CONNECT WITH US  

ನಕಲಿ ಅಂಕ ಪಟ್ಟಿ ತಡೆಗೆ ಎನ್‌ಎಫ್ ಸಿ ತಂತ್ರಜ್ಞಾನ!

ಅತ್ಯಾಧುನಿಕ ವ್ಯವಸ್ಥೆಯ ಮೊರೆ ಹೋದ ಉನ್ನತ ಶಿಕ್ಷಣ ಇಲಾಖೆ

ಬೆಂಗಳೂರು: ನಕಲಿ ಅಂಕಪಟ್ಟಿ ಹಾವಳಿಗೆ ಬ್ರೇಕ್‌ ಹಾಕಲು ಉನ್ನತ ಶಿಕ್ಷಣ ಇಲಾಖೆ ಹೊಸ ಅಸ್ತ್ರ ಬಳಕೆಗೆ ಮುಂದಾಗಿದೆ. ಹೊಸದಾಗಿ ಕಂಡು ಹಿಡಿದಿರುವ ಎನ್‌ಎಫ್ಸಿ (ನೀಯರ್‌ ಫೀಲ್ಡ್‌ ಕಮ್ಯುನಿಕೇಶನ್‌) ತಂತ್ರಜ್ಞಾನ ಆಧಾರಿತ ಹಾಗೂ ತಾಂತ್ರಿಕವಾಗಿ ಸುರಕ್ಷಿತವಾಗಿರುವ ಇ-ಮೈಕ್ರೋಚಿಪ್‌ ಅಳವಡಿಸಿರುವ ಅಂಕ ಪಟ್ಟಿಗಳನ್ನು ನೀಡಲು ನಿರ್ಧರಿಸಿದೆ.

ಸುರಕ್ಷಿತ ತಂತ್ರಜ್ಞಾನ ಹೊಂದಿರುವ ಮೈಕ್ರೊ ಚಿಪ್‌ ಅಳವಡಿಸಿರುವ ಮಾರ್ಕ್ಸ್ ಕಾರ್ಡ್‌ಗಳನ್ನು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿರುವ ಎಲ್ಲ ವಿಶ್ವ ವಿದ್ಯಾಲಯಗಳು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಉನ್ನತ ಶಿಕ್ಷಣ ಇಲಾಖೆ ಎಲ್ಲ ವಿವಿಗಳಿಗೂ ಆದೇಶ ಹೊರಡಿಸಿದೆ.

ಏನಿದು ಚಿಪ್‌?
ವಿದ್ಯಾರ್ಥಿಯ ಮಾಹಿತಿಯುಳ್ಳ ಅಂಕ ಪಟ್ಟಿಯನ್ನು ಸಿದ್ದಪಡಿಸಿ ಎನ್‌ಎಫ್ಸಿ ಇ-ಚಿಪ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಆ ಚಿಪ್‌ನ್ನು ಸಂಬಂಧ ಪಟ್ಟ ವಿದ್ಯಾರ್ಥಿಯ ಮಾರ್ಕ್ಸ್ ಕಾರ್ಡ್‌ನಲ್ಲಿಯೇ ಅಳವಡಿಸಲಾಗುತ್ತದೆ. ಯಾರು ಎಲ್ಲಿ ಬೇಕಾದರೂ  ತನ್ನ ಆಂಡ್ರಾಯ್ಡ ಮೊಬೈಲ್‌ ಫೋನ್‌ ಮೂಲಕ ಎನ್‌ಎಫ್ಸಿ ತಂತ್ರಜ್ಞಾನ ಬಳಸಿ ಉಚಿತವಾಗಿ ನೋಡಬಹುದು. ವಿದ್ಯಾರ್ಥಿಯ ಮಾರ್ಕ್ಸ್ಗಳ ಮಾಹಿತಿ ಇ-ಚಿಪ್‌ನಲ್ಲಿ ಸಂಗ್ರಹವಾಗಿರುವುದರಿಂದ ಅದನ್ನು ಬೇರೆಯವರು ಬದಲಾಯಿಸಿ ನಕಲು ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೇ ಈ ತಂತ್ರಜ್ಞಾನ ಅಳವಡಿಸಿಕೊಂಡ ಮೇಲೆ ನಕಲಿ ಅಂಕ ಪಟ್ಟಿ ತಯಾರಿಸಲು ಅವಕಾಶ ಇಲ್ಲದಂತಾಗುತ್ತದೆ. ಒಂದು ವೇಳೆ ಅಂಕಪಟ್ಟಿ ಕಳೆದು ಹೋದರೂ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಯ ಮಾಹಿತಿ ನೀಡಿದರೆ, ವಿಶ್ವ ವಿದ್ಯಾಲಯದಿಂದ ಮಾತ್ರ ಮತ್ತೂಂದು ಅಂಕ ಪಟ್ಟಿ ನೀಡಲು ಸಾಧ್ಯವಾಗುತ್ತದೆ.

ಕಡಿಮೆ ಖರ್ಚು: ಯುಜಿಸಿ ನಿಯಮಗಳ ಪ್ರಕಾರ ಪ್ರತಿಯೊಂದು ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳಿಗೆ ಒಂದು ಮಾರ್ಕ್ಸ್ ಕಾರ್ಡ್‌ ನೀಡಲು ಅಂಕ ಪಟ್ಟಿ  ಪೇಪರ್‌ ಖರೀದಿ, ಮುದ್ರಣ ಮತ್ತು ಸಾರಿಗೆ ಸೇರಿ 100 ರಿಂದ 130 ರೂಪಾಯಿ ಪಡೆಯುತ್ತವೆ. ಹೊಸ ತಂತ್ರಜ್ಞಾನದ ಚಿಪ್‌ ಅಳವಡಿತ ಸುಪೀರಿಯರ್‌ ಕ್ವಾಲಿಟಿ (300 ಜಿಎಸ್‌ಎಂ) ಹಾಗೂ ಸುರಕ್ಷಿತವಾದ ಕಾಗದದ ಬಳಕೆ ಮಾಡಿ, ಒಂದು ಮಾರ್ಕ್ಸ್ ಕಾರ್ಡ್‌ಗೆ 85 ರಿಂದ 90 ರೂಪಾಯಿ ವೆಚ್ಚವಾಗಲಿದೆ. ಇ-ಚಿಪ್‌ ತಂತ್ರಜ್ಞಾನ ಅಳವಡಿಸಿಕೊಂಡರೆ, ವಿದ್ಯಾರ್ಥಿಗಳಿಗೆ ಯಾವುದಾದರೂ ದಾಖಲೆ ಪರಿಶೀಲನೆಗೆ ಆನ್‌ಲೈನ್‌ ಮೂಲಕವೇ ನೀಡಲು ಅವಕಾಶ ದೊರೆಯುತ್ತದೆ.

ಈಗಾಗಲೇ  ಗುಲಬರ್ಗಾ ವಿಶ್ವ ವಿದ್ಯಾಲಯ, ದೆಹಲಿಯ ಏಮ್ಸ್‌, ಬೆಂಗಳೂರಿನ ಐಐಐಟಿ ಸಂಸ್ಥೆ, ಗುಜರಾತ್‌ ಮತ್ತು ಮಹಾರಾಷ್ಟ್ರ  ರಾಜ್ಯಗಳ ನರ್ಸಿಂಗ್‌ ಕೌನ್ಸಿಲ್‌ಗ‌ಳೂ ಕೂಡ ಈ ಪದ್ದತಿಯ ಮಾರ್ಕ್ಸ್ ಕಾರ್ಡ್‌ ಅಳವಡಿಸಿಕೊಂಡಿವೆ. ರಾಜ್ಯದ ಕೃಷಿ ವಿಶ್ವ ವಿದ್ಯಾಲಯಗಳು, ಮೈಸೂರಿನ ಜೆಎಸ್‌ಎಸ್‌ ವಿಶ್ವ ವಿದ್ಯಾಲಯಗಳು ಹೊಸ ತಂತ್ರಜ್ಞಾವನ್ನು ಅಳವಡಿಸಿಕೊಂಡಿದ್ದು, ನಕಲಿ ಅಂಕ ಪಟ್ಟಿಯ ಹಾವಳಿಗೆ ವಿದಾಯ ಹೇಳಿವೆ.

ನಕಲಿ ದಂಧೆಕೋರರ ಹಾವಳಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೂತನ ಎನ್‌ಎಫ್ಸಿ ತಂತ್ರಜ್ಞಾನವುಳ್ಳ ಇ ಚಿಪ್‌ ಮಾರ್ಕ್ಸ್ ಕಾರ್ಡ್‌ ವ್ಯವಸ್ಥೆ ಜಾರಿಗೆ ಬರದಂತೆ ನಕಲಿ ಮಾರ್ಕ್ಸ್ ಕಾರ್ಡ್‌ ದಂಧೆಕೋರರು ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶ್ವ ವಿದ್ಯಾಲಯಗಳು ಇ ಚಿಪ್‌ ಮಾರ್ಕ್ಸ್ ಕಾರ್ಡ್‌ ವ್ಯವಸ್ಥೆ ಅಳವಡಿಸಿಕೊಳ್ಳದಂತೆ ಕುಲಪತಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ಏನಿದು ಎನ್‌ಎಫ್ ಸಿ?
ಇಂಗ್ಲಿಷಿನಲ್ಲಿಯೇ ಹೇಳುವುದಾದರೆ ನಿಯರ್‌ ಫೀಲ್ಡ್‌ ಕಮ್ಯೂನಿಕೇಶನ್‌. ಇದೊಂದು ಸ್ಟೋರೇಜ್‌ ಮಾದರಿಯ ಫೈಲ್‌ ಅಥವಾ ಮಾಹಿತಿ ವರ್ಗಾವಣೆಯ ಎಲೆಕ್ಟ್ರಾನಿಕ್‌ ಚಿಪ್‌. ಸದ್ಯ ಸ್ಯಾಮ್‌ಸಂಗ್‌ ಪೇ, ಆ್ಯಂಡ್ರಾಯ್ಡ ಪೇ ಮತ್ತು ಆ್ಯಪಲ್‌ ಪೇನಲ್ಲಿ ಬಳಕೆಯಾಗುತ್ತಿರುವುದು ಇದೇ ತಂತ್ರಜ್ಞಾನವೇ. ಈಗ ಬರುತ್ತಿರುವ ಹೈಯರ್‌ ಎಂಡ್‌ ಸ್ಯಾಮ್‌ಸಂಗ್‌ ಫೋನ್‌ ಅನ್ನು ಕಾರ್ಡ್‌ ಸ್ವೆ„ಪ್‌ ಯಂತ್ರದ ಬಳಿ ಇಟ್ಟ ತಕ್ಷಣ ಹಣ ಪಾವತಿ ವ್ಯವಸ್ಥೆ ಬರುತ್ತದೆಯಲ್ಲ ಅದೇ ಇದು. ಸದ್ಯ ಎನ್‌ಎಫ್ಸಿ ಟ್ಯಾಗ್‌ ಎಂಬ ಚಿಪ್‌ಗ್ಳು ಸಿಗುತ್ತಿದ್ದು, ಇದರಲ್ಲಿ ನಿಮ್ಮ ಸ್ಮಾರ್ಟ್‌ ಫೋನ್‌ನ ಸಂಪೂರ್ಣ ನಿಯಂತ್ರಣವನ್ನೂ ಮಾಡಬಹುದು. ತೀರಾ ಸರಳವಾಗಿ ಹೇಳಬೇಕೆಂದರೆ, ಬ್ಲೂಟೂಥ್‌ನ ಬದಲಿರೂಪವಷ್ಟೇ. ಆದರೆ, ಜೋಡಣೆ ವ್ಯವಸ್ಥೆ ಕೇಳಲ್ಲ. ಎರಡು ಎನ್‌ಎಫ್ಸಿ ಆಧರಿತ ಸ್ಮಾರ್ಟ್‌ಫೋನ್‌ ಅಥವಾ ಸ್ಮಾರ್ಟ್‌ಫೋನ್‌-ಎನ್‌ಎಫ್ಸಿ ಚಿಪ್‌ ಅನ್ನು ಹತ್ತಿರಕ್ಕೆ ತೆಗೆದುಕೊಂಡು ಹೋದಾಗ ಮಾತ್ರ ಕೆಲಸ ಮಾಡುತ್ತೆ.

ವಿಶ್ವ ವಿದ್ಯಾಲಯಗಳಲ್ಲಿ ನಕಲಿ ಮಾರ್ಕ್ಸ್ಕಾರ್ಡ್‌, ನಕಲಿ ಪಿಎಚ್‌ಡಿ ಸರ್ಟಿಫಿಕೇಟ್‌ ಹಾವಳಿ ಹೆಚ್ಚಾಗಿತ್ತು. ಕೆಲವು ಅನಧಿಕೃತ ಸಂಸ್ಥೆಗಳು ಮಾರ್ಕ್ಸ್ ಕಾರ್ಡ್‌ ನೀಡುತ್ತವೆ. ವಾಸ್ತವದಲ್ಲಿ ಆ ಸಂಸ್ಥೆಯೇ ಇರುವುದಿಲ್ಲ. ಹೀಗಾಗಿ ಮಾರ್ಕ್ಸ್ ಕಾರ್ಡ್‌ಗಳನ್ನು ಮೈಕ್ರೋ ಚಿಪ್‌ನಲ್ಲಿ ಅವಳವಡಿಸುವುದರಿಂದ ವಿದ್ಯಾರ್ಥಿಗಳಿಗೂ ಸರ್ಕಾರಕ್ಕೂ ಅನುಕೂಲ ಆಗಲಿದೆ. ಹೀಗಾಗಿ ಎಲ್ಲ ವಿವಿಗಳು ಎನ್‌ಎಫ್ಸಿ ತಂತ್ರಜ್ಞಾನದ ಮೈಕ್ರೋ ಚಿಪ್‌ ಅಳವಡಿಸಿಕೊಳ್ಳುವಂತೆ ಆದೇಶಿಸಲಾಗಿದೆ.
- ಬಸವರಾಜ್‌ ರಾಯರೆಡ್ಡಿ, ಉನ್ನತ ಶಿಕ್ಷಣ ಸಚಿವ

ಇ ಚಿಪ್‌ ಮಾರ್ಕ್ಸ್ ಕಾರ್ಡ್‌ ವ್ಯವಸ್ಥೆಯನ್ನು ನಾವು ಈಗಾಗಲೇ ಅಳವಡಿಸಿಕೊಂಡಿದ್ದೇವೆ. ನಕಲಿ ಮಾರ್ಕ್ಸ್ ಕಾರ್ಡ್‌ ಮಾಡುವುದನ್ನು ತಪ್ಪಿಸಲು ಇದೊಂದು ಒಳ್ಳೆಯ ವ್ಯವಸ್ಥೆ. ನಮ್ಮ ವಿಶ್ವ ವಿದ್ಯಾಲಯದಲ್ಲಿ ಈ ವ್ಯವಸ್ಥೆ ಜಾರಿಗೆ ತಂದ ಮೇಲೆ ಯಾವುದೇ ನಕಲಿ ಮಾರ್ಕ್ಸ್ ಕಾರ್ಡ್‌ ಮಾಡಿರುವ ಆರೋಪ ಕೇಳಿ ಬಂದಿಲ್ಲ. ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಮಾರ್ಕ್ಸ್ ಕಾರ್ಡ್‌ ದೊರೆಯುವುದರಿಂದ ದಾಖಲಾತಿ ಸಲ್ಲಿಸುವ ಸಂದರ್ಭದಲ್ಲಿ ಹೆಚ್ಚು ಅನುಕೂಲವಾಗುತ್ತದೆ.
- ಡಾ.ಡಿ. ಪಿ. ಬಿರಾದಾರ್‌, ಧಾರವಾಡ ಕೃಷಿ ವಿವಿ ಕುಲಪತಿ

- ಶಂಕರ ಪಾಗೋಜಿ

Trending videos

Back to Top