ಕಾಂಗ್ರೆಸ್, ಡಿಎಂಕೆ, ಎಡಪಕ್ಷ ಸಭಾತ್ಯಾಗ; ರಾಜ್ಯಸಭೆಯಲ್ಲಿ SPG (ತಿದ್ದುಪಡಿ)ಮಸೂದೆ ಅಂಗೀಕಾರ

Team Udayavani, Dec 3, 2019, 6:55 PM IST

ನವದೆಹಲಿ: ಕಾಂಗ್ರೆಸ್, ಡಿಎಂಕೆ ಹಾಗೂ ಎಡಪಕ್ಷಗಳ ಸಂಸದರು ಲೋಕಸಭಾ ಕಲಾಪದಲ್ಲಿ ಸಭಾತ್ಯಾಗದ ನಡುವೆಯೇ ಮಂಗಳವಾರ ರಾಜ್ಯಸಭೆಯಲ್ಲಿ ಎಸ್ ಪಿಜಿ (ತಿದ್ದುಪಡಿ) ಮಸೂದೆ 2019 ಅಂಗೀಕಾರಗೊಂಡಿದೆ. ಇದಕ್ಕೂ ಮೊದಲು ಎಸ್ ಪಿಜಿ ಮಸೂದೆ 2019 ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು.

ಎಸ್ ಪಿಜಿ ಮಸೂದೆ ಅಂಗೀಕಾರವಾಗುವ ಮೊದಲು ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಎಸ್ ಪಿಜಿ ಭದ್ರತೆ ವಿಷಯದಲ್ಲಿ ಸರ್ಕಾರ ರಾಜಕೀಯ ದುರುದುದ್ದೇಶದಿಂದ ನಡೆದುಕೊಳ್ಳುತ್ತಿದೆ ಎಂದು ಆರೋಪಿಸುವುದರಲ್ಲಿ ಯಾವುದೇ ಹುರುಳಿಲ್ಲ. ಗಾಂಧಿ ಕುಟುಂಬವನ್ನು ಗುರಿಯಾಗಿರಿಸಿಕೊಂಡು ಎಸ್ ಪಿಜಿ ಕಾಯ್ದೆಯಲ್ಲಿ ಬದಲಾವಣೆ ಮಾಡುತ್ತಿಲ್ಲ ಎಂದು ಹೇಳಿದರು.

ನಾವು ಪರಿವಾರ(ಕುಟುಂಬ)ವನ್ನು ವಿರೋಧಿಸುತ್ತಿಲ್ಲ. ಆದರೆ ಸ್ವಜನ ಪಕ್ಷಪಾತವನ್ನು ವಿರೋಧಿಸುತ್ತೇವೆ. ಭಾರತದ ಪ್ರಜಾಪ್ರಭುತ್ವ ಈ ರೀತಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಯಾಕೆ ಗಾಂಧಿ ಕುಟುಂಬಕ್ಕೆ ಮಾತ್ರವೇ ಭದ್ರತೆ ನೀಡುವ ಬಗ್ಗೆ ಮಾತನಾಡಬೇಕು? ಗಾಂಧಿ ಕುಟುಂಬ ಸೇರಿದಂತೆ ದೇಶದ 130 ಕೋಟಿ ಜನರಿಗೂ ಭದ್ರತೆ ನೀಡುವುದು ಸರ್ಕಾರದ ಹೊಣೆಗಾರಿಕೆಯಾಗಿದೆ ಎಂದು ಶಾ ಪ್ರತಿಕ್ರಿಯೆ ನೀಡಿದ್ದಾರೆ.

ಹಿಂದಿನ ಮಾಜಿ ಪ್ರಧಾನಿಗಳಾಗಿದ್ದ ನರಸಿಂಹ ರಾವ್, ಚಂದ್ರಶೇಖರ್, ಐಕೆ ಗುಜ್ರಾಲ್, ಮನಮೋಹನ್ ಸಿಂಗ್ ಅವರ ಎಸ್ ಪಿಜಿ ಭದ್ರತೆಯನ್ನು ವಾಪಸ್ ಪಡೆಯಲಾಗಿತ್ತು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಕಾನೂನು ಒಂದೇ, ಯಾವುದೇ ಒಂದು ಕುಟುಂಬಕ್ಕೆ ವಿಶೇಷ ಕಾನೂನುಗಳು ಇಲ್ಲ ಎಂದು ಶಾ ತಿರುಗೇಟು ನೀಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ