CONNECT WITH US  

ಪ್ರಸಾದವೇ ಊಟ, ಸಿಂಪಲ್ಲಾಗೊಂದು ಓಟ

ಕಳೆದ ಹದಿನೆಂಟು ವರ್ಷಗಳಿಂದ ಅಯ್ಯಪ್ಪ ಮಾಲೆ ಹಾಕುತ್ತಾ ಬಂದಿದ್ದೆ. ಅಯ್ಯಪ್ಪ ವ್ರತದ ಮೂಲ ಸೂತ್ರ- ಸನ್ಯಾಸಿಯಂತೆ ಎಲ್ಲ ಬಂಧನಗಳಿಂದ ಮುಕ್ತರಾಗಿ ಒಂದು ಮಂಡಲ ವ್ರತ ಪಾಲಿಸಬೇಕು ಎಂಬುದು. ದಿನನಿತ್ಯದ ಜೀವನದ ಭರಾಟೆಯ ನಡುವೆ ನನಗೆ ಅದು ಅಸಾಧ್ಯ ಎನಿಸಿತು. ಪ್ರತಿ ವರ್ಷ ಎರಡು ಮೂರು ದಿನದ ವ್ರತ ಮಾತ್ರ ಪಾಲಿಸಲು ಸಾಧ್ಯವಾಗುತ್ತಿತ್ತು. 2016 ನನ್ನ ಹದಿನೆಂಟನೇ ವರ್ಷವಾದ್ದರಿಂದ, ಒಂದು ಪೂರ್ಣ ಮಂಡಲ, ಎಂದರೆ 41 ದಿನದ ವ್ರತವನ್ನು ಪಾಲಿಸಬೇಕೆಂದು ಸಂಕಲ್ಪ ಮಾಡಿಕೊಂಡೆ.

ಆದರೆ, 41 ದಿನ ಮಾಡುವುದೇನು? ಮನೆಯಲ್ಲಿಯೇ ಇದ್ದರೆ ನಿದ್ದೆ ಮಾಡುವುದೇ ಆಗುತ್ತೆ. ಅದರ ಬದಲು ಕರ್ನಾಟಕವನ್ನು ಸುತ್ತುವುದೆಂದು ನಿರ್ಧರಿಸಿದೆ. ಹೇಗೆ ಸುತ್ತುವುದು? ಬಸ್‌ ನಲ್ಲಾದರೆ ಮತ್ತೆ ನಿದ್ದೆ ಮಾಡುವ ಸಾಧ್ಯತೆ ಇದೆ ಅನ್ನಿಸಿತು. ಕಾಲ್ನಡಿಗೆಯಲ್ಲಿ ಹೆಚ್ಚು ಸುತ್ತಲಾಗುವುದಿಲ್ಲ. ಹೀಗಾಗಿ, ನನಗಿದ್ದ ಸಮಯದಲ್ಲಿ ಎಲ್ಲ ಪುಣ್ಯಕ್ಷೇತ್ರಗಳನ್ನು ನೋಡಲು ಸೈಕಲ್‌ ಒಂದೇ ದಾರಿ ಎನಿಸಿತು.

ಹೊರಟಿತು ಸವಾರಿ
ಒಂದೆರಡು- ಜತೆ ಪಂಚೆ, ಬಟ್ಟೆ, ಸ್ಲಿಪಿಂಗ್‌ ಬ್ಯಾಗ್‌, ಪಂಕ್ಚರ್‌ ಕಿಟ್‌, ಮಾತ್ರೆ, ಔಷಧ ಇತ್ಯಾದಿಗಳೊಂದಿಗೆ, ಜೇಬಿನಲ್ಲಿ 9,000 ರೂ. ಗಳನ್ನು ಇಟ್ಟುಕೊಂಡು ಮನೆಯಿಂದ ಹೊರಟೆ. ಮೆಜೆಸ್ಟಿಕ್‌ ತಲುಪಿದವನೇ, ಚಿಕ್ಕಮಗಳೂರಿನ ಬಸ್‌ ಹತ್ತಿದೆ. ಸೈಕಲನ್ನು ಬಸ್‌ನಲ್ಲಿ ಹಾಕಲು ಅನುಮತಿ ನೀಡಿದರು. ಚಿಕ್ಕಮಗಳೂರಿನಲ್ಲಿ ಇಳಿದವನೇ ಸೈಕಲ್‌ ತೀರ್ಥಯಾತ್ರೆ ಪ್ರಾರಂಭಿಸಿದೆ. 

ಧರ್ಮಸ್ಥಳ, ಕುಕ್ಕೆ, ಕಟೀಲು, ಮೂಡಬಿದಿರೆ ಹೀಗೆಯೇ ಮುಂದುವರಿಯುತ್ತಾ ಸಾಗಿತು ಪಯಣ. ಒಂದು ದೇವಸ್ಥಾನಕ್ಕೆ ಹೋದರೆ, ಅಲ್ಲಿರುವವರನ್ನು ಮಾತನಾಡಿಸಿ, ಕೇಳಿಕೊಂಡು ಮುಂದಿನ ಪುಣ್ಯ ಕ್ಷೇತ್ರಕ್ಕೆ ಹೋಗುತ್ತಿದ್ದೆ. ಹೀಗೆ ಕರ್ನಾಟಕವನ್ನು ಸುತ್ತುವುದರೊಳಗೆ 38 ದಿನಗಳು ಕಳೆದವು.

ದೇವಸ್ಥಾನಗಳಲ್ಲದೆ, ಪ್ರವಾಸಿ ತಾಣಗಳಾದ ಕುದುರೆಮುಖ, ಯಾಣ ಮುಂತಾದ ಜಾಗಗಳನ್ನೂ ಸುತ್ತಿದೆ. ಅಯ್ಯಪ್ಪ ಮಾಲೆ ಹಾಕುವ ಒಂದು ಉದ್ದೇಶ ಏನೆಂದರೆ ವ್ರತದ ಸಮಯ, ಸನ್ಯಾಸಿಯ ಜೀವನವನ್ನು ಬದುಕಬೇಕೆಂಬುದು. ನನ್ನ ಶಕ್ತಿಮೀರಿ, ಬರಿಗಾಲಿನಲ್ಲಿ ಸೈಕಲ್‌ ತುಳಿಯುತ್ತಾ, ಪ್ರವಾಸದುದ್ದಕ್ಕೂ ಹೆಚ್ಚಿನ ಸಮಯ ದೇವಸ್ಥಾನಗಳಲ್ಲಿಯೇ ಉಳಿದುಕೊಂಡು, ಪ್ರಸಾದವಾಗಿ ಸಿಕ್ಕಿದ ಹಣ್ಣುಗಳನ್ನೇ ಸೇವಿಸಿ ಮುಂದುವರಿದೆ.

ಕೇಳಿದ್ದು ಪ್ರಸಾದ, ಸಿಕ್ಕಿದ್ದು?
ಅದೊಮ್ಮೆ ಹಸಿದ ಹೊಟ್ಟೆಯಲ್ಲೇ  ಸೈಕಲ್‌ ತುಳಿದು ಬರುತ್ತಿದ್ದೆ. ತುಂಬಾ ದಣಿದಿದ್ದೆ. ದಾರಿಯಲ್ಲಿ ದೇವಸ್ಥಾನ ಸಿಕ್ಕಿತ್ತು. ನೆರಳಿಗಾಗಿ ಪರಿತಪಿಸುತ್ತಿದ್ದವನಿಗೆ ಆಲದ ಮರ ಸಿಕ್ಕಂತಾಯಿತು. ದೇವಸ್ಥಾನದೊಳಗೆ ಹೋದೆ. ನನ್ನ ಪುಣ್ಯಕ್ಕೆ ಅಷ್ಟೋ ಇಷ್ಟೋ ಪ್ರಸಾದ ಮಿಕ್ಕಿದ್ದರೆ ಅದರಿಂದಲೇ ಹೊಟ್ಟೆ ತುಂಬಿಸಿಕೊಳ್ಳೋಣ ಅನ್ನೋದು ನನ್ನ ಯೋಚನೆ. ಅಲ್ಲಿ ಆಗಿದ್ದೇ ಬೇರೆ. ತಾನೊಂದು ಬಗೆದರೆ ದೈವ ಬೇರೇನೋ ಬಗೆಯುತ್ತೆ ಅನ್ನೋದು ಮತ್ತೊಮ್ಮೆ ನನ್ನ ಅನುಭವಕ್ಕೆ ಬಂತು. ನಾನು ಹೋದ ಸಮಯಕ್ಕೆ ಸರಿಯಾಗಿ ಪೂಜೆ ನಡೆಯುತ್ತಿತ್ತು. ಒಂದೇ ಕುಟುಂಬ ಒಂದಷ್ಟು ಮಂದಿ ಅಲ್ಲಿ ಹಾಜರಿದ್ದರು. ಪೂಜೆ ಬೇಗನೆ ಮುಗಿದುಹೋಯಿತು. ನಾನು ಕೇಳುವ ಮುಂಚೆಯೇ ನನ್ನನ್ನು ಕರೆದುಕೊಂಡು ಹೋಗಿ ಕೂರಿಸಿ ಊಟ ಬಡಿಸಿಯೇ ಬಿಟ್ಟರು. ಪ್ರಸಾದ ಉಳಿದಿದ್ದರೆ ಹೊಟ್ಟೆ ತುಂಬಿಸಿಕೊಳ್ಳುವ ಯೋಚನೆಯಲ್ಲಿದ್ದ ನನಗೆ ಮೃಷ್ಟಾನ್ನ ಭೋಜನ ಬಡಿಸಿದರು. ಕಡೆಯಲ್ಲಿ, ಬೇಡ ಎಂದರೂ ಕೇಳದೆ 3 ಬಾರಿ ಒಬ್ಬಟ್ಟು ಹಾಕಿದರು.

ಜೀವನ ಪಾಠ
ಈ ಪ್ರವಾಸ ನನಗೆ ಸಾಕಷ್ಟು ಕಲಿಸಿದೆ. ಸಂಕಲ್ಪ ಮಾಡಿದ ಮೇಲೆ ಏನೇ ಅಡ್ಡಿಗಳು ಬಂದರೂ ಮುನ್ನುಗ್ಗುತ್ತಿರಬೇಕು ಎನ್ನುವ ದೊಡ್ಡ ಪಾಠ ಕಲಿತೆ. ಬದುಕನ್ನು ಧನಾತ್ಮಕವಾಗಿ ನೋಡಬೇಕೆನ್ನುವುದು ನಾನು ಕಲಿತ ಇನ್ನೊಂದು ಪಾಠ. ಬೇರೆ ಜಾಗಗಳಲ್ಲಿ ಅಲ್ಲಿನ ಜನರು ನನ್ನನ್ನು ಅದೆಷ್ಟು ಪ್ರೀತಿ ವಾತ್ಸಲ್ಯದಿಂದ ಕಂಡರೆಂದರೆ, ಬದುಕಿನ ಸಾರ್ಥಕತೆಯ ಬಗ್ಗೆ ನನಗೆ ವಿಶ್ವಾಸ ಮೂಡಿತು. ನಮ್ಮ ನಿರೀಕ್ಷೆಗಿಂತ ಹೆಚ್ಚು ಒಳಿತು ಈ ಜಗತ್ತಿನಲ್ಲಿದೆಯೆಂಬ ನಂಬಿಕೆ ಬಲವಾಯಿತು.

ಟೈಮ್‌ ಅನ್ನು  ಓವರ್‌ ಟೇಕ್‌ ಮಾಡಿದ್ದ ಸೈಕಲ್‌
ಗಜೇಂದ್ರಗಡದಿಂದ ಗದಗದತ್ತ ಹೋಗಬೇಕಿತ್ತು. ಆ ದಿನದ ಗುರಿ ಮುಟ್ಟಲು ಸುಮಾರು 60 ಕಿ.ಮೀ. ದೂರವಿತ್ತು. ಆದರೆ, ಒಂದೇ ಷರತ್ತೆಂದರೆ ಕತ್ತಲಾಗುವ ಮುನ್ನ ತಲುಪಬೇಕಿತ್ತು. ಹೊರಟಾಗ ಸಮಯ ಮಧ್ಯಾಹ್ನ 3.15. ಸುಮಾರು 20 ಕಿ.ಮೀ. ದೂರವನ್ನು ನಿಧಾನವಾಗಿ ಸೈಕಲ್‌ ತುಳಿದು ಕ್ರಮಿಸಿದೆ. ಹೀಗೇ ಹೋದರೆ ಕತ್ತಲಾಗುತ್ತೆ ಅನ್ನೋದು ತಿಳಿಯಿತು. ಅಲ್ಲಿಂದ ವೇಗ ಹೆಚ್ಚಿಸಿಕೊಂಡೆ. ಸಂಜೆ 6.15 ಆಗುವಷ್ಟರಲ್ಲಿ ಗದಗದ ಪಂಚಾಕ್ಷರಿ ಮಠ ತಲುಪಿದ್ದೆ. 3 ಗಂಟೆಯಲ್ಲಿ 60 ಕಿ.ಮೀ. ಕ್ರಮಿಸುವುದು ಕಡಿಮೆ ಸಾಧನೆಯೇನಲ್ಲ! ಒಟ್ಟು 38 ದಿನ 100ಕ್ಕೂ ಅಧಿಕ ಸ್ಥಳ ಗ ಳನ್ನು ಸಂದ ರ್ಶಿಸಿ ಮನೆ ತಲುಪು ವಾಗ ಮನಸ್ಸು ಸಂತೃಪ್ತಿಯಿಂದ ಕೂಡಿತ್ತು.

 ಸಂತೋಷ್‌ ಜಿ. 

ಇಂದು ಹೆಚ್ಚು ಓದಿದ್ದು

Trending videos

Back to Top