು ಹೆಚ್ಚು ಓದಿದ್ದು

ಷಷ್ಠಿ ಮಹೋತ್ಸವದ ಅಂಗವಾಗಿ ನೂತನ ಸಭಾ ವೇದಿಕೆಯನ್ನು ಉದ್ಘಾಟಿಸಲಾಯಿತು.

Nov 24, 2017 02:36pm
Back to Top