ಮಾಲ್ಗುಡಿ ಡೇಸ್ “ಸ್ವಾಮಿ”ಪಾತ್ರದ ಮಾಸ್ಟರ್ ಪೀಸ್ ಸದ್ದಿಲ್ಲದೇ ತೆರೆಮರೆಗೆ ಸರಿಯಲು ಕಾರಣವೇನು?

ಶಂಕರ್ ನಾಗ್ ಹಿಂದಿ ಬರುತ್ತದೆಯಾ ಎಂದು ಕೇಳಿದ್ದರಂತೆ, ಅದಕ್ಕೆ ಮಾಸ್ಟರ್ ...

ನಾಗೇಂದ್ರ ತ್ರಾಸಿ, Oct 5, 2019, 7:45 PM IST

O okಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ, ಖ್ಯಾತ ನಟ ದಿ.ಶಂಕರ್ ನಾಗ್ ಅವರನ್ನು ಮರೆಯಲು ಹೇಗೆ ಸಾಧ್ಯವಿಲ್ಲವೋ..ಅವರು ನಿರ್ದೇಶಿಸಿದ ಆರ್ ಕೆ ನಾರಾಯಣ್ ಅವರ ಸಣ್ಣ ಕಥೆಯ ಮಾಲ್ಗುಡಿ ಡೇಸ್ ಹಿಂದಿ ಧಾರವಾಹಿ ಹಾಗೂ ಅದರ ಪಾತ್ರಧಾರಿ ಸ್ವಾಮಿಯನ್ನು ಕೂಡಾ ನೆನಪಿಸಿಕೊಳ್ಳದೇ ಇರಲು ಅಸಾಧ್ಯ. ಆರ್ ಕೆ ನಾರಾಯಣ್ ಅವರ ಮಾಲ್ಗುಡಿ ಡೇಸ್ ಕಥೆಯ 39 ಎಪಿಸೋಡ್ ಗಳನ್ನು ಶಂಕರ್ ನಾಗ್ ಹಾಗೂ 15 ಎಪಿಸೋಡ್ ಗಳನ್ನು ಕವಿತಾ ಲಂಕೇಶ್ ನಿರ್ದೇಶಿಸಿದ್ದರು. 1987ರಲ್ಲಿ ಬಿಡುಗಡೆಗೊಂಡಿದ್ದ ಮಾಲ್ಗುಡಿ ಡೇಸ್ ಜನಪ್ರಿಯತೆ ಗಳಿಸಿದ ಧಾರಾವಾಹಿಗಳಲ್ಲಿ ಒಂದಾಗಿದೆ.

ಶಿವಮೊಗ್ಗ ಜಿಲ್ಲೆಯ ಆಗುಂಬೆ, ಬೆಂಗಳೂರು, ದಾವಣಗೆರೆ, ತುಮಕೂರು ಜಿಲ್ಲೆಗಳಲ್ಲಿ ಚಿತ್ರೀಕರಣಗೊಂಡಿದ್ದ, ದೂರದರ್ಶನದಲ್ಲಿ ರಾತ್ರಿ 9ಗಂಟೆಗೆ 80ರ ದಶಕದಲ್ಲಿ ಪ್ರಸಾರವಾಗಿದ್ದ ಮಾಲ್ಗುಡಿ ಡೇಸ್ ಎಂಬ ಧಾರಾವಾಹಿಯಲ್ಲಿನ ಸ್ವಾಮಿ ಪಾತ್ರಧಾರಿ ಮಾಸ್ಟರ್ ಮಂಜುನಾಥ್ ನಟನೆ ಮರೆಯಲು ಸಾಧ್ಯವಿದೆಯಾ?

1976ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದ ನಾಯಕರ್ ಅಲಿಯಾಸ್ ಮಾಸ್ಟರ್ ಮಂಜುನಾಥ್ ಬಿಎ ಇಂಗ್ಲೀಷ್, ಎಂಎ ಸೋಶಿಯಾಲಜಿ ಪದವೀಧರ. ಸಿನಿಮಾಟೋಗ್ರಫಿಯಲ್ಲಿ ಡಿಪ್ಲೋಮಾ ಮಾಡಿಕೊಂಡಿದ್ದಾರೆ. ಅವೆಲ್ಲದಕ್ಕೂ ಮುನ್ನ ಮಾಸ್ಟರ್ ಮಂಜುನಾಥ್ ಅವರ ಸಿನಿಲೋಕದ ಜರ್ನಿ ತುಂಬಾ ಕುತೂಹಲಕಾರಿ ಹಾಗೂ ಬಾಲನಟನಾಗಿ ಎಲ್ಲರ ಮನೆಗೆದ್ದ ಮಾಸ್ಟರ್ ಸದ್ದಿಲ್ಲದೆ ತೆರೆಮರೆಗೆ ಸರಿದಿದ್ದು ಕೂಡಾ ಅಷ್ಟೇ ಕುತೂಹಲಕಾರಿ ಕಥನ.

3ನೇ ವರ್ಷಕ್ಕೆ ನಟನೆಗೆ ಕಾಲಿಟ್ಟಿದ್ದ ಮಾಸ್ಟರ್!

ಬಾಲ ಪ್ರತಿಭೆಯಾಗಿ ಮಾಸ್ಟರ್ ಮಂಜುನಾಥ್ ತನ್ನ ಮೂರನೇ ವಯಸ್ಸಿಗೆ ನಟನೆಯನ್ನು ಆರಂಭಿಸಿದ್ದರು. ಆರ್.ಕೆ.ನಾರಾಯಣ್ ಅವರ ಮಾಲ್ಗುಡಿ ಡೇಸ್ ನಲ್ಲಿ ಮಾಸ್ಟರ್ ಮಂಜುನಾಥ್ ತನ್ನ ಶಾಲಾ ದಿನಗಳ ರಜೆಯಲ್ಲಿ (1985-86) ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದರು. 1987ರಲ್ಲಿ ಮಾಲ್ಗುಡಿ ಡೇಸ್ ಎಂಬ ಪ್ರಸಿದ್ಧ ಧಾರಾವಾಹಿ ಆರಂಭವಾಗಿತ್ತು. ಮಾಲ್ಗುಡಿ ಡೇಸ್ ಧಾರವಾಹಿ ಚಿತ್ರೀಕರಣವಾಗುವ ಸಂದರ್ಭದಲ್ಲಿ ಮಾಸ್ಟರ್ ಮಂಜುನಾಥ್ ಆರ್ ಕೆ ಅವರ ಸ್ವಾಮಿ ಮತ್ತು ಗೆಳೆಯರು ಕಥೆಯನ್ನೇ ಓದಿರಲಿಲ್ಲವಾಗಿತ್ತಂತೆ!

ತನ್ನ ಪಾಡಿಗೆ ಶಾಲೆಗೆ ಹೋಗುತ್ತಿದ್ದ ಮಂಜುನಾಥ್ ಗೆ ಒಂದು ದಿನ ಶಂಕರ್ ನಾಗ್, ಕೂಡಲೇ ನನ್ನ ಭೇಟಿ ಮಾಡಬೇಕು ಮನೆಗೆ ಕಾರು ಕಳುಹಿಸುತ್ತೇನೆ ಎಂದು ಹೇಳಿಕಳುಹಿಸಿದ್ದರಂತೆ. ಅಂದು ವುಡ್ ಲ್ಯಾಂಡ್ಸ್ ಹೋಟೆಲ್ ಗೆ ಹೋಗಿದ್ದಾಗ ಸಣ್ಣ ಕಾಸ್ಟಿಂಗ್ ರೂಂನಲ್ಲಿ ಹಲವಾರು ಮಕ್ಕಳು ಇದ್ದಿದ್ದರಂತೆ. ಆಗ ಶಂಕರ್ ನಾಗ್ ಹಿಂದಿ ಬರುತ್ತದೆಯಾ ಎಂದು ಕೇಳಿದ್ದರಂತೆ, ಅದಕ್ಕೆ ಮಾಸ್ಟರ್ ಮಂಜುನಾಥ್ ಒಂದು ಶಬ್ದವೂ ಗೊತ್ತಿಲ್ಲ ಎಂದಿದ್ದರಂತೆ! ಆದರೆ ಶಂಕರ್ ನಾಗ್ ಅವರಿಗೆ ಸ್ವಾಮಿ ಪಾತ್ರ ನನ್ನ ಹತ್ತಿರನೇ ಮಾಡಿಸಬೇಕೆಂದು ನಿರ್ಧರಿಸಿಬಿಟ್ಟಿದ್ದರು. ನಾಗ್ ಅವರಿಗೂ ನನ್ನ ಬಗ್ಗೆ ಚೆನ್ನಾಗಿ ತಿಳಿದಿತ್ತು, ಈ ಹುಡುಗ ಮಾಸ್ಟರ್ ಯಾವ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅಭಿನಯಿಸಬಲ್ಲ ಎಂಬುದು ಅವರ ವಿಶ್ವಾಸವಾಗಿತ್ತು. ಹೀಗೆ ತನಗೆ ಮಾಲ್ಗುಡಿ ಡೇಸ್ ನಲ್ಲಿ ಸ್ವಾಮಿ ಪಾತ್ರ ಮಾಡುವ ಅವಕಾಶ ಲಭಿಸಿತ್ತು ಎಂದು ನೆನಪಿಸಿಕೊಂಡಿದ್ದರು.

ಸ್ವಾಮಿ ಪಾತ್ರವನ್ನು ಹೇಗೆ ನಿರ್ವಹಿಸಬೇಕೆಂಬ ಕಲ್ಪನೆ ಕೂಡಾ ಮಾಸ್ಟರ್ ಮಂಜುನಾಥ್ ಗೆ ಇರಲಿಲ್ಲವಾಗಿತ್ತು. ಆದರೆ ಚಿತ್ರೀಕರಣದ ವೇಳೆ ಹೇಗೆ ಹೇಳುತ್ತಿದ್ದರೋ ಆ ರೀತಿ ನಟಿಸಿದ್ದರು. ಅಂದು ಸೆಟ್ ಗೆ ಬರುತ್ತಿದ್ದ ಆರ್.ಕೆ ನಾರಾಯಣ್ ಅವರು ಶಂಕರ್ ನಾಗ್ ಜತೆ ಚರ್ಚಿಸುತ್ತಿದ್ದರಂತೆ. ಮಂಜುನಾಥ್ ಅವರನ್ನು ವಿಚಾರಿಸಿಕೊಂಡು ಹೋಗುತ್ತಿದ್ದರೆ ವಿನಃ ಸ್ವಾಮಿ ಪಾತ್ರದಲ್ಲಿ ಒಬ್ಬ ಹುಡುಗ ನಟಿಸುತ್ತಿದ್ದ ಎಂಬುದಷ್ಟೇ ಆರ್ ಕೆ ತಿಳಿದಿತ್ತು ಅಷ್ಟೇ!

ಆದರೆ ಮಾಲ್ಗುಡಿ ಡೇಸ್ ದೊಡ್ಡ ಹಿಟ್ ಆದ ನಂತರ ವುಡ್ ಲ್ಯಾಂಡ್ಸ್ ಹೋಟೆಲ್ ನಲ್ಲಿ ನಡೆದ ಸೆಲೆಬ್ರೆಷನ್ಸ್ ನಲ್ಲಿ ಆರ್.ಕೆ ನಾರಾಯಣ್ ಅವರು ತನ್ನ ನಟನೆ ಮೆಚ್ಚಿ ಶ್ಲಾಘಿಸಿದ್ದು ದೊಡ್ಡ ಕೊಡುಗೆ ಎಂದೇ ಮಾಸ್ಟರ್ ಮಂಜುನಾಥ್ ಹಲವು ಸಂದರ್ಶನಗಳಲ್ಲಿ ನೆನಪಿಸಿಕೊಂಡಿದ್ದಾರೆ. ಸ್ವಾಮಿ ಪಾತ್ರ ಹೇಗೆ ಮೂಡಿಬರಬೇಕೆಂದು ನಾನು ಕಲ್ಪಿಸಿಕೊಂಡಿದ್ದೇನೆಯೋ ಅದರಂತೆಯೇ ನಟಿಸಿದ್ದೀಯಾ ಎಂಬ ಆರ್ ಕೆ ಅವರ ಹೊಗಳಿಕೆ ತನಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸಿಕ್ಕಷ್ಟು ಖುಷಿಯಾಗಿತ್ತು ಎಂಬುದು ಮಾಸ್ಟರ್ ಮಂಜುನಾಥ್ ಮನದಾಳದ ಮಾತು.

1982ರಲ್ಲಿ ಸಿನಿರಂಗಕ್ಕೆ ಎಂಟ್ರಿ:

ವಿ.ಸೋಮಶೇಖರ್ ನಿರ್ದೇಶನದ ಅಂಬರೀಶ್, ಜಯಮಾಲಾ, ಟೈಗರ್ ಪ್ರಭಾಕರ್, ಸುಂದರ್ ಕೃಷ್ಣ ಅರಸ್ ಸೇರಿದಂತೆ ಘಟಾನುಘಟಿಗಳು ನಟಿಸಿದ್ದ ಅಜಿತ್ ಸಿನಿಮಾದಲ್ಲಿ ಮಾಸ್ಟರ್ ಮಂಜುನಾಥ್ ನಟಿಸುವ ಮೂಲಕ ಬೆಳ್ಳಿತೆರೆಗೆ ಪಾದರ್ಪಣೆ ಮಾಡಿದ್ದರು. ನಂತರ ಮುತ್ತಿನಂಥ ಅತ್ತಿಗೆ, ಟೋನಿ, ಜಗ್ಗು, ಹೊಸ ತೀರ್ಪು, 1983ರಲ್ಲಿ ಶಂಕರ್ ನಾಗ್ ನಿರ್ದೇಶನದ ನೋಡಿ ಸ್ವಾಮಿ ನಾವಿರೋದೆ ಹೀಗೆ, ಸಾಂಗ್ಲಿಯಾನ, ರಣಧೀರ ಸೇರಿದಂತೆ 60ಕ್ಕೂ ಅಧಿಕ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಹೆಗ್ಗಳಿಕೆ ಮಾಸ್ಟರ್ ಮಂಜುನಾಥ್ ಅವರದ್ದು. 1990ರಲ್ಲಿ ಬಿಡುಗಡೆಯಾದ ಅಗ್ನಿಪಥ್ ಸಿನಿಮಾದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್, ರೋಹಿಣಿ ಹಟ್ಟಿಯಂಗಡಿ, ಮುಕುಲ್ ಆನಂದ್, ಯಶ್ ಛೋಪ್ರಾ ಜತೆ ನಟಿಸಿದ್ದರು. ಹೀಗೆ ಬಾಲನಟನಾಗಿ ಜನಾನುರಾಗಿಯಾಗಿದ್ದ ಮಾಸ್ಟರ್ ಮಂಜುನಾಥ್ ಕೇವಲ 19ನೇ ವಯಸ್ಸಿನವರೆಗೆ ಮಾತ್ರ ನಟಿಸಿ 6 ಅಂತಾರಾಷ್ಟ್ರೀಯ, ಒಂದು ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡ ನಂತರ ನಟನೆಗೆ ಗುಡ್ ಬೈ ಹೇಳುವ ಮೂಲಕ ಅಪಾರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.

ಆ ಸಮಾರಂಭದಲ್ಲಿ ನಟನೆ ಬಿಡಲು ತೀರ್ಮಾನ!

ಸಾಂಗ್ಲಿಯಾನ, ಮಾಲ್ಗುಡಿ ಡೇಸ್, ಸ್ವಾಮಿ ಪಾತ್ರ…ಹೆಸರು, ಕೀರ್ತಿ, ಪ್ರಶಸ್ತಿ ಎಲ್ಲವೂ ಮಾಸ್ಟರ್ ಮಂಜುನಾಥ್ ಪಾಲಿಗೆ ಸಂದಿದ್ದವು. ಹೀಗೆ ಇಟಲಿಯಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಾಸ್ಟರ್ ಮಂಜುನಾಥ್ ಗೆ ದಿಢೀರ್ ಜ್ಞಾನೋದಯವಾದಂತೆ ಆಯ್ತಂತೆ. ಸ್ವಾಮಿ ಪಾತ್ರದ ನಟನೆಗಾಗಿ ದೊರೆತ ಪ್ರಶಸ್ತಿ ಅದು..ಎಲ್ಲರೂ ಇದ್ದರು..ಆದರೆ ಗೆಳೆಯರು ಇಲ್ಲ, ಆ ಖುಷಿಯನ್ನು ಹಂಚಿಕೊಳ್ಳಲು ಕುಟುಂಬ ವರ್ಗದವರೂ ಇರಲಿಲ್ಲವಾಗಿತ್ತು. ಅಂದೇ ನಾನು ನಟನೆಯನ್ನು ಬಿಟ್ಟುಬಿಡಲು ನಿರ್ಧರಿಸಿಬಿಟ್ಟಿದ್ದೆ. ಜೀವನದಲ್ಲಿ ಹಣದ ವಿಚಾರ ಬೇರೆ ಮಾತು.

ಒಳ್ಳೆಯ ಸಿನಿಮಾದಲ್ಲಿ ನಟಿಸಿದ್ದಕ್ಕೆ ಗೌರವ ಸಿಕ್ಕಿದೆ. ಒಳ್ಳೆಯ ಶಿಕ್ಷಣ ಇದೆ. ಹೀಗಾಗಿ ಬೇರೊಂದು ಕೆಲಸ ತನಗೆ ದೊರಕುವುದು ಕಷ್ಟದ ವಿಚಾರವಲ್ಲ ಎಂದು ದೃಢ ನಿರ್ಧಾರಕ್ಕೆ ಬಂದು ಬಿಟ್ಟಿದೆ ಎಂದು ಮುಂಬೈ ಮಿರರ್ ಗೆ ನೀಡಿದ್ದ ಸಂದರ್ಶನದಲ್ಲಿ ಮಾಸ್ಟರ್ ಮಂಜುನಾಥ್ ತನ್ನ ಮನದಾಳದ ಮಾತನ್ನು ಬಹಿರಂಗಪಡಿಸಿದ್ದರು.

ನಟನೆ ಬಿಟ್ಟು ಬಿಎಂಐಸಿಗೆ ಸೇರಿಕೊಂಡಿದ್ದ ಮಾಸ್ಟರ್:

ಬಾಲನಟನಾಗಿ ಮಿಂಚಿದ್ದ ಮಾಸ್ಟರ್ ಮಂಜುನಾಥ್ ಚಿತ್ರರಂಗಕ್ಕೆ ವಿದಾಯ ಹೇಳಿ ಅಶೋಕ್ ಖೇಣಿ ಒಡೆತನದ ನೈಸ್ (ಬಿಎಂಐಸಿಪಿ)ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಇದೀಗ ಸ್ವಂತ ಪಬ್ಲಿಕ್ ರಿಲೆಶನ್ಸ್ ಕನ್ಸ್ ಲ್ಟ್ ಟೆಂಟ್ ಆಗಿ ಮಾಸ್ಟರ್ ಮಂಜುನಾಥ್ ಕಾರ್ಯನಿರ್ವಹಿಸುತ್ತಿದ್ದಾರೆ. ಅಥ್ಲೇಟಿ ಸ್ವರ್ಣಾರೇಖಾ ಅವರನ್ನು ಮದುವೆಯಾಗಿದ್ದಾರೆ. ಮಾಸ್ಟರ್ ದಂಪತಿಗೆ ಒಬ್ಬ ಪುತ್ರನಿದ್ದಾನೆ. ಆದರೆ ಸ್ವಾಮಿ ಪಾತ್ರ ಸೇರಿದಂತೆ ತನ್ನ ಮಾಸ್ಟರ್ ಪೀಸ್ ಅಭಿಯನದ ಮೂಲಕ ಜನಮನಗೆದ್ದ ನಟ ಹೀಗೆ ದಿಢೀರನೆ ಕಳೆದುಹೋಗಬಾರದಿತ್ತು!!


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ