ಐಸಿಜೆಯಲ್ಲಿ ಜಾಧವ್ ಪರ ವಾದಿಸಲು ಸಾಳ್ವೆ ಪಡೆದ ಶುಲ್ಕ ಎಷ್ಟು ಗೊತ್ತಾ?
Team Udayavani, May 16, 2017, 1:24 PM IST
ನವದೆಹಲಿ: ಭಾರತದ ನೌಕಾಪಡೆ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪರವಾಗಿ ನೆದರ್ಲೆಂಡ್ ನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ಕೋರ್ಟ್ ನಲ್ಲಿ ವಾದಿಸಲು ಹಿರಿಯ ವಕೀಲ ಹರೀಶ್ ಸಾಳ್ವೆ ಅವರ ಆಯ್ಕೆ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸಾಳ್ವೆ ಅವರು ಜಾಧವ್ ಪ್ರಕರಣದಲ್ಲಿ ವಾದಿಸಲು ಪಡೆದಿರುವ ಶುಲ್ಕ ಕೇವಲ 1 ರೂಪಾಯಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ.
ಆ ನಿಟ್ಟಿನಲ್ಲಿ ಜಾಧವ್ ಅವರ ಹೈಪ್ರೊಫೈಲ್ ಪ್ರಕರಣದಲ್ಲಿ ವಾದಿಸಲು ಸಾಳ್ವೆ ಅವರು ಎಷ್ಟು ಶುಲ್ಕ ಪಡೆದುಕೊಂಡಿರಬಹುದು ಎಂಬ ಪ್ರಶ್ನೆ ಹುಟ್ಟುವುದು ಸಹಜ. ಆ ಹಿನ್ನೆಲೆಯಲ್ಲಿ ಜಾಧವ್ ಪರ ವಾದಿಸಲು ಹರೀಶ್ ಸಾಳ್ವೆಯಂತಹ ದುಬಾರಿ ವಕೀಲರಿಗಿಂತ ಭಾರತದಲ್ಲಿ ಕಡಿಮೆ ಶುಲ್ಕದಲ್ಲಿ ಉತ್ತಮ ವಕೀಲರು ಸಿಗುತ್ತಿದ್ದರು. ತೀರ್ಪಿಗಾಗಿ ಕಾಯವ ಎಂಬ ಟ್ವೀಟಿಗರೊಬ್ಬರಿಗೆ ಸಚಿವೆ ಸುಷ್ಮಾ ಸ್ವರಾಜ್ ಈ ರೀತಿ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ವಾದ ಮಂಡನೆಯಲ್ಲಿ ಭಾರತದ ದುಬಾರಿ ವಕೀಲರಲ್ಲಿ ಸಾಳ್ವೆ ಕೂಡಾ ಒಬ್ಬರಾಗಿದ್ದಾರೆ. ಹಾಗಾಗಿ ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಜಾಧವ್ ಅವರ ಕೇಸ್ ನಲ್ಲಿ ಅಂತಾರಾಷ್ಟ್ರೀಯ ಕೋರ್ಟ್ ನಲ್ಲಿ ಕಾನೂನು ಸಮರ ನಡೆಸಲು ಭಾರತ ಸರ್ಕಾರ ಸಾಳ್ವೆ ಅವರನ್ನು ನೇಮಿಸಿತ್ತು.