CONNECT WITH US  

ಸಿಎಂ-ಪರಂ ಸಂಘರ್ಷ ಶಮನಕ್ಕೆ ಸೂತ್ರ

ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ, ಅನ್ಯ ಶಾಸಕರ ಕ್ಷೇತ್ರದಲ್ಲಿ ಡಾ.ಜಿ.ಪರಮೇಶ್ವರ್‌ ಪ್ರವಾಸ

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾತ್ರೆ ನಡೆಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೆಶ್ವರ್‌ ನಡುವೆ ತಲೆದೋರಿದ್ದ ಭಿನ್ನಾಭಿಪ್ರಾಯಗಳನ್ನು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ
ವೇಣುಗೋಪಾಲ್‌ ಮಧ್ಯಪ್ರವೇಶಿಸಿ ಸರಳ ಸಂಧಾನ ಸೂತ್ರದ ಮೂಲಕ ಶಮನಗೊಳಿಸಿದ್ದಾರೆ. 

ಕಾಂಗ್ರೆಸ್‌ ಶಾಸಕರಿರುವ ವಿಧಾನಸಭೆ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ಹಾಗೂ ಪಕ್ಷದ ಶಾಸಕರಿಲ್ಲದ ಕ್ಷೇತ್ರಗಳಲ್ಲಿ ಕೆಪಿಸಿಸಿ ಅಧ್ಯಕ್ಷರ ಮುಂದಾಳತ್ವದಲ್ಲಿ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರಾದ ಸಚಿವ ಡಿ.ಕೆ ಶಿವಕುಮಾರ್‌ ಒಡಗೂಡಿ ಪ್ರವಾಸ ನಡೆಸುವಂತೆ ತಿಳಿಸಿದ್ದಾರೆ.

ಮಂಗಳವಾರ ತಡ ರಾತ್ರಿ ನಡೆದ ಸಭೆಯಲ್ಲಿ ಪಕ್ಷದ ಇಬ್ಬರು ನಾಯಕರ ಭಿನ್ನಾಭಿಪ್ರಾಯದ ಬಗ್ಗೆ ಸುದೀರ್ಘ‌ ಚರ್ಚೆ ನಡೆಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಸರ್ಕಾರಿ ಯಾತ್ರೆ ಜೊತೆಗೆ ಹೋಗಲು ಸಾಧ್ಯವಾಗದಿದ್ದರೆ ಮಾಧ್ಯಮಗಳ ಬಳಿ ತೆರಳದೆ ಸುಮ್ಮನಿರುವಂತೆ ಪರಮೇಶ್ವರ್‌ಗೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಉಸ್ತುವಾರಿ ವೇಣುಗೋಪಾಲ್‌ ಸೂತ್ರದ ಪ್ರಕಾರ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರಿ ಪ್ರವಾಸ ಸಂದರ್ಭದಲ್ಲಿ
ಭೇಟಿ ನೀಡದಿರುವ ,ಕಾಂಗ್ರೆಸ್‌ ಶಾಸಕರಿಲ್ಲದ ಕ್ಷೇತ್ರಗಳಲ್ಲಿ ಪಕ್ಷದಿಂದ ಅಧ್ಯಕ್ಷರ ನೇತೃತ್ವದಲ್ಲಿ ಪ್ರತ್ಯೇಕ ಪ್ರವಾಸ
ನಡೆಯಲಿದೆ. ಇಬ್ಬರು ಕಾರ್ಯಾಧ್ಯಕ್ಷರು ಹಾಗೂ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾದ ಇಂಧನ ಸಚಿವ ಡಿ.ಕೆ ಶಿವಕುಮಾರ್‌ ಈ ಪ್ರವಾಸದಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ ಸಾಥ್‌ ನೀಡಲಿದ್ದಾರೆ.

ಸರ್ಕಾರಿ ಕಾರ್ಯಕ್ರಮವಾಗಿ ಮುಖ್ಯಮಂತ್ರಿಗಳು ಕೈಗೊಳ್ಳುವ ಪ್ರವಾಸಕ್ಕೆ ಪಕ್ಷದ ಅಧ್ಯಕ್ಷ ಡಾ.ಪರಮೇಶ್ವರ್‌ ತೆರಳುವಂತಿಲ್ಲ. ಆದರೆ, ಪಕ್ಷದ ಕಾರ್ಯಕ್ರಮವಾಗಿ ಕೈಗೊಳ್ಳುವ ಪ್ರವಾಸದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಬಹುದಾಗಿದೆ. ಸಿಎಂ ಅವರ ಸರ್ಕಾರಿ ಪ್ರವಾಸದಲ್ಲಿ ಪಕ್ಷದ ಅಧ್ಯಕ್ಷರು ಪಾಲ್ಗೊಂಡರೆ ತಪ್ಪು ಸಂದೇಶ ಹೋಗುತ್ತದೆ ಎನ್ನುವ ಕಾರಣಕ್ಕೆ ಪರಮೇಶ್ವರ್‌ ಅವರನ್ನು ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಪ್ರವಾಸದಿಂದ ದೂರವಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿಯವರ ಸರ್ಕಾರಿ ಯಾತ್ರೆಗೆ ಅಪಸ್ವರ ಎತ್ತಿದ್ದ ಪರಮೇಶ್ವರ್‌, ಈ ಸೂತ್ರದಿಂದ ಖುಷಿಯಾಗಿದ್ದಾರೆಂದು ಹೇಳಲಾಗಿದೆ. ಡಿಸೆಂಬರ್‌ ಕೊನೆ ವಾರದಲ್ಲಿ ಪ್ರವಾಸ ನಡೆಸಲು ವೇಣುಗೋಪಾಲ್‌ ಗ್ರೀನ್‌ ಸಿಗ್ನಲ್‌ ನೀಡಿದ್ದು, ಮುಖ್ಯಮಂತ್ರಿ ಪ್ರವಾಸ ಮಾಡುವ ಕ್ಷೇತ್ರಗಳನ್ನು ಹೊರತು ಪಡಿಸಿ ವಿಶೇಷವಾಗಿ ಕಾಂಗ್ರೆಸ್‌ ಶಾಸಕರಿಲ್ಲದ ಕ್ಷೇತ್ರಗಳಲ್ಲಿ ಪ್ರವಾಸ ನಡೆಸಿ, ಪಕ್ಷದ ಸ್ಥಿತಿಗತಿ ಮತ್ತು ಆಕಾಂಕ್ಷಿಗಳ ಬಗ್ಗೆ ಕ್ಷೇತ್ರಗಳಲ್ಲಿ ಜನರಿಗಿರುವ ಅಭಿಪ್ರಾಯದ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದಾರೆ. ಆದಷ್ಟು ಬೇಗ ಕ್ಷೇತ್ರಗಳ ಪ್ರವಾಸ ಮುಕ್ತಾಯಗೊಳಿಸಿ, ಬೂತ್‌ ಮಟ್ಟದ ಕಾರ್ಯಕರ್ತರು, ಏಜೆಂಟರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಮನೆ ಮನೆಗೆ ಕಾಂಗ್ರೆಸ್‌ ಕಾರ್ಯ ಕ್ರಮವನ್ನು ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ.

ಬಜೆಟ್‌ ನಂತರ ಯಾತ್ರೆ ಇನ್ನು ಬಜೆಟ್‌ ಅಧಿವೇಶನ ಮುಗಿದ ಬಳಿಕ ಸಿಎಂ ಹಾಗೂ ಪರಮೇಶ್ವರ್‌ ಜೊತೆಯಾಗಿಯೇ ಪಕ್ಷದ ಪರವಾಗಿ ಯಾತ್ರೆ ನಡೆಸುವಂತೆ ವೇಣುಗೋಪಾಲ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.1 ರಿಂದ ಜನಾಶೀರ್ವಾದ ಯಾತ್ರೆ ಮಾಡುವುದಾಗಿ ಹೇಳಿರುವುದರಿಂದ ಆ ಯಾತ್ರೆಯನ್ನು ಪಕ್ಷದ ವತಿಯಿಂದಲೇ ನಡೆಸುವಂತೆ ಸೂಚಿಸಿದ್ದಾರೆ.

ಸಂಕ್ರಾಂತಿಗೆ ಸಮೀಕ್ಷೆ: ಪಕ್ಷದ ವತಿಯಿಂದ ಈಗಾಗಲೇ ನಡೆಸುತ್ತಿರುವ ಸಮೀಕ್ಷೆಯನ್ನು ಜ.15ರೊಳಗೆ ಪೂರ್ಣಗೊಳಿಸಿ ಸ್ಪಷ್ಟ ಚಿತ್ರಣ ಪಡೆಯುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಸೂಚಿಸಿದ್ದಾರೆ. ಸೋಲಿನ ಆತಂಕ ಎದುರಿಸುತ್ತಿರುವ ಹಾಲಿ ಶಾಸಕರು ಜ.15ರೊಳಗೆ ಕ್ಷೇತ್ರದಲ್ಲಿ ಗೆಲ್ಲುವ ವಾತಾವರಣ ನಿರ್ಮಾಣ ಮಾಡುವಂತೆ ಸಂದೇಶ ರವಾನೆ ಮಾಡುವುದು, ಸಮೀಕ್ಷೆಯಲ್ಲೂ ಸೋಲುತ್ತಾರೆ ಎಂಬ ಮಾಹಿತಿ ಬಂದರೆ ಪರ್ಯಾಯ ಅಭ್ಯರ್ಥಿಯನ್ನು ಸಿದಟಛಿ ಮಾಡಿಕೊಳ್ಳಬೇಕು ಎನ್ನುವ ಕುರಿತಂತೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸೋತ ಕ್ಷೇತ್ರಗಳಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ನಾವು ಪ್ರವಾಸ ಕೈಗೊಳ್ಳಲಿದ್ದೇವೆ. ಬಹುತೇಕ ಡಿ.20 ರಿಂದ ಪ್ರವಾಸ ಆರಂಭವಾಗಲಿದೆ. ಅಧಿಕೃತ ವೇಳಾಪಟ್ಟಿ ಶೀಘ್ರವೇ ಸಿದ್ದವಾಗಲಿದೆ. ಮುಖ್ಯಮಂತ್ರಿಗಳು ಎಲ್ಲ ಕ್ಷೇತ್ರಗಳಿಗೆ ಹೋಗಲು ಸಾಧ್ಯವಾಗದಿರುವುದರಿಂದ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಪ್ರವಾಸ ಕೈಗೊಳ್ಳಲಾಗುತ್ತಿದೆ.
- ಎಸ್‌.ಆರ್‌. ಪಾಟೀಲ್‌,
ಕೆಪಿಸಿಸಿ ಕಾರ್ಯಾಧ್ಯಕ್ಷ

Back to Top