ಜನವರಿಯಿಂದ ಕಮಲ್ ರಾಜಕೀಯ ಕಸರತ್ತು ಆರಂಭ
Team Udayavani, Nov 8, 2017, 6:25 AM IST
ಚೆನ್ನೈ: ತಮ್ಮ 63ನೇ ಹುಟ್ಟುಹಬ್ಬದ ದಿನದಂದೇ ತಮಿಳು ನಟ ಕಮಲ ಹಾಸನ್ ತಮ್ಮ ಮಹತ್ವಾಕಾಂಕ್ಷೆಯ ರಾಜಕೀಯ ಪಕ್ಷ ಘೋಷಿಸಿ, ಅದಕ್ಕೆ ಸಂಬಂಧಪಟ್ಟ ಮೊಬೈಲ್ ಆ್ಯಪ್ ಬಿಡುಗಡೆ ಮಾಡುತ್ತಾರೆಂಬ ನಿರೀಕ್ಷೆ ಹುಸಿಯಾಗಿದೆ. ಆದರೆ, ಮುಂದಿನ ವರ್ಷ ಜನವರಿಯಿಂದ ತಮ್ಮ ರಾಜಕೀಯ ಪಕ್ಷದ ಚಟುವಟಿಕೆ ಆರಂಭಿಸುವುದಾಗಿ ಅವರು ತಿಳಿಸಿದ್ದು, ಈ ಬಗ್ಗೆ ಸ್ಪಷ್ಟತೆ ಸಿಕ್ಕಂತಾಗಿದೆ.
ಮಂಗಳವಾರ, ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “”ರಾಜಕೀಯ ಪ್ರವೇಶದ ಘೋಷಣೆ ಮಾಡುವ ಅಗತ್ಯವಿಲ್ಲ. ನಾನೀಗಾಗಲೇ ರಾಜಕೀಯಕ್ಕೆ ಕಾಲಿಟ್ಟಿದ್ದೇನೆ” ಎಂದರು. ಆ್ಯಪ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “”ಆ್ಯಪ್ ಇನ್ನೂ ಅಭಿವೃದ್ಧಿಯಾಗುತ್ತಿದ್ದು ಜನವರಿ ವೇಳೆಗೆ ಬಿಡುಗಡೆಯಾಗಲಿದೆ” ಎಂದರು. ಆ್ಯಪ್ ಬಿಡುಗಡೆ ನಂತರ, ತಮಿಳುನಾಡು ಪ್ರವಾಸ ಕೈಗೊಳ್ಳಲಿರುವುದಾಗಿ ಅವರು ತಿಳಿಸಿದರು.
ಸ್ಪಷ್ಟನೆ: ತಮಿಳು ವಾರಪತ್ರಿಕೆಯೊಂದರಲ್ಲಿ ಇತ್ತೀಚೆಗೆ ಬರೆದ ಲೇಖನದಲ್ಲಿ “ಬಲಪಂಥೀಯ ಹಿಂದೂಗಳಲ್ಲಿ ಹಿಂಸಾಚಾರ ಪ್ರವೃತ್ತಿ ತಲೆದೋರಿದೆ’ ಎಂದು ಹೇಳಿ ವಿವಾದಕ್ಕೀಡಾದ ಬಗ್ಗೆ ಸ್ಪಷ್ಟನೆ ನೀಡಿದ ಅವರು, “”ನಾನು ಯಾರಿಗೂ ನೋವುಂಟು ಮಾಡಲು ಹಾಗೆ ಹೇಳಿರಲಿಲ್ಲ. ನನ್ನಲ್ಲಿನ ಆತಂಕ ಹಂಚಿಕೊಂಡಿದ್ದೇನಷ್ಟೆ. ಇಡೀ ಲೇಖನದಲ್ಲಿ ನಾನು “ಭಯೋತ್ಪಾದನೆ’ ಎಂಬ ಪದ ಉಪಯೋಗಿಸಿಲ್ಲ. ಹಿಂದೂಗಳ ಭಾವನೆಗೆ ಧಕ್ಕೆ ತಂದಿಲ್ಲ. ಆದರೆ, ಧರ್ಮದ ಹೆಸರಿನಲ್ಲಿ ನಡೆವ ಹಿಂಸೆಯನ್ನು ಖಂಡಿಸುತ್ತೇನೆ” ಎಂದು ಸಮಜಾಯಿಷಿ ನೀಡಿದರು.