CONNECT WITH US  

ಕಾದಾಡಿ ಕೊನೆಗೂ ಸಿಕ್ಕಿತು ನೆಲೆ!

ಈ ಬಾರಿ ಜೋರಾಗಿ ನನ್ನ ಕೋರೆಹಲ್ಲುಗಳಿಂದ ಅದರ ಒಂದು ಕಾಲನ್ನು ಹಿಡಿದು ಬಿಟ್ಟೆ...

ಓಡಿ ಹೋಗೋಣವೆಂದು ಯೋಚಿಸಿದೆ. ಆದರೆ ಎಲ್ಲಿಗೆ ಹೋಗುವುದು? ಎಷ್ಟು ದಿನ ಹೀಗೆಯೇ ಓಡಾಡುವುದು? ನನ್ನದೇ ಆದ ಮನೆಯೊಂದು ಬೇಕಲ್ಲವೇ? ಹೆದರಿದಷ್ಟು ನನಗೆ ನೆಲೆಯೂರಲು ಆಗುವುದೇ ಇಲ್ಲ. ಈ ಜಾಗದಲ್ಲಿ ಆಹಾರವಿದೆ, ನೀರೂ ಇದೆ. ಇದನ್ನು ಬಿಟ್ಟು ಇನ್ನೆಲ್ಲಿಗೆ ಹೋಗುವುದು? 

(ಮುಂದುವರಿದಿದೆ)
ಒಂ ದು ರಾತ್ರಿ ನಡೆದು ಹೋಗುವಾಗ ಹುಲಿಯ ಹಿಕ್ಕೆಯೊಂದು ಕಂಡಿತು. ಮೂಸಿ ನೋಡಿದೆ. ಸ್ವಲ್ಪ ಹಳೆಯದೆಂದು ಅನಿಸಿತು. ಆದರೆ ಸ್ಪಷ್ಟವಾಗಿ ಅದು ಗಂಡು ಹುಲಿಯದೆ ಆಗಿತ್ತು. ಆದರೆ ಹಳೆಯ ಹಿಕ್ಕೆಯಾದುದರಿಂದ ಇಲ್ಲಿಗೆ ಅದು ಹೆಚ್ಚು ಬರುತ್ತಿರಲಿಲ್ಲವೆಂದು ಅನಿಸಿತು. ಸ್ವಲ್ಪ ದಿನ ಕಾದು ನೋಡುವುದೆಂದು ನಿರ್ಧರಿಸಿದೆ. ಹೀಗೆ ನನ್ನ ಜೀವನ ಈ ಹೊಸ ಕಾಡಿನಲ್ಲಿ ಪ್ರಾರಂಭವಾಗಿತ್ತು. ಆಹಾರಕ್ಕೆ ಮತ್ತು ನೀರಿಗೇನೂ ಹೆಚ್ಚು ಕೊರತೆಯಿರಲಿಲ್ಲ. ಎರಡು ಮೂರು ದಿನಕ್ಕೊಮ್ಮೆ ಜಿಂಕೆಗಳನ್ನು ಬೇಟೆಯಾಡುತ್ತಿ¨ªೆ. ಕಾಟಿ ಮತ್ತು ಕಡವೆಗಳು ಇಲ್ಲಿ ಅಷ್ಟಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಕಾಣುತ್ತಿದ್ದವು. ಇವು ಹೆಚ್ಚಿದ್ದರೆ ನನಗೂ ಉಪಯೋಗವಾಗುತ್ತಿತ್ತು. ಕಾಟಿಯನ್ನು ಬೇಟೆಯಾಡಿದರೆ ಸುಮಾರು ದಿನಗಳು ನೆಮ್ಮದಿಯಿಂದ ಇರಬಹುದು. ಜಿಂಕೆಗಳಾದರೆ ಪದೇ ಪದೆ ಬೇಟೆಯಾಡಬೇಕು. 

ಹೆಚ್ಚಾಗಿ ನಾನು ಬೇಟೆಯಾಡುತ್ತಿದ್ದದ್ದು ತೊರೆಯ ಹತ್ತಿರವೇ. ಈ ಭಾಗದಲ್ಲಿ ಒಂದೆರೆಡು ಕೆರೆಗಳು ಕೂಡ ಇದ್ದವು. ಒಂದು ರಾತ್ರಿ ಕೆರೆಗೆ ಬಂದಿದ್ದ ಕಾಟಿಯೊಂದನ್ನು ಸಾಹಸದಿಂದ ಹಿಡಿದೇ ಬಿಟ್ಟೆ. ಬಹಳ ಸಂತೋಷವಾಯಿತು. ಸಾಕಷ್ಟು ದಿನಗಳಿಗಾಗುವಷ್ಟು ಆಹಾರವಾಗಿತ್ತು. ಕಾಟಿಯನ್ನು ಎಳೆದುಕೊಂಡು ಹತ್ತಿರದಲ್ಲಿದ್ದ ಪೊದೆಗೆ ಹೋಗಿ ತಿನ್ನಲು ಪ್ರಾರಂಭಿಸಿದೆ. ಕಾಟಿ ಬಹುದೊಡ್ಡದಾಗಿದ್ದ ಕಾರಣ, ಸಂಪೂರ್ಣವಾಗಿ ಮುಗಿಸಲು ಮೂರ್ನಾಲ್ಕು ದಿನವಾದರೂ ಬೇಕಾಗುತ್ತದೆಂದು ಅಂದಾಜಿಸಿದೆ. 

ಕಾಟಿ ಹಿಡಿದ ಎರಡನೇ ರಾತ್ರಿ ನನಗೆ ಆಘಾತವಾಯಿತು. ಸ್ವಲ್ಪ$ದೂರದಲ್ಲಿಯೇ ಗಂಡು ಹುಲಿಯೊಂದು ಕೂಗಿದ ಶಬ್ದ ಕೇಳಿತು ಮತ್ತು ಆ ಶಬ್ದ ನನ್ನ ದಿಕ್ಕಿನಲ್ಲಿಯೇ ಹತ್ತಿರ ಹತ್ತಿರ ಬರುತ್ತಿದೆ! 

ಇಲ್ಲಿ ಬಂದು ಇಷ್ಟು ದಿನವಾದರೂ ಯಾವ ಹುಲಿಯ ಹೊಸ ಕುರುಹೂ ಕಂಡಿರಲಿಲ್ಲ. ಆದರೆ ನನ್ನ ಲೆಕ್ಕಾಚಾರ ತಪ್ಪಾಗಿತ್ತು. ಓಡಿ ಹೋಗೋಣವೆಂದು ಯೋಚಿಸಿದೆ. ಆದರೆ ಎಲ್ಲಿಗೆ ಹೋಗುವುದು? ಎಷ್ಟು ದಿನ ಹೀಗೆಯೇ ಓಡಾಡುವುದು? ನನ್ನದೇ ಆದ ಮನೆಯೊಂದು ಬೇಕಲ್ಲವೇ? ಹೆದರಿದಷ್ಟು ನನಗೆ ನೆಲೆಯೂರಲು ಆಗುವುದೇ ಇಲ್ಲ. ಈ ಜಾಗದಲ್ಲಿ ಆಹಾರವಿದೆ, ನೀರೂ ಇದೆ. ಇದನ್ನು ಬಿಟ್ಟು ಇನ್ನೆಲ್ಲಿಗೆ ಹೋಗುವುದು? ಇದಕ್ಕಿಂತ ಉತ್ತಮ ಜಾಗ ಹುಡುಕುವುದು ಬಹು ಕಷ್ಟ. ಸ್ವಲ್ಪ ಮನಸ್ಸು ಗಟ್ಟಿ ಮಾಡಿಕೊಂಡೆ, ನೋಡಿಯೇ ಬಿಡುವೆ, ಈ ಹುಲಿಯನ್ನು ಎದರಿಸುವ ಪ್ರಯತ್ನ ಮಾಡುವೆ ಎಂದು ನಿರ್ಧರಿಸಿದೆ. ನನ್ನ ಮನಸ್ಸು ಸ್ಥಿಮಿತಕ್ಕೆ ಬಂದಿತು. ಕಾಟಿಯನ್ನು ತಿನ್ನುವುದನ್ನು ಮುಂದುವರೆಸಿದೆ.   ಸ್ವಲ್ಪ ಹೊತ್ತಿನಲ್ಲಿ ಆ ಗಂಡು ಹುಲಿಯ ಕೂಗು ಬಹು ಹತ್ತಿರದಿಂದ ಬರುತಿತ್ತು. ಖಂಡಿತವಾಗಿಯೂ ಅದಕ್ಕೆ ನನ್ನ ಸುಳಿವು ಸಿಕ್ಕಿತ್ತು. ಅದರ ಕೂಗಿನಲ್ಲಿಯೇ ಅದರ ಕೋಪ, ನನ್ನ ಬಗ್ಗೆ ಅಸಮ್ಮತಿ ಎದ್ದು ಕಾಣುತ್ತಿತ್ತು. ಕೆಲ ಕ್ಷಣಗಳಲ್ಲಿ ನಾನು ಕುಳಿತಿದ್ದ ಪೊದೆಯ ಹತ್ತಿರವೇ ಅದರ ತಲೆ ಕಂಡಿತು. ನನ್ನನ್ನು ನೋಡಿದೊಡನೆಯೇ ಜೋರಾಗಿ ಗರ್ಜಿಸಿತು. ನನ್ನ ಬಲವೆಲ್ಲ ಇಳಿದಂತಾಯಿತು. ಆದರೆ ತಕ್ಷಣವೇ ಸಾವರಿಸಿಕೊಂಡು ಎದ್ದು ನಿಂತೆ. ಎರಡು ಹೆಜ್ಜೆ ಮುಂದಿಟ್ಟೆ. ಆ ಹುಲಿ ಇನ್ನಷ್ಟು ಜೋರಾಗಿ ಆರ್ಭಟಿಸಿ  ಎರಡು ಹೆಜ್ಜೆ ಮುಂದೆ ಬಂದಿತು. ಈಗ ಅದನ್ನು ಸಂಪೂರ್ಣವಾಗಿ ನೋಡಲು ನನಗೆ ಅವಕಾಶವಾಯಿತು. ದೊಡ್ಡ ಹುಲಿಯಾದರೂ ನೋಡಲು ಅಷ್ಟು ಗಟ್ಟಿಮುಟ್ಟಿರಲಿಲ್ಲ. ವಯಸ್ಸಾದ ಹಾಗೆ ಕಾಣುತಿತ್ತು. ನಾನು ಹೆದರಿಸಬÇÉೆ ಎಂದೆನಿಸಿತು. ಆ ಅವಕಾಶವನ್ನು ಬಿಡಬಾರದೆಂದು ನಿರ್ಧರಿಸಿದೆ. 

ನಾನು ಎರಡು ಹೆಜ್ಜೆ ಮುಂದುವರಿದೆ. ಆ ಹುಲಿ ಇನ್ನಷ್ಟು ಕೋಪದಿಂದ ನನ್ನತ್ತ ಓಡಿ ಬಂದಿತು. ತನ್ನ ಪಂಜದಿಂದ ನನ್ನ ಕಡೆಗೆ ಜೋರಾಗಿ ಬೀಸಿತು. ಬಗ್ಗಿ ತಪ್ಪಿಸಿಕೊಂಡೆ. ಎರಡೂ ಕಾಲುಗಳಿಂದ ನನ್ನತ್ತ ಮತ್ತೆ ಬೀಸಿತು. ಸ್ವಲ್ಪ ಹಿಂದೆ ಸರಿದು ತಪ್ಪಿಸಿಕೊಂಡೆ. ಈಗ ನಾನು ಜೋರಾಗಿ ಅದರ ಕುತ್ತಿಗೆಗೆ ಬಾಯಿ ಹಾಕಲು ಪ್ರಯತ್ನಿಸಿದೆ. ಆಗಲಿಲ್ಲ. ಆದರೆ ನನ್ನ ಪಂಜ ಅದರ ಎದೆ ಭಾಗಕ್ಕೆ ತಾಗಿದಂತಾಯಿತು. ರಕ್ತ ಸೋರಿಬರಲು ಪ್ರಾರಂಭವಾದಂತೆ ಕಂಡಿತು. ಆ ಹುಲಿ ಇನ್ನಷ್ಟು ರೊಚ್ಚಿಗೆದ್ದು ನನ್ನತ್ತ ನುಗ್ಗಿತು. ನಾನು ಸ್ವಲ್ಪ ಹಿಂದೆ ಸರಿದು ಬಚಾವಾದೆ ಮತ್ತು ಈ ಬಾರಿ ಜೋರಾಗಿ ನನ್ನ ಕೋರೆಹಲ್ಲುಗಳಿಂದ ಅದರ ಒಂದು ಕಾಲನ್ನು ಹಿಡಿದು ಬಿಟ್ಟೆ. ಅದು ತನ್ನ ಇನ್ನೊಂದು ಕಾಲನ್ನು ನನ್ನತ್ತ ಬೀಸಿತು. ಅದರ ಉಗುರಿನಿಂದ ನನ್ನ ಎಡಗೆನ್ನೆಯ ಮೇಲೆ ಆಳವಾದ ಗಾಯ ಮಾಡಿತು. ಅದರ ಕಾಲನ್ನು ಬಿಟ್ಟು ಬಿಟ್ಟೆ. ಆಗ ಅದು ಎದ್ದು ನಿಂತು ಹಿಂದಿರುಗಿ ಓಡಲು ಪ್ರಾರಂಭಿಸಿತು. ಅದರ ಕಾಲಿಗೆ ದೊಡ್ಡ ಗಾಯವಾಗಿರಬೇಕು, ಕುಂಟುತ್ತಾ, ಕುಂಟುತ್ತಾ ಓಡುತ್ತಿತ್ತು. ಇದು ನನ್ನ ಅವಕಾಶವಾಗಿತ್ತು, ಅದನ್ನು ಬೆನ್ನಟ್ಟಿದೆ. ಸ್ವಲ್ಪ ದೂರ ಕೂಗುತ್ತ, ಅದನ್ನು ಹೆದರಿಸುತ್ತ ಅದರ ಹಿಂದೆ ಓಡಿದೆ. ನನಗೆ ಕಾಣದಷ್ಟು ದೂರ ಆ ಹುಲಿಯಾಗಲೇ ಓಡಿಹೋಗಿತ್ತು. ಅದನ್ನು ಹಿಂಬಾಲಿಸುವುದನ್ನು ನಿಲ್ಲಿಸಿದೆ. 

ಹಿಂದೆ ಬಂದು ನಾನು ತಿನ್ನುತ್ತಿದ್ದ ಕಾಟಿಯನ್ನು ಇನ್ನಷ್ಟು ಕಬಳಿಸಿದೆ. ಇದೀಗ ಈ ಕಾಟಿಯ ಮೇಲಿನ ಹಕ್ಕು ಸಂಪೂರ್ಣವಾಗಿ ನನ್ನದಾಗಿತ್ತು. ಕಾದಾಡಿ ಬಹಳಷ್ಟು ಬಾಯಾರಿದ್ದೆ. ತೊರೆಯ ಬಳಿಹೋಗಿ ನೀರು ಕುಡಿದು ಸ್ವಲ್ಪ ವಿಶ್ರಾಂತಿಸಿ ಕಾಟಿಯಿದ್ದ ಬಳಿ ಹಿಂದಿರುಗಿದೆ. ಇನ್ನು ಹೆಚ್ಚು ತಿನ್ನುವುದು ಬೇಡವೆಂದು ಮಲಗಿದೆ. ಇದೀಗ ಈ ಪ್ರದೇಶ ನನ್ನದಾಯಿತೆಂದು ಅನಿಸಿತು. ಕೊನೆಗೂ ನನಗೊಂದು ನೆಲೆ ಸಿಕ್ಕಿತ್ತು. ಯಾರಿಗೂ ಹೆದರಬೇಕಾಗಿರಲಿಲ್ಲ. ಇನ್ನು ಆ ಹುಲಿ ನನ್ನ ತಂಟೆಗೆ ಬರುವುದು ಅನುಮಾನ. ಅದು ಕುಂಟುತ್ತಾ ಓಡಿ ಹೋದದ್ದು ನೋಡಿದರೆ ಅದಕ್ಕೆ ಬಹು ದೊಡ್ಡ ಗಾಯವೇ ಆಗಿದೆಯೆನಿಸುತ್ತಿತ್ತು. ಅಷ್ಟು ದೊಡ್ಡ ಗಾಯವಿದ್ದರೆ ಅದು ಬಹಳಷ್ಟು ದಿನ ಬೇಟೆಯಾಡುವುದು ಕಷ್ಟವಾಗಬಹುದು. ಬೇಟೆಯಾಡಲು ಆಗದಿದ್ದರೆ ಅದು ಸಾಯಲೂಬಹುದು. ನಾನು ಬೆಟ್ಟ ದಾಟಿ ಬಂದದ್ದು ಒಳ್ಳೆಯ ನಿರ್ಧಾರವೇ ಆಗಿತ್ತು. ಇನ್ನು ನನ್ನ ಭವಿಷ್ಯ ಇಲ್ಲಿಯೇ ಎಂದು ನಿರ್ಧರಿಸಿದೆ. 

2014 ಅಕ್ಟೋಬರ್‌ ತಿಂಗಳು: ಮಲೈ ಮಹದೇಶ್ವರ ಬೆಟ್ಟದಲ್ಲಿ ನಾವು ಕ್ಯಾಮೆರಾ ಟ್ರಾಪ್‌ ಅಧ್ಯಯನ ನಡೆಸಲು ಸೂಕ್ತ ಸ್ಥಳ ಗುರುತಿಸಲು ಕಾಡು ತಿರುಗುತ್ತಿದ್ದೆವು. ನಮ್ಮೊಡನಿದ್ದ ಸ್ಥಳೀಯ ಉಪ ವಲಯ ಅರಣ್ಯಾಧಿಕಾರಿ ದೀಪಕ್‌ "ಸರ್‌, ಕ್ಯಾಮರಾ ಕಟ್ಟಲು ಸೂಕ್ತ ಸ್ಥಳಗಳನ್ನು ಗುರುತಿಸಿ ತಿಳಿಸಿ' ಎಂದರು. ಪಿ.ಜಿ.ಪಾಳ್ಯ ಪ್ರದೇಶದಲ್ಲಿದ್ದ ಕೆರೆಯೊಂದಕ್ಕೆ ಬರುವ ಹಾದಿ ಸೂಕ್ತವೆನಿಸಿ ಕೆಲ ಸ್ಥಳಗಳನ್ನು ದೀಪಕ್‌ ಅವರಿಗೆ ಗುರುತಿಸಿ ತಿಳಿಸಿದೆವು.  

ಮಲೈ ಮಹದೇಶ್ವರಬೆಟ್ಟ ವನ್ಯಜೀವಿಧಾಮಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಜಾವೇದ್‌ ಮುಮ್ತಾಜ್‌ರವರು ಕೆಲವೇ ದಿನಗಳಲ್ಲಿ ""ನೀವು ಸೂಚಿಸಿದ್ದ ಸ್ಥಳಗಳಲ್ಲಿ ಕ್ಯಾಮರಾ ಕಟ್ಟಿದ್ದೆವು. ಒಂದು ಹುಲಿಯ ಚಿತ್ರ ಬಂದಿದೆ ನೋಡಿ'' ಎಂಬ ಸಂದೇಶ ಕಳುಹಿಸಿಕೊಟ್ಟರು. ಅದೊಂದು ದೊಡ್ಡ, ವಯಸ್ಕ ಗಂಡು ಹುಲಿಯಾಗಿತ್ತು. ಕೆರೆಗೆ ಬಂದು ನೀರಿಗಿಳಿದು ದಾಹ ತಣಿಸಿಕೊಂಡು ಎದ್ದು ಹೋಗಿತ್ತು.   

2015: ಬಿಳಿಗಿರಿರಂಗನ ಬೆಟ್ಟದ ಕ್ಷೇತ್ರ ನಿರ್ದೇಶಕರಾಗಿದ್ದ ಲಿಂಗರಾಜುರವರು ""ನಮ್ಮ ಹುಲಿ ಯೋಜನೆ ಪ್ರದೇಶದಲ್ಲಿ ಕ್ಯಾಮೆರಾ ಟ್ರಾಪ್‌ ಮಾಡಿದ ದತ್ತಾಂಶವನ್ನು ವಿಶ್ಲೇಷಿಸಲು ಸ್ವಲ್ಪ ನೆರವಾಗುತ್ತೀರಾ?'' ಎಂದು ಕೋರಿದರು. ಬಿಳಿಗಿರಿರಂಗನ ಬೆಟ್ಟ ಹುಲಿ ಯೋಜನಾ ಪ್ರದೇಶದಲ್ಲಿ ಕ್ಯಾಮೆರಾ ಟ್ರಾಪ್‌ನಲ್ಲಿ ಸಿಕ್ಕ ಎಲ್ಲಾ ಹುಲಿಗಳ ಚಿತ್ರಗಳನ್ನು ಮತ್ತು ಇತರ ಮಾಹಿತಿಗಳನ್ನು ದೊರಕಿಸಿಕೊಟ್ಟರು. ಅದನ್ನು ವಿಶ್ಲೇಷಿಸಿ ನೋಡಿದಾಗ ಅಲ್ಲಿ ಸುಮಾರು 55 ಹುಲಿಗಳಿರುವುದು ದತ್ತಾಂಶದಿಂದ ಪತ್ತೆಯಾಯಿತು. ಅದರಲ್ಲಿ ಮೇ 2015ರಲ್ಲಿ ಕೊಳ್ಳೇಗಾಲ ವಲಯದಲ್ಲಿ ಹೆಣ್ಣು ಹುಲಿಯೊಟ್ಟಿಗೆ ಹೆಚ್ಚು ಕಡಿಮೆ ಸುಮಾರು ಒಂದೂವರೆ ವರ್ಷದ ವಯಸ್ಸಿನ ಮೂರು ಮರಿಗಳಿರುವುದು ಕ್ಯಾಮೆರಾದಲ್ಲಿ ಸೆರೆಸಿಕ್ಕಿದ್ದವು. ಅದರಲ್ಲಿದ್ದ ಗಂಡು ಮರಿಯೊಂದಕ್ಕೆ ಬಿ.ಆರ್‌.ಎಸ್‌ ಎ-02 ಎಂದು ನಾಮಕರಣ ಮಾಡಿದ್ದೆವು.  

2016 ಜೂನ್‌ ತಿಂಗಳು: ಮಲೈ ಮಹದೇಶ್ವರ ಬೆಟ್ಟದಲ್ಲಿ ಚಿರತೆಗಳ ಬಗ್ಗೆ ನಮ್ಮ ಕ್ಯಾಮೆರಾ ಟ್ರಾಪ್‌ ಅಧ್ಯಯನ ನಡೆಯುತಿತ್ತು. ತಿಂಗಳ ಮಧ್ಯ ಭಾಗದಲ್ಲಿ ಪಿ.ಜಿ.ಪಾಳ್ಯ ಭಾಗದ ಕೆರೆಯ ಹತ್ತಿರದಲ್ಲಿ ಸುಮಾರು ಎರಡೂವರೆ ವರ್ಷ ವಯಸ್ಸಿನ ಪ್ರಾಯದಲ್ಲಿದ್ದ ಗಂಡು ಹುಲಿಯೊಂದು ಟ್ರಾಪ್‌ನಲ್ಲಿ ತನ್ನ ಚಿತ್ರಗಳನ್ನು ತಾನೇ ತೆಗೆದುಕೊಂಡು ನಮಗೆ ಹೊಸ ಮಾಹಿತಿಯನ್ನು ಕೊಡಲು ಪ್ರಾರಂಭಿಸಿತು. ಅದನ್ನು ನಮ್ಮಲ್ಲಿರುವ ಇತರ ಹುಲಿಗಳು ಮತ್ತು ಬಿಳಿಗಿರಿರಂಗನ ಬೆಟ್ಟದಲ್ಲಿ ಅರಣ್ಯ ಇಲಾಖೆಯವರು ಮಾಡಿದ್ದ ಕ್ಯಾಮೆರಾ ಟ್ರಾಪ್‌ನಲ್ಲಿ ಸಿಕ್ಕ ಹುಲಿಗಳ ಚಿತ್ರಗಳಿಗೆ ಹೋಲಿಸಿ ನೋಡಿದಾಗ ಈ ಗಂಡು ಹುಲಿ ಬಿ.ಆರ್‌.ಎಸ್‌ ಎ-02 ಎಂದೇ ನಮಗೆ ತಿಳಿಯಿತು. ಈಗ ಈ ಹುಲಿ ತಾನು ಹುಟ್ಟಿದ ಬಿಳಿಗಿರಿರಂಗನ ಬೆಟ್ಟ ಪ್ರದೇಶವನ್ನು ಬಿಟ್ಟು ಮಲೈ ಮಹದೇಶ್ವರಬೆಟ್ಟದ ಕಾಡುಗಳಲ್ಲಿ ತನ್ನ ನೆಲೆ ಕಂಡುಕೊಂಡಿತ್ತು. ಪಿ.ಜಿ.ಪಾಳ್ಯದಲ್ಲಿ 2014ರಲ್ಲಿ ಅರಣ್ಯ ಇಲಾಖೆಯ ಕ್ಯಾಮೆರಾ ಟ್ರಾಪ್‌ನಲ್ಲಿ ಸಿಕ್ಕಿದ ವಯಸ್ಸಾದ ಗಂಡು ಹುಲಿಯಿದ್ದ ಜಾಗದಲ್ಲೇ ಈಗ ಈ ಯುವ ಹುಲಿ ತನ್ನ ನೆಲೆ ಸ್ಥಾಪಿಸಿಕೊಂಡಿತ್ತು. ಬಹುಶಃ ಅಲ್ಲಿ ಮುಂಚೆಯಿದ್ದ ದೊಡ್ಡ ಗಂಡು ಹುಲಿಯನ್ನು ಬಿ.ಆರ್‌.ಎಸ್‌ ಎ-02  ಓಡಿಸಿ ತನ್ನ ನೆಲಹರಹು ಸ್ಥಾಪಿಸಬಹುದು. 

 ಬಿಳಿಗಿರಿರಂಗನಬೆಟ್ಟ ಮತ್ತು ಮಲೈ ಮಹದೇಶ್ವರಬೆಟ್ಟಗಳ ಕಾಡುಗಳನ್ನು ಜೋಡಿಸುವ ಬೋರೆದೊಡ್ಡಿ ಮತ್ತು ಹೊಸದೊಡ್ಡಿ ಹಳ್ಳಿಗಳ ಮಧ್ಯೆಯಿರುವ ಚಿಕ್ಕ ಅರಣ್ಯ ಪ್ರದೇಶದ ಕಾರಿಡಾರ್‌ ಮೂಲಕ ಬಹುಶಃ ಬಿ.ಆರ್‌.ಎಸ್‌ ಎ-02 ಇಲ್ಲಿಗೆ ಬಂದಿರಬಹುದು. ಆ ಕಾರಿಡಾರ್‌ನಲ್ಲಿ ರಾಜ್ಯ ಹೆದ್ದಾರಿಯೊಂದು ಕೂಡ ಸಾಗುತ್ತದೆ. ಅದೃಷ್ಟವಶಾತ್‌ ಅಲ್ಲಿ ರಾತ್ರಿಯ ವೇಳೆ ವಾಹನ ಸಂಚಾರ ಬಹು ಕಡಿಮೆ. ಹಾಗಾಗಿ ಹುಲಿ, ಆನೆ, ಕಾಟಿಯಂತಹ ಪ್ರಾಣಿಗಳಿನ್ನೂ ಕಾಡಿನ ಕಾರಿಡಾರ್‌ ಉಪಯೋಗಿಸಿ ರಸ್ತೆ ದಾಟಬಹುದಾಗಿದೆ. ಆದರೆ ಮುಂದೆ ಈ ರಸ್ತೆಯೇನಾದರೂ ಅಗಲೀಕರಣವಾದರೆ ಪ್ರಾಣಿಗಳ ಓಡಾಟಕ್ಕೆ ದೊಡ್ಡ ಕಂಟಕವಾಗಲಿದೆ ಮತ್ತು ವನ್ಯಜೀವಿಗಳಿಗಿರುವ ಈ ಕೊಂಡಿ ಮುರಿದುಬೀಳಲಿದೆ.    

ಮಲೈ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ 2016ರಲ್ಲಿ ಬಂದು ತನ್ನ ನೆಲಹರುವನ್ನು ಸ್ಥಾಪಿಸಿಕೊಂಡಿರುವ  ಬಿ.ಆರ್‌.ಎಸ್‌ ಎ-02 

ಸಂಜಯ್‌ ಗುಬ್ಬಿ
ಚಿತ್ರ: ಎನ್‌.ಸಿ.ಫ್./ಸಂಜಯ್‌ ಗುಬ್ಬಿ  


Trending videos

Back to Top