CONNECT WITH US  

ವೃತ್ತಿಯಲ್ಲಿ ವಾಣಿಜ್ಯತೆರಿಗೆ ಅಧಿಕಾರಿ, ಪ್ರವೃತ್ತಿಯಲ್ಲಿ ಯೋಗಾಧಿಕಾರಿ

ಉಡುಪಿ: ಮೂಲತಃ ವಿಟ್ಲದವರಾದ ಗಿರೀಶ್‌ ಶೆಟ್ಟಿಗಾರ್‌ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹಿರಿಯ ಅಧಿಕಾರಿ. ಅವರಿಗೆ ಹಿಂದೆ ಮೂಗಿನ ಸಮಸ್ಯೆ (ಸೈನಸ್‌) ಕಾಡಿತು. ಆಗ ಆರಂಭಿಸಿದ ಯೋಗಾಭ್ಯಾಸ ಯೋಗದಲ್ಲಿ ಮಾಸ್ಟರ್‌ ಆಗುವಷ್ಟು, ಅಧಿಕಾರವಾಣಿಯಿಂದ ಮಾತನಾಡುವಷ್ಟು ಅವರನ್ನು ಬೆಳೆಸಿದೆ.
 
ಸೈನಸ್‌ ಸಮಸ್ಯೆ: ಯೋಗದ ಮೊರೆ
ಸೈನಸ್‌ ಸಮಸ್ಯೆ ಕಾಡಿದಾಗ ವಿವಿಧ ರೀತಿಯ ವೈದ್ಯ ಪದ್ಧತಿಗಳಿಗೆ ಅವರು ಮೊರೆ ಹೋದರು. ಕೊನೆಗೆ ಯೋಗಾಭ್ಯಾಸ ಶುರು ಮಾಡಿದರು. ಉಡುಪಿಯಲ್ಲಿ ಒಳಕಾಡು ನಿವಾಸಿಯಾದ ಕಾರಣ ಒಳಕಾಡಿನ ದೈವಜ್ಞ ಸಭಾಂಗಣದಲ್ಲಿ ಆಗಷ್ಟೆ ಆರಂಭವಾದ ಯೋಗಧಾಮದಲ್ಲಿ ಯೋಗಾಭ್ಯಾಸ ನಿರತರಾದರು. 27 ವರ್ಷಗಳಿಂದ ಅವರು ಯೋಗ-ಪ್ರಾಣಾಯಾಮ ನಿರತರು, ಈಗ 58ನೆಯ ವರ್ಷದಲ್ಲಿದ್ದಾರೆ. ಯಾವುದೇ ವೈದ್ಯಕೀಯ ನೆರವಿಲ್ಲದೆ ಸೈನಸ್‌ ಸಮಸ್ಯೆ ನಿವಾರಣೆಯಾದದ್ದು ಮಾತ್ರವಲ್ಲ ಶೀತಜ್ವರವೂ ಕಾಡಿಲ್ಲ, ಯುವಕರನ್ನೂ ನಾಚಿಸುವಂತೆ ಯೋಗ ಭಂಗಿಗಳನ್ನು ನೀಡುತ್ತಾರೆ.  

ಯೋಗದಿಂದ ರೋಗಮುಕ್ತ
ನಿರಂತರ ಯೋಗಾಭ್ಯಾಸಿಗಳಿಗೂ ಮಾಡಲು ಆಗದ ಕ್ಲಿಷ್ಟಕರವಾದ ಪೂರ್ಣಮತ್ಸ್ಯೆಂದ್ರಾಸನ, ಉಪವಿಷ್ಟ ಕೋನಾಸನ, ಬದ್ಧ ಕೋನಾಸನ, ಕೂರ್ಮಾಸನ, ಬದ್ಧ ಕೂರ್ಮಾಸನ, ದ್ವಿಪಾದಶೀರ್ಷಾಸನ, ಪಶ್ಚಿಮೋತ್ತಾ ನಾಸನದಲ್ಲಿ ಅಂತಿಮ ಹಂತ, ಮಯೂರಾಸನಗಳನ್ನು ಲೀಲಾಜಾಲ ವಾಗಿ ಶೆಟ್ಟಿಗಾರ್‌ ಮಾಡುತ್ತಾರೆ. ಇದರಲ್ಲಿ ಉಪವಿಷ್ಟ ಕೋನಾಸನ, ಬದ್ಧಕೋನಾಸನ ಸ್ತ್ರೀಯರಿಗೆ ಉತ್ತಮ, ಕೂರ್ಮಾಸನದಿಂದ ಪೈಲ್ಸ್‌ ರೋಗ ನಿರೋಧಕ, ಮಯೂರಾಸನ ವಿಷಹರಕ್ಕೆ ಹೀಗೆ ವಿಧವಿಧ ಆಸನಗಳು ವಿಧವಿಧ ಸಮಸ್ಯೆಗಳಿಗೆ ಅನುಕೂಲ. 

ಕ್ಲಿಷ್ಟಕರ ಆಸನಗಳನ್ನು ಇವರು ಲೀಲಾಜಾಲವಾಗಿ ಹೇಗೆ ಮಾಡುತ್ತಾರೆಂದು ಕೇಳಿದರೆ ಸತತ ಅಭ್ಯಾಸ ಎನ್ನುತ್ತಾರೆ. 'ಶೆಟ್ಟಿಗಾರ್‌ ಅವರ ದೇಹರಚನೆಯೂ ಯೋಗಾಸನಗಳಿಗೆ ಪೂರಕವಾಗಿದೆ' ಎನ್ನುತ್ತಾರೆ ಯೊಗಧಾಮದ ಗುರು ಡಾ| ಎ. ಗಣೇಶ ಭಟ್‌. 

ಗಿರೀಶ್‌ ಶೆಟ್ಟಿಗಾರ್‌ ಅವರು ಮಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾಗಿದ್ದರೂ ಇವರು ಎರಡೂ ಹೊತ್ತು ಯೋಗ, ಪ್ರಾಣಾಯಾಮ, ಧ್ಯಾನ ಮಾಡುತ್ತಾರೆ. ಯಕ್ಷಗಾನ, ತಾಳಮದ್ದಲೆಯ ಹವ್ಯಾಸವಿದೆ. 'ದೊಡ್ಡ ಹುದ್ದೆಯಲ್ಲಿರುವಾಗ ಒತ್ತಡ ನಿರ್ವಹಣೆಗೆ ಯೋಗ ಸಹಾಯಕವಾಗುತ್ತದೆ. ಮುಖ್ಯವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಮಾನಸಿಕ ಸಮತೋಲನ ಸ್ಥಿತಿ ಅಗತ್ಯ. ಇದಕ್ಕೆ ಯೋಗ, ಪ್ರಾಣಾಯಾಮಗಳು ಸಹಕಾರಿ. 
-ಡಾ| ಗಣೇಶ್‌ ಭಟ್‌

-- ಮಟಪಾಡಿ ಕುಮಾರಸ್ವಾಮಿ


Trending videos

Back to Top