
ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ; ಸಿಡಿಲು ಬಡಿದು ಮಕ್ಕಳು ಸೇರಿ 68 ಮಂದಿ ಸಾವು
ಉತ್ತರಪ್ರದೇಶದ ವಿವಿಧೆಡೆ ಭಾರೀ ಪ್ರಮಾಣದ ಸಿಡಿಲು ಬಡಿದಿತ್ತು ಎಂದು ವರದಿ ತಿಳಿಸಿದೆ.
Team Udayavani, Jul 12, 2021, 9:23 AM IST

ನವದೆಹಲಿ: ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ನಡೆದ ಮೂರು ಪ್ರತ್ಯೇಕ ಘಟನೆಗಳಲ್ಲಿ ಸಿಡಿಲು ಹೊಡೆದು ಒಟ್ಟು 68 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಭಾನುವಾರ(ಜುಲೈ 11) ನಡೆದಿದೆ.
ಇದನ್ನೂ ಓದಿ:ಇಬ್ಬರು ಉಗ್ರರ ಬಂಧನ, ಭಾರೀ ಸಂಚು ವಿಫಲ: ಉ.ಪ್ರದೇಶದಲ್ಲಿ ಹೈ ಅಲರ್ಟ್ ಘೋಷಣೆ
ಉತ್ತರಪ್ರದೇಶದಲ್ಲಿ ಭಾರೀ ಸಿಡಿಲು, ಮಳೆಯಾಗಿದ್ದು, ಈ ಸಂದರ್ಭದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿರುವವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಮಧ್ಯಪ್ರದೇಶದಲ್ಲಿ ಏಳು ಮಂದಿ ಸಿಡಿಲು ಬಡಿದು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ರಾಜಸ್ಥಾನದಲ್ಲಿ ಸಿಡಿಲಿಗೆ ಏಳು ಮಕ್ಕಳು ಸೇರಿದಂತೆ ಇಪ್ಪತ್ತು ಮಂದಿ ಬಲಿಯಾಗಿದ್ದಾರೆ. ರಾಜಸ್ಥಾನದ ಕೋಟ ಮತ್ತು ದೋಲ್ಪುರ್ ಜಿಲ್ಲೆಯಲ್ಲಿ ಸಿಡಿಲು ಬಡಿದು ಮಕ್ಕಳು ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಸಿಡಿಲು ಬಡಿದು ಸಾವನ್ನಪ್ಪಿರುವ ಕುಟುಂಬ ಸದಸ್ಯರಿಗೆ ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿಡಿಲು ಬಡಿದು ಗಾಯಗೊಂಡವರನ್ನು ಜೈಪುರದ ಸವಾಯಿ ಮನ್ ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಕ್ಷಣಾ ತಂಡದ ಮೂಲಗಳು ತಿಳಿಸಿವೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದ ವಿವಿಧೆಡೆ ಭಾರೀ ಪ್ರಮಾಣದ ಸಿಡಿಲು ಬಡಿದಿತ್ತು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
