ಕೋಟಿಗಟ್ಟಲೆ ಬೆಲೆಯ ಕಾರಿಗೆ ಲಕ್ಷಗಟ್ಟಲೆ ರೂ. ದಂಡ!
Team Udayavani, Nov 30, 2019, 5:33 PM IST
ಅಹಮದಾಬಾದ್: ಅತಿ ದುಬಾರಿ ಪೋರ್ಶೆ 911 ಕಾರಿನಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಹಮದಾಬಾದ್ ಸಾರಿಗೆ ಇಲಾಖೆ (ಆರ್ಟಿಒ) ಲಕ್ಷಗಟ್ಟಲೆ ರೂ. ಮೊತ್ತದ ದಂಡ ವಿಧಿಸಿದೆ.
ಇದಕ್ಕೆ ಕಾರಣ ಪೋರ್ಶೆ ಕಾರಿನಲ್ಲಿ ಯಾವುದೇ ದಾಖಲೆ ಇರಲಿಲ್ಲ. ಇದರ ಮಾಲಕ ಕಾರಿಗೆ ನಂಬರ್ ಪ್ಲೇಟ್ ಅಳವಡಿಸದೆ, ಯಾವುದೇ ದಾಖಲೆ ಇಲ್ಲದೆ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಈ ಕಾರಣಕ್ಕೆ ವಿವಿಧ ಕಲಂಗಳ ಅನ್ವಯ 9.80 ಲಕ್ಷ ರೂ. ದಂಡ ವಿಧಿಸಲಾಗಿದೆ.
ಸಿಲ್ವರ್ ಕಲರಿನ ಈ ಕಾರನ್ನು ಟ್ರಾಫಿಕ್ ಪೊಲೀಸರು ಆರಂಭದಲ್ಲಿ ನಿಲ್ಲಿಸಿದ್ದರು. ಈ ವೇಳೆ ಅವರು ದಾಖಲೆ ಕೇಳಿದಾಗ ಮಾಲಕ ಯಾವುದೇ ದಾಖಲೆ ನೀಡಿರಲಿಲ್ಲ. ಆತನನ್ನು ಬಂಧಿಸಿ ಆರ್ಟಿಒ ಮೆಮೊ ಕೊಡಲಾಗಿತ್ತು.
ಅರ್ಥಾತ್ ಈ ಬಗ್ಗೆ ಆರ್ಟಿಒದಲ್ಲಿ ಅವರು ದಂಡ ನೀಡಿ ಬರಬೇಕಿತ್ತು. ಆತ ಆರ್ಟಿಒದಲ್ಲಿ ಎಲ್ಲ ದಾಖಲೆಗಳಿಗೆ ದಂಡ ಕಟ್ಟಿ ರಸೀದಿ ತೆಗೆದುಕೊಂಡು ಬಂದರೆ ನಾವು ಕಾರನ್ನು ಮರಳಿ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ. ಈಗ ಬರೋಬ್ಬರಿ 2 ಕೋಟಿ ರೂ. ಮೌಲ್ಯದ ಕಾರು ಪೊಲೀಸರ ಅತಿಥಿಯಾಗಿದೆ.