ರೈಲು ಟಿಕೆಟ್ಗೆ ಸುರಕ್ಷತಾ ಸೆಸ್; ಪ್ರಯಾಣ ದರ ತುಟ್ಟಿ?
Team Udayavani, May 19, 2017, 10:49 AM IST
ಹೊಸದಿಲ್ಲಿ: ಪದೇ ಪದೆ ರೈಲು ಹಳಿ ತಪ್ಪುವಿಕೆಯಂಥ ಪ್ರಕರಣಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಟಿಕೆಟ್ ಮೇಲೆ ಸುರಕ್ಷತಾ ಸೆಸ್ ವಿಧಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದ್ದು, ಇದರಿಂದಾಗಿ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆಯಿದೆ.
ಬಜೆಟ್ನಲ್ಲಿ ಉಲ್ಲೇಖೀಸಲಾದ ಸುರಕ್ಷತಾ ನಿಧಿಗೆ ಮೊತ್ತ ನೀಡಬೇಕೆಂದರೆ ರೈಲ್ವೆಯು ಹೆಚ್ಚುವರಿ 5 ಸಾವಿರ ಕೋಟಿ ರೂ. ಆದಾಯ ಗಳಿಸಬೇಕಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಈ ಸೆಸ್ ಹಾಕಲು ಹೊರಟಿದ್ದೇವೆ. ಇದಕ್ಕೆ ಜನರು ಸಹಕಾರ ನೀಡಬೇಕು ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.
5 ಸಾವಿರ ಕೋಟಿಯನ್ನು 3 ರೀತಿಯಲ್ಲಿ ಉತ್ಪತ್ತಿ ಮಾಡಬಹುದು. ಶುಲ್ಕೇತರ ಮೂಲಗಳಿಂದ, ಸರಕು ಸಾಗಣೆ ದರ ಹೆಚ್ಚಿಸುವುದರಿಂದ ಮತ್ತು ಟಿಕೆಟ್ ಮೇಲೆ ಸೆಸ್ ವಿಧಿಸುವುದರ ಮೂಲಕ ಇದನ್ನು ಮಾಡಬಹುದು. ಆದರೆ, ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ, ತನ್ನ ಮರುವಿನ್ಯಾಸ ಗೊಳಿಸಿದ ಇ-ಟೆಂಡರಿಂಗ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಲೋಕಾರ್ಪಣೆ ಮಾಡುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.