ಜನವರಿಯಿಂದ ಕಾರುಗಳು ತುಟ್ಟಿ
Team Udayavani, Dec 9, 2017, 10:23 AM IST
ಹೊಸದಿಲ್ಲಿ: ನಿಮಗೆ ಕಾರು ಕೊಳ್ಳುವ ಆಲೋಚನೆಯಿದೆಯೇ? ಹಾಗಾದರೆ, ಇದೇ ತಿಂಗಳು ಕೊಂಡುಬಿಡಿ. ಇಲ್ಲವಾದರೆ, ಜನವರಿಯಿಂದ ಕಾರುಗಳ ಬೆಲೆ ಗಣನೀಯವಾಗಿ ಹೆಚ್ಚಿ ನಿಮ್ಮ ಜೇಬಿಗೆ ಹೆಚ್ಚು ಹೊರೆ ಬೀಳಲಿದೆ!
ಕೆಲವು ಕಾರು ತಯಾರಿಕಾ ಕಂಪನಿಗಳು, ತಮ್ಮ ವಿವಿಧ ದರ್ಜೆಗಳ ಮೇಲಿನ ಬೆಲೆ ಏರಿಸಲು ನಿರ್ಧರಿಸಿದ್ದು, ಟೊಯೋಟಾ ಕಂಪನಿ ಕಾರುಗಳ ಈಗಿರುವ ಬೆಲೆಗಿಂತ ಸುಮಾರು 5 ಸಾವಿರ ರೂ., ಹೋಂಡಾ 25 ಸಾವಿರ ರೂ.ವರೆಗೆ, ಮಹಿಂದ್ರಾ 7ರಿಂದ 30 ಸಾವಿರದವರೆಗೆ, ಸ್ಕೋಡಾ 14ರಿಂದ 50 ಸಾವಿರ ದವರೆಗೆ, ಇಸುಝು 1 ಲಕ್ಷ ರೂ.ವರೆಗೆ ಬೆಲೆ ಏರಿಸಲಿವೆ. ಆದರೆ, ಮಾರುತಿ ಸುಝುಕಿ ಹಾಗೂ ಹುಂಡೈ ಕಂಪನಿಗಳು ಸದ್ಯಕ್ಕೆ ಬೆಲೆ ಏರಿಸಲ್ಲ ಎಂದಿವೆ.