ಮೋಡೆಲ್‌ ಬ್ಯಾಂಕಿನ 25ನೇ ನೂತನ ಶಾಖೆ ಸಾಕಿನಾಕಾದಲ್ಲಿ ಸೇವಾರ್ಪಣೆ

Team Udayavani, May 8, 2019, 1:59 PM IST

ಮುಂಬಯಿ: ಆಧುನಿಕ ಯುಗದಲ್ಲಿ ಕೊಡು ಕೊಳ್ಳುವಿಕೆಯ ವಹಿವಾಟು ಸುಲಭವಾದುದಲ್ಲ. ವಿಶ್ವಾಸದ ಹೊರತು ಕಾಯ್ದೆ ಕಾನೂನುಗಳ ತೊಡಕು ಹಣಕಾಸು ಸಂಸ್ಥೆಗಳ ವ್ಯವಹಾರದ ವಿಶ್ವಾಸಕ್ಕೆ ಬಾಧಕವಾಗುತ್ತದೆ. ಇಂತಹ ಸಂದಿಗ್ಧ ಕಾಲದಲ್ಲೂ ಸಹಕಾರಿ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಇಂತಹ ಗಣ್ಯರ ಸೇವೆ ಶ್ಲಾಘನೀಯವಾಗಿದೆ. ನೂತನ 25ನೇ ಬೆಳ್ಳಿಶಾಖೆಯು ಸುವರ್ಣ ಶಾಖೆಗೆ ಮುನ್ನುಡಿಯಾಗಲಿ ಎಂದು ಸೈಂಟ್‌ ಆ್ಯಂಟನಿ ಚರ್ಚ್‌ ಸಾಕಿನಾಕಾ ಇದರ‌ ಸಹಾಯಕ ಧರ್ಮಗುರು ರೆ| ಫಾ| ಸಾಮ್ಯುಯೆಲ್‌ ಅವರು ಅಭಿಪ್ರಾಯಿಸಿದರು.

ಮೇ 5ರಂದು ಪೂರ್ವಾಹ್ನ ಅಂಧೇರಿ ಪೂರ್ವದ ಸಾಕಿನಾಕಾದ ಖೇರಾನಿ ರಸ್ತೆಯ ಕ್ರೆಸೆಂಟ್‌ ಬಿಜಿನೆಸ್‌ ಸ್ಕಾರ್‌ ಕಟ್ಟಡದಲ್ಲಿ ಮೋಡೆಲ್‌ ಕೋ. ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ನ‌ 25ನೇ ನೂತನ ಶಾಖೆಯನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಸಹಕಾರಿ ಸಂಸ್ಥೆಗಳಿಗೆ ಗ್ರಾಹಕರ ಮುಖ್ಯವಾಗಿದ್ದು, ಇಂದು ಮೋಡೆಲ್‌ ಬ್ಯಾಂಕ್‌ ತನ್ನ ಶ್ರದ್ಧೆ, ನಿಯತ್ತಿನ ಕೆಲಸದಿಂದ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಬ್ಯಾಂಕ್‌ ಇನ್ನಷ್ಟು ಉನ್ನತ ಮಟ್ಟದಲ್ಲಿ ಬೆಳೆಯಲು ಎಲ್ಲರು ಸಹಕರಿಸಬೇಕು ಎಂದು ವಿನಂತಿಸಿದರು.

ಬ್ಯಾಂಕಿನ ಕಾರ್ಯಾಧ್ಯಕ್ಷ ಆಲ್ಬರ್ಟ್‌ ಡಬ್ಲ್ಯು.ಡಿಸೋಜಾ ಅಧ್ಯಕ್ಷತೆಯಲ್ಲಿ ನೆರವೇರಿದ ಉದ್ಘಾಟನಾ ಸಮಾರಂಭದಲ್ಲಿ ಮುಂಬಯಿ ಸೇವಾ ತೆರಿಗೆ ಇದರ ಜಂಟಿ ಆಯುಕ್ತ ಡಾ| ಡೆವಿಡ್‌ ಥೋಮಸ್‌ ಅಲ್ವಾರೆಸ್‌ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ರಿಬ್ಬನ್‌ ಬಿಡಿಸಿ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಸ್ಥೆಗಳು ಜನ ಸಾಮಾನ್ಯರ ಪಾಲಿನ ಜೀವಾಳವಾಗಿವೆ. ಕೋ. ಆಪರೇಟಿವ್‌ ಬ್ಯಾಂಕ್‌ಗಳು ಮಧ್ಯಮ ಜನತೆಯ ಪಾಲಿನ ಜೀವನ ಶಕ್ತಿಯಾಗಿ ಸೇವಾ ನಿರತವಾಗಿವೆ. ಆದ್ದರಿಂದ ತಮ್ಮ ಮಕ್ಕಳ ಶಿಕ್ಷಣ, ವೃತ್ತಿ ಉದ್ಯಮಕ್ಕಾಗಿ ಸಹಕಾರಿ ಬ್ಯಾಂಕುಗಳನ್ನು ಆಧಾರ ಸ್ತಂಭವಾಗಿಸಿದ ಜನತೆ ಸಹಕಾರಿ ಸಂಸ್ಥೆಗಳನ್ನು ಬದುಕಿನ ಆಶಾಕಿರಣವಾಗಿ ಸ್ವೀಕರಿಸಿದ್ದಾರೆ. ಮುಖ್ಯವಾಗಿ ಮೋಡೆಲ್‌ ಬ್ಯಾಂಕಿನ ಸಿಬ್ಬಂದಿಗಳ ಸ್ನೇಹಪೂರ್ವಕ ವ್ಯವಹಾರ, ಸೇವಾ ಕಾರ್ಯಗಳಿಂದ ನಾನೂ ಕೂಡ ಪ್ರಭಾವೀತನಾಗಿದ್ದೇನೆ ಎಂದರು.

ಬ್ಯಾಂಕಿನ ಸಂಸ್ಥಾಪಕಾಧ್ಯಕ್ಷ ಜೋನ್‌ ಡಿ’ಸಿಲ್ವಾ ಮಾತನಾಡಿ, ಬ್ಯಾಂಕಿನ ಆರಂಭ ಹಾಗೂ ಸಿದ್ಧಿ-ಸಾಧನೆಯನ್ನು ಪ್ರಸ್ತಾಪಿಸಿದರು. ಬ್ಯಾಂಕಿನ ನಿರ್ದೇಶಕ, ಶಾಖಾ ಉಸ್ತುವರಿ ವಿನ್ಸೆಂಟ್‌ ಮಥಾಯಸ್‌ ಬ್ಯಾಂಕಿನ ಸೇವಾವಧಿ ಹಾಗೂ ಕಾರ್ಯವೈಖರಿಯನ್ನು ವಿವರಿಸಿದರು. ಬ್ಯಾಂಕಿನ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್‌. ಡಿ’ಸೋಜಾ ಅವರು ಅತಿಥಿಗಳನ್ನು ಗೌರವಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉದ್ಯಮಿ ಸುಭಾಶ್‌ ಮ್ಹಾತ್ರೆ, ಬ್ಯಾಂಕಿನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರ, ನಿರ್ದೇಶಕರುಗಳಾದ ಮರಿಟಾ ಡಿಮೆಲ್ಲೋ, ಸಿಎ ಪೌಲ್‌ ನಝರೆತ್‌, ಜೆರಾಲ್ಡ್‌ ಕರ್ಡೊàಜಾ, ಲಾರೇನ್ಸ್‌ ಡಿ’ಸೋಜಾ ಮುಲುಂಡ್‌, ಅಬ್ರಹಾಂ ಕ್ಲೇಮೆಂಟ್‌ ಲೊಬೋ, ಹಿರಿಯ ಪ್ರಬಂಧಕರುಗಳಾದ ಝೆನೆರ್‌ ಡಿಕ್ರೂಜ್‌, ಸಹಾಯಕ ಪ್ರಧಾನ ಪ್ರಬಂಧಕರುಗಳಾದ ಶಶಿ ಶೆಟ್ಟಿ, ನರೇಶ್‌ ಠಾಕೂರ್‌, ಉನ್ನತಾಧಿಕಾರಿಗಳಾದ ರಾಯನ್‌ ಬ್ರಾಂಕೋ, ಜೆಸನ್‌ ಮಾರ್ಟಿಸ್‌, ಅನಿಲ್‌ ಮಿನೇಜಸ್‌, ಬೀಯೆಟಾ ಕಾರ್ವಾಲೋ, ಸೇರಿದಂತೆ ನೂತನ ಗ್ರಾಹಕರು, ಷೇರುದಾರರು ಉಪಸ್ಥಿತರಿದ್ದು ಬ್ಯಾಂಕ್‌ ಹಾಗೂ ನೂತನ ಶಾಖೆಯ ಶ್ರೇಯೋಭಿವೃದ್ಧಿಗೆ ಶುಭಹಾರೈಸಿದರು. ಬ್ಯಾಂಕಿನ ಪ್ರಬಂಧಕ ಎಡ್ವರ್ಡ್‌ ರಸ್ಕೀನ್ಹಾ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಶಾಖಾ ಪ್ರಬಂಧಕ ರೋನಾಲ್ಡ್‌ ಡಿಸೋಜಾ ವಂದಿಸಿದರು.

ನಿಧಾನ ಗತಿಯಾಗಿ ಸಾಗಿ ಬಂದ ಮೋಡೆಲ್‌ ಬ್ಯಾಂಕ್‌ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಸಂಸ್ಥೆಗಳಿಗೆ ಶಾಖೆಗಳ ಸಂಖ್ಯೆಗಿಂತ ಇರುವಂತಹ ಶಾಖೆಗಳ ಸೇವೆಯ ವಿಶ್ವಾಸ ಗ್ರಹಿಕೆ ಮುಖ್ಯವಾಗಿದೆ. ಇದನ್ನು ನಿಭಾಯಿಸುವಲ್ಲಿ ಈ ಬ್ಯಾಂಕ್‌ ಯಶಸ್ಸು ಕಂಡಿದೆ. ಇಂತಹ ವಿಶ್ವಾಸವೇ 25ರ ಶಾಖೆಯ ಗುರುತರ ಹೆಜ್ಜೆಯಾಗಿದೆ. ಬ್ಯಾಂಕ್‌ನ್ನು ಇನ್ನಷ್ಟು ಅಭಿವೃದ್ಧಿಯತ್ತ ಸಾಗಿಸುವಲ್ಲಿ ಭವಿಷ್ಯದಲ್ಲೂ ಗ್ರಾಹಕರ ಸಂಪೂರ್ಣ ಸಹಕಾರವಿರಲಿ.
– ಆಲ್ಬರ್ಟ್‌ ಡಿ’ಸೋಜಾ,
ಕಾರ್ಯಾಧ್ಯಕ್ಷರು, ಮೋಡೆಲ್‌ ಕೋ. ಆಪರೇಟಿವ್‌ ಬ್ಯಾಂಕ್‌ ಮುಂಬಯಿ

ಚಿತ್ರ-ವರದಿ : ರೋನಿಡಾ ಮುಂಬಯಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ