ದೀಪಾವಳಿ ಸಂಭ್ರಮ; ಮುಂಬೈ ಸೇರಿ ದೇಶದ ವಿವಿಧೆಡೆ ಅಗ್ನಿ ಅನಾಹುತಕ್ಕೆ ನೂರಾರು ಅಂಗಡಿ ಭಸ್ಮ

Team Udayavani, Oct 28, 2019, 10:20 AM IST

ನವದೆಹಲಿ:ದೀಪಾವಳಿ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಲವಾರು ಅಗ್ನಿ ಅನಾಹುತ ಸಂಭವಿಸಿದ್ದು, ಇದರಲ್ಲಿ ನೂರಾರು ಆಸ್ತಿ-ಪಾಸ್ತಿ ಬೆಂಕಿಗಾಹುತಿಯಾಗಿರುವ ಘಟನೆ ವರದಿಯಾಗಿದೆ.

ಒಡಿಶಾದ ಸಂಬಾಲ್ ಪುರ್ ಜಿಲ್ಲೆಯ ತರಕಾರಿ ಮಾರುಕಟ್ಟೆಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭಾರೀ ಬೆಂಕಿಯಿಂದಾಗಿ ಸುಮಾರು 80ಕ್ಕೂ ಅಧಿಕ ಅಂಗಡಿಗಳು ಸುಟ್ಟು ಹೋಗಿದೆ. ದೀಪಾವಳಿ ಹಬ್ಬದ ನಿಟ್ಟಿನಲ್ಲಿ ಅಂಗಡಿ ಮುಂಭಾಗದಲ್ಲಿ ಹಚ್ಚಿಟ್ಟ ಹಣತೆಯ ಬೆಂಕಿಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದು, ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿರುವುದಾಗಿ ವರದಿ ತಿಳಿಸಿದೆ. ಭಾನುವಾರ ಮುಂಜಾನೆ ದೆಹಲಿಯ ಸಾದಾರ್ ಬಜಾರ್ ಪ್ರದೇಶದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಪ್ಯಾಕ್ ಮಾಡುವ ಸಾಮಾಗ್ರಿಗಳು ಸುಟ್ಟು ಭಸ್ಮವಾಗಿರುವುದಾಗಿ ವರದಿ ತಿಳಿಸಿದೆ. ಘಟನಾ ಸ್ಥಳಕ್ಕೆ 12ಕ್ಕೂ ಅಧಿಕ ಅಗ್ನಿಶಾಮಕ ದಳ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಸುಮಾರು ಒಂದೂವರೆ ಗಂಟೆಗಳ ಕಾಲ ಸತತ ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿರುವುದಾಗಿ ವರದಿ ವಿವರಿಸಿದೆ.

ಮುಂಬೈಯ ಸಯಾನ್ ಜಿಲ್ಲೆಯಲ್ಲಿನ ಪ್ಲಾಸ್ಟಿಕ್ ತಯಾರಿಕಾ ಗೋದಾಮಿನಲ್ಲಿ ಬೆಂಕಿ ಅನಾಹುತ ಸಂಭವಿಸಿರುವ ಪ್ರಕರಣ ವರದಿಯಾಗಿದೆ. ಘಟನಾ ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿರುವುದಾಗಿ ವರದಿ ತಿಳಿಸಿದೆ.

ಹೈದರಾಬಾದ್  ನಗರದ ವನಸ್ಥಲಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸುಷ್ಮಾ ಟಾಕೀಸ್ ಸಮೀಪದ ಟಯರ್ ಗೋದಾಮಿನಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮೂರು ಅಗ್ನಿಶಾಮಕ ದಳ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.

ಉತ್ತರಪ್ರದೇಶದ ಗೋರಖ್ ಪುರ್ ಜಿಲ್ಲೆಯಲ್ಲಿನ ಪಟಾಕಿ ತಯಾರಿಕೆಯ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ರಾಜಸ್ಥಾನದ ಉದಯ್ ಪುರ್ ನಲ್ಲಿರುವ ಪ್ಲಾಸ್ಟಿಕ್ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಐದು ಅಗ್ನಿಶಾಮಕದಳ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿರುವುದಾಗಿ ವರದಿ ತಿಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ