Electoral bonds: ಎಸ್‌ಬಿಐ ಮನವಿ ಸುಪ್ರೀಂನಲ್ಲಿ ಮಾರ್ಚ್ 11 ರಂದು ವಿಚಾರಣೆ
ವಿವರಗಳನ್ನು ಬಹಿರಂಗಪಡಿಸಲು ಸಮಯ ವಿಸ್ತರಣೆ ಕೋರಿಕೆ
Team Udayavani, Mar 8, 2024, 4:35 PM IST
ಹೊಸದಿಲ್ಲಿ: ರಾಜಕೀಯ ಪಕ್ಷಗಳು ನಗದೀಕರಿಸಿದ ಪ್ರತಿ ಚುನಾವಣ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ಕಾಲಾವಕಾಶವನ್ನು ವಿಸ್ತರಿಸುವಂತೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಂವಿಧಾನಿಕ ಪೀಠ ಮಾರ್ಚ್ 11 ರಂದು ವಿಚಾರಣೆ ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಪ್ರಾರಂಭಿಸಲು ಕೋರಿರುವ ಪ್ರತ್ಯೇಕ ಅರ್ಜಿಯನ್ನು ಸಹ ಆಲಿಸಲಿದೆ.
ಚುನಾವಣ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ನೀಡಿದ ಕೊಡುಗೆಗಳ ವಿವರಗಳನ್ನು ಚುನಾವಣ ಆಯೋಗಕ್ಕೆ ಮಾರ್ಚ್ 6 ರೊಳಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಫೆಬ್ರವರಿ 15 ರಂದು ನೀಡಿದ ಮಹತ್ವದ ತೀರ್ಪಿನಲ್ಲಿ, ಐವರು ನ್ಯಾಯಾಧೀಶರ ಸಂವಿಧಾನ ಪೀಠ ಅನಾಮಧೇಯ ರಾಜಕೀಯ ನಿಧಿಯ ಕೇಂದ್ರದ ಚುನಾವಣ ಬಾಂಡ್‌ಗಳ ಯೋಜನೆ ಅಸಂವಿಧಾನಿಕ ಎಂದು ರದ್ದುಗೊಳಿಸಿತ್ತು. ಚುನಾವಣಾ ಆಯೋಗವು ದಾನಿಗಳು ಮತ್ತು ಅವರು ನೀಡಿದ ಮೊತ್ತವನ್ನು ಬಹಿರಂಗಪಡಿಸಲು ಆದೇಶಿಸಿತ್ತು.