ಲಾಕ್ ಡೌನ್ ನಿಂದ ವೈರಸ್ ನಿವಾರಣೆ ಸಾದ‍್ಯವಿಲ್ಲ ; ಟೆಸ್ಟಿಂಗ್ ಹೆಚ್ಚಿಸಿ: ರಾಗಾ ಸಲಹೆ
Team Udayavani, Apr 16, 2020, 5:13 PM IST
ನವದೆಹಲಿ: ದೇಶವ್ಯಾಪಿ ಲಾಕ್ ಡೌನ್ ವಿಧಿಸುವುದರಿಂದ ಕೋವಿಡ್ 19 ವೈರಸ್ ಸೋಂಕನ್ನು ನಿವಾರಿಸಲು ಸಾಧ್ಯವಿಲ್ಲ ಇದರಿಂದ ಸೋಂಕು ಹರಡುವುದನ್ನು ಮುಂದೂಡಬಹುದಷ್ಟೇ ಎಂದು ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಮತ್ತು ದೇಶದಲ್ಲಿ ಸೋಂಕು ಪತ್ತೆ ಪರೀಕ್ಷೆಗಳನ್ನು (ಕೋವಿಡ್ ಟೆಸ್ಟಿಂಗ್) ಹೆಚ್ಚಿಸುವುದೊಂದೇ ಈ ಸೋಂಕನ್ನು ಮಣಿಸಲು ಇರುವ ಏಕೈಕ ಪರಿಹಾರ ಎಂದು ಕಾಂಗ್ರೆಸ್ ನಾಯಕ ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ ವೈರಸ್ ಸಮಸ್ಯೆಗೆ ಲಾಕ್ ಡೌನ್ ಪರಿಹಾರವೂ ಅಲ್ಲ ಚಿಕಿತ್ಸೆಯೂ ಅಲ್ಲ ಇದೊಂದು ಕೇವಲ ‘Pause’ ಬಟನ್ ಇದ್ದಂತೆ ಹಾಗಾಗಿ ಈ ಲಾಕ್ ಡೌನ್ ಸ್ಥಿತಿಯಿಂದ ಹೊರಬರುವುದಕ್ಕೆ ನಾವೊಂದು ಪರಿಹಾರವನ್ನು ಕಂಡುಕೊಳ್ಳಲೇಬೇಕಾಗಿದೆ ಎಂದು ರಾಹುಲ್ ಗಾಂಧಿ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಮಾರಕ ವೈರಸ್ ವಿರುದ್ಧ ಹೋರಾಡುವುದಕ್ಕೆ ಇರುವ ಅತೀ ದೊಡ್ಡ ಅಸ್ತ್ರವೆಂದರೆ ಅದು ಟೆಸ್ಟಿಂಗ್ ಮಾತ್ರವೇ ಆಗಿದೆ. ಆದರೆ ದುರದೃಷ್ಟವಶಾತ್ ನಮ್ಮ ದೇಶದಲ್ಲಿ ಒಂದು ಕೋಟಿ ಜನರಲ್ಲಿ 199 ಜನರಿಗೆ ಮಾತ್ರವೇ ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ರಾಗಾ ಹೇಳಿದರು.