CONNECT WITH US  

ಅವಸಾನದತ್ತ ಪ್ರಾಚೀನ ದೇವಸ್ಥಾನ

ಬಸವಕಲ್ಯಾಣ: ಪ್ರವಾಸಿಗರ ತಾಣವಾಗಬೇಕಾಗಿದ್ದ ಮೊರಖಂಡಿ ಗ್ರಾಮದ ಸೋಮಲಿಂಗೇಶ್ವರ ದೇವಸ್ಥಾನ ನಿರ್ಲಕ್ಷ್ಯಕ್ಕೆ ಒಳಗಾಗಿ ಅವಸನದತ್ತ ಸಾಗುತ್ತಿದೆ. ನಗರದಿಂದ ಸ್ವಲ್ಪ ದೂರದಲ್ಲೇ ಇರುವ ಮೊರಖಂಡಿ ಗ್ರಾಮದ ಕೆರೆ ದಡದ ಎತ್ತರ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ.

ಹಿಂದಿನ ಕಾಲದಲ್ಲಿ ಮಯೂರಖಂಡಿ ಎಂದು ಕರೆಯುವ ಗ್ರಾಮವೇ ಇಂದು ಮೊರಖಂಡಿಯಾಗಿ ಬದಲಾಗಿದೆ. ಚಾಲುಕ್ಯರ ಕಾಲದ ಮಾದರಿಯಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ ಎಂಬುದಕ್ಕೆ ಹಿಂಬದಿಯ ಭಾಗಕ್ಕೆ ಕಲಾಕೃತಿಯುಳ್ಳ ಕಲ್ಲುಗಳನ್ನು ಅಳವಡಿಸಿರುವುದು ನಿದರ್ಶನವಾಗಿದೆ. 

ಆದರೆ ಸಂರಕ್ಷಣೆ ಇಲ್ಲದೆ ದೇವಸ್ಥಾನ ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿ ಹಾಳು ಕೊಂಪೆಯಾದ್ದು, ಪ್ರವಾಸಿಗರಿಗೆ ಮತ್ತು ಗ್ರಾಮಸ್ಥರಿಗೆ ನಿರಾಶೆ ಆಗುವಂತೆ ಮಾಡಿದೆ. ದೇವಸ್ಥಾನದ ಹಿಂದಿನ ಭಾಗ ಸಂಪೂರ್ಣ ಹಾಳಾಗಿದೆ. ಕಲಾಕೃತಿ
ಇರುವ ಕಲ್ಲುಗಳು ಚಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದಿವೆ. ಮತ್ತು ದೇವಸ್ಥಾನದ ಗೋಡೆಗಳ ಮೇಲೆ ಮುಳ್ಳಿನ ಗಿಡ-ಗಂಟಿಗಳು ಬೆಳೆದಿವೆ. 

ಈ ಹಿಂದಿನ ಶಾಸಕರಿಗೆ ಬಸವಕಲ್ಯಾಣ ಅಭಿವೃದ್ಧಿ ಯೋಜನೆಯಡಿ ದೇವಸ್ಥಾನ ಅಭಿವೃದ್ಧಿ ಪಡಿಸಬೇಕು ಎಂದು ಲಿಖೀತ ಮತ್ತು ಮೌಖೀಕವಾಗಿ ಮನವಿ ಮಾಡಲಾಗಿತ್ತು. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. 

ಒಟ್ಟಿನಲ್ಲಿ ಪ್ರವಾಸಿಗರ ತಾಣವಾಗಬೇಕಾಗಿದ್ದ ಸೋಮಲಿಂಗೇಶ್ವರ ದೇವಸ್ಥಾನ ಸ್ವಲ್ಪ ದಿನಗಳಲ್ಲಿಯೇ ಸಂಪೂರ್ಣ ಹಾಳಾಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಮುಂದಿನ ಪೀಳಿಗಾಗಿ ಸಂರಕ್ಷಣೆ ಮಾಡಲು ಮುಂದಾಗಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಐತಿಹಾಸಿಕ ಹಿನ್ನೆಲೆ ಹೊಂದಿದ ಈ ದೇವಸ್ಥಾನ ಅಭಿವೃದ್ಧಿಗಾಗಿ ಗ್ರಾಮಸ್ಥರು ಸೇರಿದಂತೆ ಪ್ರತಿಯೊಬ್ಬರು ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಅಭಿವೃದ್ಧಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿ ಗಳಿಗೆ ಮನವಿ ಕೂಡ ಸಲ್ಲಿಸಲಾಗಿದೆ. ಆದರೂ ಯಾವುದೇ ಪ್ರಯೋಜವಾಗಿಲ್ಲ.
 ಬಸವರಾಜ ಉಸ್ತುರೆ, ಗ್ರಾಮದ ನಿವಾಸಿ

„ವೀರಾರೆಡ್ಡಿ ಆರ್‌.ಎಸ್‌.


Trending videos

Back to Top