ಉಗ್ರ ಮುನ್ನೆಚ್ಚರಿಕೆ: ಬೆಂಗಳೂರು, ಮೈಸೂರಿನಲ್ಲಿ ಸ್ಲೀಪರ್‌ ಸೆಲ್‌ ಸಕ್ರಿಯ

ಎನ್‌ಐಎ ಸುಳಿವಿನ ಮೇರೆಗೆ ರಾಜ್ಯಾದ್ಯಂತ ಕಟ್ಟೆಚ್ಚರ

Team Udayavani, Oct 19, 2019, 6:35 AM IST

ಸಾಂದರ್ಭಿಕ ಚಿತ್ರ

ಮೈಸೂರು/ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಭಯೋತ್ಪಾದಕರ ಸ್ಲೀಪರ್‌ ಸೆಲ್‌ಗ‌ಳು ಸಕ್ರಿಯವಾಗಿದ್ದು, ಇವರ ಚಟುವಟಿಕೆಗಳು ಕರಾವಳಿ ಕರ್ನಾಟಕ ಮತ್ತು ಬಂಗಾಲ ಕೊಲ್ಲಿ ಪ್ರದೇಶದಲ್ಲೂ ತೀವ್ರ ವಾಗಿಯೇ ಇವೆ ಎಂಬ ಆಘಾತಕಾರಿ ಅಂಶವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಬಹಿರಂಗಪಡಿಸಿದ್ದಾರೆ.

ಮೈಸೂರಿನಲ್ಲಿ ಕರ್ನಾಟಕ ಪೊಲೀಸ್‌ ಅಕಾಡೆಮಿ ಯಲ್ಲಿ ಆಯೋಜಿಸಿದ್ದ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡ ಅನಂತರ ಸುದ್ದಿಗಾರ ರೊಡನೆ ಮಾತನಾಡುತ್ತ ಅವರು ಈ ವಿಚಾರವನ್ನು ಹೊರಗೆಡವಿದರು. ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ರಾಜ್ಯದ ಕರಾವಳಿ ಮತ್ತು ಕೆಲವು ಒಳ ಪ್ರದೇಶಗಳಲ್ಲಿ ಜಮಾತೆ-ಉಲ್‌-ಮುಜಾಹಿದ್ದೀನ್‌ ಬಾಂಗ್ಲಾದೇಶ (ಜೆಎಂಬಿ) ಉಗ್ರ ಸಂಘಟನೆಯ ಚಟುವಟಿಕೆಗಳು ತೀವ್ರವಾಗಿ ನಡೆಯುತ್ತಿವೆ ಎಂದು ಶಂಕಿಸಿದೆ. ಜತೆಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಉಗ್ರರ ಸ್ಲೀಪರ್‌ ಸೆಲ್‌ಗ‌ಳು ಸಕ್ರಿಯವಾಗಿದ್ದು, ಹೆಚ್ಚಿನ ನಿಗಾ ವಹಿಸುವಂತೆ ಎನ್‌ಐಎ ಸೂಚನೆ ನೀಡಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಜೆಎಂಬಿಯು ಬಂಗಾಲ ಕೊಲ್ಲಿ ಮತ್ತು ಅರಬ್ಬಿ ಸಮುದ್ರ ತೀರಗಳಲ್ಲೂ ಸಕ್ರಿಯವಾಗಿದೆ ಎಂದು ಬೊಮ್ಮಾಯಿ ಎಚ್ಚರಿಸಿದ್ದಾರೆ.

ಅಕ್ರಮ ಬಾಂಗ್ಲಾದೇಶೀಯರ ಹಾವಳಿ
ರಾಜ್ಯದಲ್ಲಿ ಅಕ್ರಮ ಬಾಂಗ್ಲಾದೇಶೀಯರ ಹಾವಳಿಯೂ ಹೆಚ್ಚಾ ಗಿದೆ ಎಂಬ ಅಂಶವನ್ನೂ ಬೊಮ್ಮಾಯಿ ಬಹಿರಂಗ ಪಡಿಸಿ ದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಪೊಲೀಸರು ಬೆಂಗಳೂರು ಮತ್ತು ಮೈಸೂರಿನಲ್ಲಿ ಬಿಗಿ ಭದ್ರತೆಯ ವ್ಯವಸ್ಥೆ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅನು ಮಾನಾಸ್ಪದರನ್ನು ಪರಿಶೀಲನೆಗೆ ಒಳಪಡಿಸ ಲಾಗುತ್ತಿದೆ. ಸಂದೇಹಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬುರ್ಧ್ವಾನ್‌ ಸ್ಫೋಟ ಆರೋಪಿಗಳ ಬಂಧನ
2014ರ ಬುರ್ಧ್ವಾನ್‌ ಬಾಂಬ್‌ ಸ್ಫೋಟ ಮತ್ತು 2018ರ ಬಿಹಾರ ಬೋಧಗಯಾ ಸ್ಫೋಟ ಪ್ರಕರಣ ದಲ್ಲಿ ಭಾಗಿಯಾಗಿದ್ದ ಜೆಎಂಬಿ ಉಗ್ರ ರಾದ ಕೌಸರ್‌, ಆದಿಲ್‌ ಶೇಖ್‌, ಹಬೀಬುರ್‌ ರೆಹಮಾನ ರನ್ನು ಕರ್ನಾಟಕ ದಲ್ಲಿಯೇ ಎನ್‌ಐಎ ಬಂಧಿಸಿದೆ. ಆರೋಪಿಗಳು ಚಿಕ್ಕಬಾಣಾವರದ ಮನೆಯಲ್ಲಿ ರಾಕೆಟ್‌ ಬಾಂಬ್‌ ತಯಾರಿ ಮಾಡಿ ಕೃಷ್ಣಗಿರಿ ಜಿಲ್ಲೆಯ ಬೆಟ್ಟಗಳಲ್ಲಿ ಪ್ರಯೋಗಾರ್ಥ ಪರೀಕ್ಷೆ ನಡೆಸಿರುವುದು ಎನ್‌ಐಎ ತನಿಖೆಯಲ್ಲಿ ಬಹಿರಂಗಗೊಂಡಿತ್ತು. ಕೌಸರ್‌ ಜತೆಗಿದ್ದ ನಾಜೀರ್‌ ಶೇಖ್‌, ನಜ್ರುಲ್ಲಾ ಇಸ್ಲಾಂ, ಆಸೀಫ್ ಇಕ್ಬಾಲ್‌, ಆರೀಫ್ ರಾಜ್ಯದಲ್ಲಿಯೇ ತಲೆಮರೆಸಿಕೊಂಡಿರುವ ಶಂಕೆ ಯಿದ್ದು, ಅವರ ಬಂಧನಕ್ಕೆ ಶೋಧ ನಡೆಯುತ್ತಿದೆ.

ಬೆಂಗಳೂರಿಗಾಗಿಯೇ ಎಟಿಎಸ್‌
ಈಗಾಗಲೇ ರಾಜ್ಯದಲ್ಲಿ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್‌) ಕಾರ್ಯಾಚರಿಸುತ್ತಿದೆ. ಆದರೆ ಕಳೆದ ಒಂದು ವರ್ಷದಲ್ಲಿ ಹಲವಾರು ಉಗ್ರರು ಬೆಂಗಳೂರು ಸುತ್ತಮುತ್ತ ಸೆರೆ ಸಿಕ್ಕಿದ್ದಾರೆ. ಇವರಿಂದ ಭಾರೀ ಪ್ರಮಾಣದ ಸ್ಫೋಟಕಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗಾಗಿಯೇ ಪ್ರತ್ಯೇಕ ಎಟಿಎಸ್‌ ಅನ್ನು ತೆರೆಯಲು ನಿರ್ಧರಿಸಲಾಗಿದೆ. ಇದು ನ.1ರಿಂದಲೇ ಜಾರಿಗೆ ಬರಲಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

125 ಉಗ್ರರ ಚಲನವಲನ
ಕರ್ನಾಟಕ ಸೇರಿದಂತೆ ದೇಶಾದ್ಯಂತ ಬಾಂಗ್ಲಾ ಮೂಲದ ಉಗ್ರರು ಹರಡಿರುವ ಬಗ್ಗೆ ಇತ್ತೀಚೆಗಷ್ಟೇ ದಿಲ್ಲಿಯಲ್ಲಿ ನಡೆದ ಎಟಿಎಸ್‌ ಮುಖ್ಯಸ್ಥರ ಸಭೆಯಲ್ಲಿ ಎನ್‌ಐಎ ಮುಖ್ಯಸ್ಥ ವೈ.ಸಿ. ಮೋದಿ ಎಚ್ಚರಿಕೆ ನೀಡಿದ್ದರು. ಸುಮಾರು 125 ಉಗ್ರರು ದೇಶಾದ್ಯಂತ ಚದುರಿ ದ್ದಾರೆ. ಇವರ ಬಗ್ಗೆ ಎಚ್ಚರದಿಂದ ಇರುವಂತೆಯೂ ಸೂಚನೆ ನೀಡಿದ್ದರು. ಜತೆಗೆ ಬೆಂಗಳೂರಿನಲ್ಲೇ 22 ಭಯೋತ್ಪಾದಕರ ಅಡಗುತಾಣಗಳಿವೆ ಎಂದಿ ದ್ದರು. ಹೀಗಾಗಿ ಕರ್ನಾಟಕ ಸಹಿತ ಎಲ್ಲೆಡೆ ಭಾರೀ ಭದ್ರತಾ ಕ್ರಮಗಳ ವ್ಯವಸ್ಥೆ ಮಾಡಲಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ