CONNECT WITH US  

ಬರೆಯುವುದೆಂದರೆ ಅವರಿಗೆ ಧ್ಯಾನ

ಎಸ್‌. ಎಲ್‌. ಭೈರಪ್ಪರ ಕುರಿತು ಅವರ ಪತ್ನಿ ಏನು ಹೇಳುತ್ತಾರೆ?

ನಾನು ಮೆಟ್ರಿಕ್‌ವರೆಗೆ ಮಾತ್ರ ಓದಿದವಳು. ನನ್ನಪ್ಪ ಅನಂತರಾಮ ಜೋಯಿಸರು ಎಷ್ಟು ಕಟ್ಟುನಿಟ್ಟಿನ ಮನುಷ್ಯ. ತಾಯಿ ಜಯಲಕ್ಷ್ಮಮ್ಮ. ನಾವು ತಿಪಟೂರು ತಾಲ್ಲೂಕಿನ ನೊಣವಿನಕೆರೆಯವರು. ನನ್ನ ತಾತ- ಅಂದರೆ ನನ್ನ ತಾಯಿಯ ತಂದೆ ತಲಕಾಡಿನಲ್ಲಿ ಶಿರಸ್ತೇದಾರರು. ಅದರ ಜತೆಗೇ ಜೋಯಿಷ್ಯಕ್ಕೇಂತ ನಲವತ್ತು ಹಳ್ಳಿಗಳನ್ನು ಒಂದು ಸಾವಿರ ರೂಪಾಯಿಗೆ ಕೊಂಡುಕೊಂಡಿದ್ದರಂತೆ. ನೊಣವಿನಕೆರೆ ಸುತ್ತಮುತ್ತಲಿನ ಹಳ್ಳಿಗಳಲ್ಲೆಲ್ಲ ತಾತಂದು ಓಡಾಟ. ಅಪ್ಪನಿಗೆ ಭೂಮಿಕಾಣಿ ಆಸ್ತಿಯಾಗಿ ಬಂತು. ಅದಲ್ಲದೆ ಜೋಯಿಸಿಕೆ ಕೂಡಾ. ನನ್ನ ತಾತನ ಕಾಲಕ್ಕಿಂತಲೂ ಅಪ್ಪನ ಕಾಲ ಮುಂದುವರಿದೇ ಇರಬೇಕಲ್ಲ ! ಅಪ್ಪನಿಗೆ ಜೋಯಿಸಿಕೆ ಮಾಡೋದು ಅವಮಾನ, ದಾನ ತೊಗೊಳ್ಳೋದು ಕರ್ಮ. ತಾನು ದುಡಿದು ತಿನ್ನಬೇಕೇ ಹೊರತು ಕಂಡವರ ಮನೇಲಿ ಹೊಟ್ಟೆ ಹೊರೆದುಕೋಬಾರದು ಅಂತ ಏನೇನೋ ಯೋಚನೆ ಬಂದು ತಮ್ಮ ತೆಂಗಿನ ತೋಟ, ಗದ್ದೆ ಇವನ್ನೇ ಮುಂದುವರಿಸಿಕೊಂಡು ಹೋದರು. ಒಂದು ಕಾಲಕ್ಕೆ ಕಾಂಗ್ರೆಸ್‌ಗೂ ಕೆಲಸ ಮಾಡಿದ್ದುಂಟು. ತಿಮ್ಮೇಗೌಡ, ಹುಚ್ಚೇಗೌಡ, ವಿ. ಸುಬ್ರಹ್ಮಣ್ಯ , ಕಡಿದಾಳ ಮಂಜಪ್ಪ , ರೇವಣಸಿದ್ಧಯ್ಯ ಇಂತಹವರು ಚುನಾವಣೆಗೆ ನಿಂತಾಗ; ಆದರೆ ಜಾತಿ ರಾಜಕೀಯ ಶುರುವಾದಾಗ ಅಪ್ಪ ರಾಜಕಾರಣದಲ್ಲಿ ಇದ್ದ ಅಲ್ಪಸ್ವಲ್ಪ ಆಸಕ್ತೀನೂ ಕಳೆದುಕೊಂಡರು. ಅವರಾಯ್ತು , ಅವರ ಬೇಸಾಯವಾಯ್ತು ಮನೇಲಿ ಅವರದ್ದೇ ಹುಕುಂ. ಅಪ್ಪನಿಗೆ ಗಂಡು ಮಕ್ಕಳಿಲ್ಲ. ನಾನು, ನನ್ನ ಇಬ್ಬರು ತಂಗಿಯರು. ಪಕ್ಕದ ಮನೆಗೆ ಅರಸಿನ-ಕುಂಕುಮಕ್ಕೆ ಹೋಗಬೇಕಾದರೂ ಅಪ್ಪನ ಕಣ್ತಪ್ಪಿಸಿ, ಕದ್ದು ಹೋಗಬೇಕಾಗಿತ್ತು. ನಾವೆಲ್ಲೂ ಹೋಗಬಾರದು. ಬರಬಾರದು. ನಾನು 19ನೇ ವಯಸ್ಸಿನವರೆಗೂ ರೈಲನ್ನೇ ನೋಡಿರಲಿಲ್ಲ. ಆದ್ರೂ ಅಪ್ಪನಿಂದ ಮರೆಮಾಚಿ ಲೈಬ್ರೆರಿಗೆ ಓಡಿಹೋಗಿ ಅಮ್ಮನಿಗೆ ತ.ರಾ.ಸು., ಅ.ನ.ಕೃ. ಕಾದಂಬರಿಗಳನ್ನು ತಂದೊRಡ್ತಾ ಇದ್ದೆವು. ಅಮ್ಮನಿಗೋ ಓದೋ ಹುಚ್ಚು. ಮೈಸೂರು ಮಹಾರಾಣಿ ಸ್ಕೂಲಿನಲ್ಲಿ 7ನೇ ಕ್ಲಾಸಿನವರೆಗೂ ಓದಿದ್ದರು. ಅಪ್ಪ ಮನೆ ಖರ್ಚಿಗೆ ಅಂತ ಕೊಡ್ತಿದ್ದ ದುಡ್ಡಿನಲ್ಲಿ 8 ಆಣೆ ಉಳಿಸ್ಕೊಂಡು ನಮಗೆ ಚಂದಮಾಮಾ ತರಿಸಿ ಕೊಡ್ತಿದ್ದರು.
.
ನನಗೆ 16 ವರ್ಷ ಆಗ್ತಿದ್ದ ಹಾಗೇ ಗಂಡು ಹುಡುಕ್ಕೋಕೆ ಶುರು ಮಾಡಿದರು. ಲಾಯರು, ಡಾಕ್ಟರು, ಎಂಜಿನಿಯರು ಹೀಗೆ ವರಗಳು ಬಂದವು. ಆದ್ರೆ ಓದಿದ ಹುಡುಗಿ ಅಲ್ಲ ಅಂತ ನನ್ನನ್ನು ಅವರಾರೂ ಒಪ್ಪಲಿಲ್ಲ. ನನ್ನ ಜತೆ ಓದ್ತಾ ಇದ್ದ ಒಬ್ಬ ಹುಡುಗ ಹೊಯ್ಸಳ ಕರ್ನಾಟಕರ ಹಾಸ್ಟೆಲ್ಲಿನಲ್ಲಿದ್ದಾಗ ಭೈರಪ್ಪನವರ ಸ್ನೇಹಿತನಾಗಿದ್ದ. "ಭೈರಪ್ಪ ಅಂತ ಬಿ.ಎ. ಅನರ್ಸ್‌ನಲ್ಲಿ ಒಬ್ಬನಿದ್ದಾನೆ. ನೋಡ್ತೀರಾ?' ಅಂತ ನನ್ನ ಅಪ್ಪ-ಅಮ್ಮನ್ನ ಕೇಳಿದ. ಸರಿ, ಇವರು ಎಚ್‌.ಟಿ. ಶಾಂತಾ ಅಂತ ಫಿಲಾಸಫಿ ಪ್ರೊಫೆಸರಾಗಿದ್ದ ಒಬ್ಟಾಕೆ ಜತೆ ನನ್ನ ನೋಡೋಕೆ ಬಂದರು. ಭೈರಪ್ಪನವರಿಗೆ ಹೇಳಿಕೊಳ್ಳುವಂಥ ಸಂಬಂಧಿಕೇನೂ ಇರಲಿಲ್ಲ. ಜತೆಯಲ್ಲಿ ಹುಟ್ಟಿದವಳು ಒಬ್ಬಳೇ ತಂಗಿ, ಲಲಿತಾ ಅಂತ. ಇವರ ತಾಯಿ-ಗೌರಮ್ಮ-ಅಷ್ಟು ಹೊತ್ತಿಗಾಗಲೇ ತೀರಿಕೊಂಡಿದ್ದರು. ತಂದೆ ಲಿಂಗಣ್ಣಯ್ಯ, ಸಂತೆಶಿವರ ಇವರ ಊರು. ಭೈರಪ್ಪ ವಾರಾನ್ನ , ಭಿಕ್ಷಾನ್ನದಿಂದ ದೊಡ್ಡೋರಾದವ್ರು. ತಂಗಿಯ ಜವಾಬ್ದಾರೀನೂ ಭೈರಪ್ಪನವರ ಹೆಗಲಿಗೇ ಬಿದ್ದಿತ್ತು. ಇವರ ಗೃಹಭಂಗ ಕಾದಂಬರಿಗೆ ಅವರ ತಂದೆಯ ವರ್ತನೆಯೇ ಪ್ರೇರಣೆ.

1959ರಲ್ಲಿ ನೊಣವಿನಕೆರೆಯಲ್ಲಿ ನಮ್ಮ ಮದುವೆಯಾಯಿತು. ನಂಗೆ 20 ವರ್ಷ, ಇವರಿಗೆ 25. ನಮ್ಮ ಮದುವೆ ಗೊತ್ತು ಮಾಡಿದ್ದರಲ್ಲಾ, ಪ್ರೊ. ಶಾಂತಾ, ಅವರು ಆವತ್ತೇ ನಂಗೆ ಹೇಳಿದರು "ನೋಡು, ಭೈರಪ್ಪ ಯಾವಾಗಲೂ ಬರೀತಾ ಕೂತುಕೊಳ್ಳೋನು. ನೀನು ಅವನಿಗೆ ಸಹಕಾರ ನೀಡಬೇಕೇ ಹೊರತು ಎಂದೂ ಮನಸ್ತಾಪಕ್ಕೆ ಕಾರಣ ಆಗಬಾರದು' ಅಂತ. ಇವರು ಆಗ ಹುಬ್ಬಳ್ಳಿಯ ಕಾಡುಸಿದ್ಧೇಶ್ವರ ಆರ್ಟ್ಸ್ ಕಾಲೇಜಿನಲ್ಲಿ ಲೆಕ್ಚರರ್‌ ಆಗಿದ್ದರು. ಬಡತನ ಹೇಳತೀರದು. ಇವರು ಅಂಥ ಸ್ಥಿತಿಯಲ್ಲೇ ತಂಗಿಗೆ ಮದುವೆ ಮಾಡಿದರು.
.
ನಮ್ಮ ಮದುವೆಯಾದ ಎರಡು ವರ್ಷಕ್ಕೆ ನಂಗೆ ಮಗುವಾಯಿತು. ನಾನು ಬಸುರಿಯಾಗಿದ್ದಾಗಲೇ ಇವರ ತಂಗಿ ಲಲಿತಾನೂ ಬಾಣಂತನಕ್ಕೆ ಬಂದಳು. ನಾನು ತೌರಿಗೆ ಹೋಗಲೇಬೇಕಾಯಿತು. ಕೈಲಾಗದು. ಭೈರಪ್ಪನವರೇ ತಂಗಿಯ ಬಾಣಂತನ ಮಾಡಿದರು. ಹೆಂಗಸರ ಹಾಗೆ ಮಗೂನ ಕಾಲ ಮೇಲೆ ಹಾಕ್ಕೊಂಡು ಅದಕ್ಕೆ ಸ್ನಾನ ಮಾಡಿಸುವುದರಿಂದ ಅವಳ ಊಟ, ಪಥ್ಯ ಎಲ್ಲ ನೋಡಿಕೊಂಡರು.

ನಮ್ಮ ಮದುವೆಯಾದಾಗ ಭೈರಪ್ಪ ತುಂಬಾ ದುರ್ಬಲರಾಗಿದ್ದರು. ಹುಟ್ಟಿದಾಗಿನಿಂದಲೂ ಸರಿಯಾದ ಊಟ ತಿಂಡಿ ಇಲ್ಲ. ಮದುವೆಯಾದ ಮೇಲೇ ಮನೆ ಊಟ. ಆಗ ಇವರಿಗೆ ತಮ್ಮ ದೇಹದಾಡ್ಯìನ ಸುಧಾರಿಸಿಕೋಬೇಕು ಅನ್ನುವ ಹಂಬಲ ತುಂಬಾ ತೀವ್ರವಾಯಿತು. ದಂಡೆ, ಬಸ್ಕಿ, ಸೂರ್ಯನಮಸ್ಕಾರ ಇಂಥ ವ್ಯಾಯಾಮಾನೆಲ್ಲ ಮಾಡೋಕ್ಕೆ ಶುರು ಮಾಡಿದರು. ಇಷ್ಟು ವ್ಯಾಯಾಮ ಮಾಡಿದ ಮೇಲೆ ಅದಕ್ಕೆ ತಕ್ಕನಾದ ಆಹಾರ ಬೇಡವೇ! ರಾತ್ರಿ ಕಡಲೇಕಾಳು, ಹೆಸರುಕಾಳು, ಒಣದ್ರಾಕ್ಷೆ ಇವನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗಾಗುತ್ತಲೇ ಅದನ್ನು ಕಿವುಚಿ ತಿನ್ನೋಕ್ಕೆ ಕೊಡಬೇಕಾಗಿತ್ತು. ಬಂದ ದುಡ್ಡೆಲ್ಲ ತಿನ್ನೋಕೆ ಹೋಗ್ತಿತ್ತು. ಸಣ್ಣದೊಂದು ಒಲೆ. ಚಿಕ್ಕ ಚಿಕ್ಕ ಸೌದೆ ಚಕ್ಕೆಗಳನ್ನು ಹಾಕಿ ಅಡಿಗೆ ತಿಂಡಿ ಮಾಡಬೇಕು. ಆಗೆಲ್ಲ ಇವರು ದಿನಕ್ಕೆ 20-25 ಚಪಾತಿಗಳನ್ನು ತಿಂತಾ ಇದ್ರು ಅಂದ್ರೆ ನಂಬಿ¤àರಾ... ದಿನಾಗಲೂ ಎರಡೆರಡು ಬಗೆ ಸಿಹಿ, ಖಾರಾ ಮಾಡಬೇಕಾಗಿತ್ತು. ಊಟಕ್ಕೆ ಕೋಸಂಬರಿ, ಗೊಜ್ಜು , ಹುಳಿ, ಸಾರು ಇವೆಲ್ಲ ಇರಬೇಕು. ಅನ್ನ ಇಷ್ಟಪಡ್ತಾ ಇರಲಿಲ್ಲ. ರಾತ್ರಿ ರಾಗಿಮುದ್ದೆ. ನನಗೋ ಅಡಿಗೆ ಪೂರೈಸೋ ಹೊತ್ತಿಗೆ ಸಾಕು ಸಾಕಾಗುತ್ತಿತ್ತು. ಒಂದರ್ಧ ಗಂಟೆ ಲೇಟಾದರೂ ಎಲ್ಲಿಲ್ಲದ ಸಿಟ್ಟು ಬಂದುಬಿಡುತ್ತಿತ್ತು ಇವರಿಗೆ. ಹುಬ್ಬಳ್ಳಿಯಲ್ಲಿ  ಒಂದು ವರ್ಷ ಇದ್ವಿ. ಆಮೇಲೆ ಗುಜರಾತಿನ ವಲ್ಲಭ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಸಿಕ್ಕಿತು. ನಾನು ಬಾಣಂತನಕ್ಕೆ ಹೋಗಿಧ್ದೋಳು ಮಗೂಗೆ ಹತ್ತು ತಿಂಗಳಾದ ಮೇಲೆ ಅಲ್ಲಿಗೆ ಹೊರಟೆ. ಅಷ್ಟು ಹೊತ್ತಿಗೆ ಭೈರಪ್ಪನವ್ರಿಗೆ ಸಂಗೀತದ ಮೇಲೆ ತುಂಬಾ ಆಸಕ್ತಿ ಬೆಳೆದಿತ್ತು, ಉತ್ತರಾದಿ ಸಂಗೀತ, ಆರು ವರ್ಷ ಕಾಲ ತಬಲಾ ನುಡಿಸೋದನ್ನು ಅಭ್ಯಾಸ ಮಾಡಿದರು ಕೂಡ. ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಬರೋಡ ವಿಶ್ವವಿದ್ಯಾಲಯ ಅವರಿಗೆ ಡಾಕ್ಟರೇಟ್‌ ನೀಡಿದ್ದು ಕಲೆಗಳನ್ನು ಆಧರಿಸಿ ಇವರು ಇಂಗ್ಲಿಷ್‌ನಲ್ಲಿ ಬರೆದ ಮಹಾಪ್ರಬಂಧ "ಸತ್ಯ ಮತ್ತು ಸೌಂದರ್ಯ'ಕ್ಕೆ ತಾನೇ. ಗುಜರಾತ್‌ನಲ್ಲಿ ನಾನೂ ಸ್ವಲ್ಪ ಹೊರಗೆ ಅಡ್ಡಾಡಲು ಶುರು ಮಾಡಿದೆ. ನಂಗೆ ಹಿಂದೂಸ್ಥಾನಿ ಸಂಗೀತವೇ ಸೇರದು. ಆದರೆ ಇವರಿಗೆ ಅದನ್ನು ಕೇಳಲೇಬೇಕು. ಸಂಜೆ ಇವರು ಕಾಲೇಜು ಮುಗಿಸಿಕೊಂಡು ಬರುವಷ್ಟರಲ್ಲಿ ಡಬ್ಬೀಲಿ ಚಪಾತಿ ಪಲ್ಯ ಇಟ್ಕೊಂಡು ಕಚೇರಿಗೆ ಹೋಗೋ ದಾರೀಲಿ ನಿಂತಿರ್ತಾ ಇದ್ದೆ. ಇವರು ತಿಂಡಿ ತಿಂದು, ನಾನು ಹಾಗೂ ನನ್ನ ಮಗನನ್ನು ಸೈಕಲ್‌ ಮೇಲೆ ಕೂರಿಸಿಕೊಂಡು ಹೋಗ್ತಿದ್ರು. ಸಭಾಂಗಣಕ್ಕೆ ಹೋದಾಗ ನಂಗೆ ಸಾಕಷ್ಟು ತಿಳುವಳಿಕೆ ಕೊಡ್ತಿದ್ದರು- ಹಾಡುತ್ತಾ ಇರೋರು ಇಂಥ ಊರಿನವ್ರು. ಅವ ಮುಖ ಕಟ್ಟು ಹೀಗಿದೆ, ಈಗ ಈ ರಾಗ ಹೇಳುತ್ತಾ ಇದಾರೆ, ಅಂತೆಲ್ಲ. ಸ್ವಲ್ಪ ಸಂಗೀತ ಜ್ಞಾನ ನನ್ನಲ್ಲೂ ಹುಟ್ಟಿತ್ತು.

"ಇವರು ಬೆಳಿಗ್ಗೆ ನನ್ನ ಮಗನಿಗೆ ನೀರು ಹಾಕಿ ಆರು ಗಂಟೆಗೆ ಕೆಲಸಕ್ಕೆ ಹೊರಟರು ಅಂದರೆ ಇಡೀ ದಿನ ನಂಗೆ ಬಟ್ಟೆ ಒಗೆಯೋದು, ಪಾತ್ರೆ ತೊಳೆಯೋದು, ಮಗೂನ ಆಡಿಸೋದು ಇಷ್ಟೆ. ಮದುವೆಯಾಗೋಕ್ಕೆ ಮೊದಲೇ ಸ್ವಲ್ಪ ಹಿಂದಿ ಓದಿದ್ದೆ. ಗುಜರಾತ್‌ಗೆ ಬಂದ ಮೇಲೆ ಇಂಗ್ಲಿಷ್‌, ಹಿಂದಿ, ಗುಜರಾತಿ ಮೂರು ಭಾಷೆಗಳನ್ನೂ ಮಾತನಾಡಲು ಕಲಿತು, ಹಿಂದಿ ಪೇಪರ್‌ ಓದೊRàತಿದ್ದೆ. ಆದರೆ, ಗುಜರಾತ್‌ಗೆ ಹೋದೆವು ಅಂತ ನಮ್ಮ ಕಷ್ಟ-ಕಾರ್ಪಣ್ಯವೇನೂ ಮುಗಿದಿರಲಿಲ್ಲ. ಇವರು ಪಿಎಚ್‌.ಡಿ ಮಾಡ್ತಿದ್ದಾಗ ಯೂನಿವರ್ಸಿಟಿಗೆ ಬೇರೆ ದುಡ್ಡು ಕಟ್ಟಬೇಕಾಗಿತ್ತು. ಮನೇಲಿ ಒಂದು ಇಂದ್ರೆ ಒಂದಿಲ್ಲ, ಯಾವಾಗಲೋ ಎರಡು ರೂಪಾಯಿ ಉಳಿತಾಯವಾದಾಗ ಎರಡು ಲೋಟ ಕೊಂಡ್ಕೊಂಡಿದ್ದಾಯಿತು. ಮತ್ತೆ ಯಾವಾಗಲೋ ಹತ್ತು ರೂಪಾಯಿ ಉಳೀತು. ಆಗ ಊಟದ ತಟ್ಟೆ ಕೊಂಡೆವು. ಹಿತ್ತಾಳೆ ಪಾತ್ರೇಲಿ ಹಾಲು ಕಾಯಿಸ್ತಾ ಇದ್ದೆ ಕಣ್ರೀ... ಯಾರೋ ಹೇಳಿದರು ಅದು ತಪ್ಪು ಅಂತ. ಆಗ ಇವರನ್ನು ಕಾಡಿಬೇಡಿ ಹಾಲಿಗೆ ಒಂದು, ಸಾರಿಗೆ ಒಂದು ಅಂತ ಎರಡು ಸ್ಟೀಲ್‌ ಪಾತ್ರೆಗಳನ್ನು ಕೊಂಡೆ. ಒಂದೊಂದು ಸಾಮಾನು ಕೊಳ್ಳೋದೂ ಒಂದೊಂದು ಪ್ರಯಾಸ. ಹಾರೆ, ಬಾಂಡಲಿ ಇಂಥವನ್ನು ಕೊಳ್ಳೋಕೂ ಎಷ್ಟು ಕಷ್ಟಪಟ್ಟಿದ್ದೀನಿ ಅಂತಾ. ಸೀರೆಯಂತೂ ಬಿಡಿ. ವರ್ಷಕ್ಕೊಂದಾದರೆ ಹೆಚ್ಚು. ಇವರಿಗೆ ತಾನೆ ಎಷ್ಟು ಬಟ್ಟೆ ಇತ್ತು! ಮೂರು ಪಾಯಿಜಾಮ, ಮೂರು ಜುಬ್ಟಾ , ಮೂರು ಬನಿಯನ್‌, ಎಣಿಸಿದ ಹಾಗೆ. ಇವರಿಗೆ ಮದುವೆಯಲ್ಲಿ ಕೊಟ್ಟ ಸೂಟಿತ್ತು, ನಂಗೆ ಧಾರೇಲಿ ಕೊಟ್ಟಿದ್ದ ಒಂದು ಕಲಾಪತ್ತು ಸೀರೆ. ಒಂದು ಸಲ ಸ್ನೇಹಿತರ ಜತೆ ಪಿಕ್ನಿಕ್‌ಗೆ ಹೋಗಿದ್ವೀ. ಚೆನ್ನಾಗಿ ಅಡಿಗೆ ಮಾಡ್ಕೊಂಡಿದ್ದೆ. ಆದರೆ ಮನೇಲಿ ಸ್ಟೀಲ್‌ ಪಾತ್ರೆಗಳೇ ಇರಲಿಲ್ಲ ಅಂದ್ನಲ್ಲ, ಪ್ಲಾಸ್ಟಿಕ್‌ ಡಬ್ಬಿಗಳಲ್ಲಿ ಅವನ್ನು ಹಾಕ್ಕೊಂಡು ಹೋಗಿದ್ದೆ. ಎಲ್ರೂ ತಿನ್ನೋಕೆ ಕೂತರು. ಆದರೆ ನನ್ನ ಊಟ ತಿಂಡಿಯೆಲ್ಲ ಪ್ಲಾಸ್ಟಿಕ್‌ ವಾಸನೆ !

ನಡುರಾತ್ರಿಯಾದರೂ ಇವರು ಬರೀತಾ ಕೂತಿದಾರೆ ಅಂತ ಗೊತ್ತಾದರೂ ನಾನೇನೂ ಮಾಡಲಾರೆ. ಪರ್ವ ಬರೆಯುವಾಗಲಂತೂ ಗೊತ್ತಿಲ್ಲ ಇವರ ಆರೋಗ್ಯದ ಸ್ಥಿತಿ ಏನಾಗಿತ್ತು ಅಂತ. ಆಗಮಾತ್ರ ನಾವಿಬ್ಬರೇ ಟೂರ್‌ ಹೋಗಿದ್ದೆವು. ಕಾದಂಬರಿ ರೂಪಗೊಳ್ಳಲು ನಾಲ್ಕು ವರ್ಷಗಳು ಹಿಡಿದವು. ತೀರಾ ಸುಸ್ತಾಗಿಬಿಟ್ಟಿದ್ದರು. ಮಾನಸಿಕವಾಗಿ ಕೂಡಾ... ಹುಬ್ಬಳ್ಳಿಯಲ್ಲಿ ಡಾಕ್ಟರ ಹತ್ತಿರ ಹೋದಾಗ ಅವರೆಂದರು, "ನಿಮ್ಮ ತಲೇಲಿ ಇರುವುದನ್ನು ಬರೆದು ಬಿಡಿ. ಆಗಲೇ ನೀವು ಸುಧಾರಿಸಿಕೊಳ್ಳೋದು ಅಂತ. ಮೈಸೂರಿಗೆ ಬಂದು ಕೂತು ಸತತವಾಗಿ ಅದನ್ನು ಬರೆದು ಪೂರೈಸಿದಾಗಲೇ ಇವರಿಗೆ ನೆಮ್ಮದಿಯಾದದ್ದು.

ಟಿಪ್ಪಣಿ:  
ಇದು 1994ರಲ್ಲಿ ಬರೆದ ಎಸ್‌. ಎಲ್‌. ಭೈರಪ್ಪ : ಬರಹವೇ ಉಸಿರು-ಬದುಕು  ಲೇಖನದ ಆಯ್ದ ಭಾಗ ಮಾತ್ರ. ಈ ಲೇಖನದ ಪೂರ್ಣಪಾಠ ಇಂದು ಬೆಂಗಳೂರಿನಲ್ಲಿ ಬಿಡುಗಡೆಗೊಳ್ಳುತ್ತಿರುವ ಪತ್ನಿಯರು ಕಂಡಂತೆ ಪ್ರಸಿದ್ಧರು ಕೃತಿಯಲ್ಲಿದೆ.
ಲೇಖಕಿ : ಬಿ. ಎಸ್‌. ವೆಂಕಟಲಕ್ಷ್ಮೀ
ಪ್ರಕಾಶಕರು : ಅಹರ್ನಿಶಿ ಪ್ರಕಾಶನ, ಜ್ಞಾನವಿಹಾರ ಬಡಾವಣೆ, ಕಂಟ್ರಿಕ್ಲಬ್‌ ಎದುರು, ವಿದ್ಯಾನಗರ, ಶಿವಮೊಗ್ಗ.)

ಸರಸ್ವತಿ ಭೈರಪ್ಪ


Trending videos

Back to Top