CONNECT WITH US  

ಸಿದ್ದಾಪುರಕ್ಕೆ ಮಾವಿನಗುಂಡಿ ಕಸ ತರದಂತೆ ಠರಾವು 

ತೆರಿಗೆ-ಬಾಡಿಗೆ ವಸೂಲಿಗೆ ಸೂಚನೆ 

ಸಿದ್ದಾಪುರ: ಪಪಂ ಸಭೆ ನಡೆಯಿತು.

ಸಿದ್ದಾಪುರ: ಪಟ್ಟಣ ಪಂಚಾಯತ್‌ ಘನತ್ಯಾಜ್ಯ ಘಟಕಕ್ಕೆ ತಾಲೂಕಿನ ಮಾವಿನಗುಂಡಿಯ ಕಸವನ್ನು ಇನ್ನುಮುಂದೆ ತರದಂತೆ ತೀರ್ಮಾನಿಸಲಾಗಿದ್ದು, ಈ ಕುರಿತು ಪ.ಪಂ ಅಧ್ಯಕ್ಷೆ ಸುಮನಾ ಸತೀಶ ಕಾಮತ್‌ ಅಧ್ಯಕ್ಷತೆಯಲ್ಲಿ ನಡೆದ ಪ.ಪಂ ಸಾಮಾನ್ಯ ಸಭೆಯಲ್ಲಿ ಠರಾಯಿಸಲಾಯಿತು. ಸಭೆಯಲ್ಲಿ ಸದಸ್ಯ ಕೆ.ಜಿ. ನಾಯ್ಕ ವಿಷಯ ಪ್ರಸ್ತಾಪಿಸಿ, ತಾಲೂಕಿನ ಮಾವಿನಗುಂಡಿಯಲ್ಲಿಯ ಕಸಗಳನ್ನು ಪಪಂ ವಾಹನದಲ್ಲಿ ಇಲ್ಲಿಯ ಸಿಬ್ಬಂದಿ ಹೋಗಿ ತರುತ್ತಿದ್ದಾರೆ. ಇದನ್ನು ತರುವುದಕ್ಕೆ ಯಾರು ಹೇಳಿದ್ದಾರೆ ಎಂದು ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರು.

ಈ ಬಗ್ಗೆ ಒಂದು ಸಭೆಯಲ್ಲಿ ಶಿರಸಿ ಎಸಿಯವರು ಮೌಖಿಕವಾಗಿ ಸೂಚಿಸಿದ್ದರು. 15 ದಿನಕ್ಕೆ ಒಮ್ಮೆ ಹೋಗಿ ತರುತ್ತಿದ್ದಾರೆ ಎಂದರು. ಇದಕ್ಕೆ ಉತ್ತರಿಸಿದ ಕೆ.ಜಿ. ನಾಯ್ಕ ಪಟ್ಟಣ ಪಂಚಾಯತದಲ್ಲಿಯೇ ಸರಿಯಾಗಿ ಕಸಗಳ ನಿರ್ವಹಣೆ ಮಾಡಲು ಆಗುತ್ತಿಲ್ಲ. ಮೊದಲು ನಾವು ಸರಿಪಡಿಸಿಕೊಂಡು ನಂತರ ಬೇರೆಯವರ ಕೆಲಸ ಮಾಡಬೇಕು. ಮೇಲಾಧಿಕಾರಿಗಳು ಹೇಳಿದ್ದಾರೆ ಎಂದು ಎಲ್ಲವನ್ನು ಮಾಡಲು ಆಗುವುದಿಲ್ಲ. ಅವರು ಅಧಿಕೃತ ಆದೇಶ ನೀಡಿಲ್ಲ ಎಂದ ಮೇಲೆ ಮತ್ತೆ ಯಾಕೆ ಪಟ್ಟಣ ಪಂಚಾಯತ್‌ ವಾಹನವನ್ನು ಮಾವಿನಗುಂಡಿ ಕಸ ವಿಲೆವಾರಿಗೆ ಕಳುಹಿಸಿದ್ದಿರಿ ಎಂದರು. ಈ ಕುರಿತು ಎಲ್ಲಾ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ನಂತರ ಇನ್ನು ಮುಂದೆ ಮಾವಿನಗುಂಡಿಯ ಕಸವನ್ನು ಪಟ್ಟಣ ಪಂಚಾಯತದಿಂದ ತರದಿರುವಂತೆ ಸಭೆಯು ಠರಾವಿಸಿತು.

ಜಮಾ ಖರ್ಚು ವಿಷಯದ ಕುರಿತು ವಿವರವನ್ನು ನೀಡಿದಾಗ ವಾಹನಗಳ ಇಂಧನ ಹಾಕಿಸಿರುವ ಹಣ ಎಪ್ರಿಲ್‌ ತಿಂಗಳಿನಲ್ಲಿ ಹೆಚ್ಚಾಗಿರುವ ಬಗ್ಗೆ ಚರ್ಚೆ ನಡೆಯಿತು. ಈ ಹಿಂದೆ ಕಡಿಮೆಯಾಗುತ್ತಿತ್ತು. ಈಗ ಇಂಧನದ ಖರ್ಚು ಹೆಚ್ಚಾಗಿದೆ. ಈ ಬಗ್ಗೆ ವಿವರವನ್ನು ಕೇಳಿದರು. ಆ ಕುರಿತು ಮುಂದಿನ ಸಭೆಗೆ ಸರಿಯಾದ ಮಾಹಿತಿಯನ್ನು ನೀಡುವಂತೆ ಕೆ.ಜಿ. ನಾಗರಾಜ ಸೂಚಿಸಿದರು. ಪಪಂ ಆದಾಯವನ್ನು ಹೆಚ್ಚಿಸುವುದು ಕಷ್ಟ, ಕಾರಣ ಖರ್ಚನ್ನು ಕಡಿಮೆ ಮಾಡುವಂತೆ ಕೆ.ಜಿ. ನಾಯ್ಕ ಸೂಚಿಸಿದರು.

ಮನೆ ತೆರಿಗೆ ಮತ್ತು ಅಂಗಡಿಯ ಬಾಡಿಗೆ ಹಾಗೂ ಅಂಗಡಿಯ ನೆಲ ಬಾಡಿಗೆಗಳು ವಸೂಲಿ ಆಗದೆ ಇರುವ ಕುರಿತು ಕೇಳಲಾಗಿ ಸುಮಾರು 50 ಲಕ್ಷಕ್ಕೂ ಅಧಿಕ ಬಾಕಿ ಇದೆ ಎಂದು ಅಧಿಕಾರಿಗಳು ತಿಳಿಸಿದರು. ಅದನ್ನು ವಸೂಲಿ ಮಾಡುವಂತೆ ಸಭೆಯೂ ಸೂಚಿಸಿದೆ. ದಾರಿ ದೀಪಗಳು ಎಲ್ಲಾ ಕಡೆಗಳಲ್ಲಿ ನೇತಾಡುತ್ತಿದೆ. ಸರಿಯಾಗಿ ಜೋಡಿಸಿಲ್ಲ ಎಂದು ಕೆ.ಜಿ.ನಾಗರಾಜ ಆರೋಪಿಸಿದರು. ಟ್ಯೂಬ್‌ಗಳೂ ಕಳಪೆಯದಾಗಿದೆ. ಮೂರು-ನಾಲ್ಕು ದಿನಕ್ಕೆ ಹಾಳಾಗುತ್ತಿದೆ, ಬದಲಾಯಿಸುತ್ತಿದ್ದಾರೆ ಎಂದು ಗುರುರಾಜ ಶಾನಭಾಗ ಹೇಳಿದರು. ಈ ಬಗ್ಗೆ ಸದಸ್ಯರಾದ ಮಾರುತಿ ಕಿಂದ್ರಿ, ರವಿಕುಮಾರ ನಾಯ್ಕ ಕೂಡ ಆಕ್ಷೇಪಿಸಿದರು. ಈ ವಿಷಯದ ಬಗ್ಗೆ ಸಿಬ್ಬಂದಿಯನ್ನು ಸಭೆಗೆ ಕರೆದು ಸರಿಯಾಗಿ ನಿರ್ವಹಣೆ ಮಾಡುವಂತೆ ಎಚ್ಚರಿಸಲಾಯಿತು.

ಉಪಾಧ್ಯಕ್ಷೆ ದೇವಮ್ಮ ಚಲವಾದಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಾರುತಿ ಟಿ.ನಾಯ್ಕ, ಸದಸ್ಯರಾದ ಸುರೇಶ ನಾಯ್ಕ , ಪುಷ್ಪಾ ಗೌಡರ, ಚಂದ್ರಮ್ಮ, ಮೋಹಿನಿ ನಾಯ್ಕ, ಪುಷ್ಪಲತಾ ನಾಯ್ಕ, ನಾಮನಿರ್ದೇಶಿತ ಸದಸ್ಯರಾದ ಜೈಜಗದೀಶ ಎ.ನಾಯ್ಕ, ಕೆ.ಟಿ.ಹೊನ್ನೆಗುಂಡಿ,ಗಣೇಶ ಶಾನಭಾಗ, ಮುಖ್ಯಾಧಿಕಾರಿ ಸತೀಶ ಗುಡ್ಡೆ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು

ಫಲಾನುಭವಿಗಳ ಆಯ್ಕೆ
2018-19 ನೇ ಸಾಲಿನ 14ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಡಿ ಮಂಜೂರಾದ ಕಾಮಗಾರಿಗಳ ನಿರ್ವಹಣೆಗೆ ಸ್ವೀಕೃತಿ ಟೆಂಡರ್‌ಗಳಿಗೆ ಮಂಜೂರಾತಿ ನೀಡಲಾಯಿತು. ಅರೆಂದೂರು ಮೂಲ ಸ್ಥಾವರದಲ್ಲಿರುವ 75 ಎಚ್‌ಪಿ ಸಾಮರ್ಥ್ಯದ ಪಂಪ್‌ ಮೋಟಾರು ಚಾಲನೆ ಮಾಡುವ ಬಿಡಿಭಾಗಗಳ ಬದಲಾವಣೆ ಮಾಡಿ ದುರಸ್ತಿ ಮಾಡುವ ಬಗ್ಗೆ ತೀರ್ಮಾನಿಸಿಲಾಯಿತು. 2018-19ನೇ ಸಾಲಿನ ಎಸ್‌ಎಫ್‌ಸಿ ನಿಧಿ ಮತ್ತು ಪಟ್ಟಣ ಪಂಚಾಯತ್‌ ನಿಧಿಯ ಶೇ. 24.10,7.25. ಶೇ.3 ರ ಯೋಜನೆಯಡಿಯಲ್ಲಿ ವ್ಯಕ್ತಿಗತ ಸೌಲಭ್ಯದ ಕುರಿತು ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳ ಆಯ್ಕೆ ಮಾಡಲಾಯಿತು.


Trending videos

Back to Top