ಶ್ರೀ ಬಸವೇಶ್ವರ ಶರಣ ಮಂಡಳ ಡೊಂಬಿವಲಿ: ಶ್ರೀ ಬಸವೇಶ್ವರ ಜಯಂತ್ಯುತ್ಸವ

ಬಸವೇಶ್ವರರು ಸಮಾನತೆಯ ಹರಿಕಾರರು: ಗುರು ಮಹಾಂತ ಸ್ವಾಮೀಜಿ

Team Udayavani, May 15, 2019, 4:12 PM IST

 

ಡೊಂಬಿವಲಿ: ಲಿಂಗಭೇದ, ಜಾತಿಭೇದವನ್ನು ಅಳಿಸಿ ಇಡೀ ವಿಶ್ವಕ್ಕೆ ಸಮಾನತೆಯ ಪರಿಕಲ್ಪನೆಯನ್ನು ಪರಿಚಯಿಸಿ ಕೊಂಡು ಸಮಾನತೆಯ ಹರಿಕಾರ ಎಂದೆನಿಸಿ ಕೊಂಡ ಮಹಾನ್‌ ಸಾಧಕರು ಜಗಜ್ಯೋತಿ ಬಸವೇಶ್ವರರು ಎಂದು ಇಳಕಲ್‌É ಚಿತ್ತರಗಿ ಸಂಸ್ಥಾನ ಮಠದ ಶ್ರೀ ಗುರು ಮಹಾಂತ ಸ್ವಾಮಿಗಳು ಹೇಳಿದರು.

ಅವರು ಮೇ 12ರಂದು ಬೆಳಗ್ಗೆ ಇಲ್ಲಿನ ಗಣೇಶ ಮಂದಿರದ ವಕ್ರತುಂಡ ಸಭಾಗೃಹದಲ್ಲಿ ಶ್ರೀ ಬಸವೇಶ್ವರ ಶರಣ ಮಂಡಳ ಡೊಂಬಿವಲಿ ಆಯೋಜಿಸಿದ ಶ್ರೀ ಬಸವೇಶ್ವರ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಜಾತಿ ಮತ, ಮೇಲು ಕೀಳೆಂಬ ಭಾವನೆ ಇವತ್ತಿನವರೆಗೂ ನಮ್ಮ ಮನಸ್ಸಿನಲ್ಲಿ ಮನೆ ಮಾಡಿವೆ. ಇವನ್ನು ನಮ್ಮ ಮನಸ್ಸಿನಿಂದ ಬೇರು ಸಹಿತ ಕಿತ್ತೆಸೆಯಬೇಕಾದರೆ ಬಸವೇಶ್ವರರ ಇಷ್ಟಲಿಂಗ ಯೋಗವೇ ದಿವ್ಯ ಔಷಧಿಯಾಗಿದೆ ಎಂದು ಹೇಳಿದ ಸ್ವಾಮಿಗಳು, ಮಹಿಳೆಯರಿಗೆ ಲಿಂಗದೀಕ್ಷೆ ನೀಡಿದ ಏಕಮೇವ ಸಮಾಜ ಲಿಂಗಾಯತ ಸಮಾಜ. ಹೆಣ್ಣು ಗಂಡೆಂಬ ಭೇದ ಭಾವ ಬೇಡ. ಇಬ್ಬರಲ್ಲೂ ಆತ್ಮ ಒಂದೇ ಆಗಿದ್ದು, ಜಗಜ್ಯೋತಿ ಬಸವೇಶ್ವರರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ಸಾಗಿಸಬೇಕೆಂದು ಕರೆ ನೀಡಿದರು.

ಇದೇ ಸಮಯದಲ್ಲಿ ಸ್ತ್ರೀ ಕುಲೋದ್ಧಾರಕ ಬಸವಣ್ಣ ವಿಷಯದ ಕುರಿತು ಉಪನ್ಯಾಸ ನೀಡಿದ ಸಾಧಕಿ ಡಾ| ಕಲ್ಯಾಣಮ್ಮ ಲಂಗೋಟಿ ಅವರು, ಅಂದು ಮಹಿಳೆಯರನ್ನು ಕೀಳರಿಮೆಯಿಂದ ನೋಡುತ್ತಿದ್ದ ಕಾಲದಲ್ಲಿ ಮಹಿಳೆಯರು ಧ್ವನಿ ಎತ್ತದೆ ತಮ್ಮ ನೋವುಗಳನ್ನು ಮನಸ್ಸಿನಲ್ಲಿಯೇ ನುಂಗುತ್ತಿದ್ದರು. ದುಡಿಯುವವರು ಕನಿಷ್ಠ ಹಾಗೂ ದುಡಿಯದೇ ಇರುವವರನ್ನು ಶ್ರೇಷ್ಠರೆಂದು ಪರಿಗಣಿಸುವ ಕಾಲದಲ್ಲಿ ಬಸವಣ್ಣನವರು ಜಾತ್ಯತೀತ ಸಮಾಜವನ್ನು ಕಟ್ಟುವುದರ ಜತೆಗೆ ದೀನ ದುಃಖೀತರಿಗೆ ಧ್ವನಿಯಾಗಿದ್ದರು ಎಂದರು.

ಬಸವ ತತ್ವಗಳನ್ನು ಕೇವಲ ಭಾಷಣಕ್ಕಾಗಿ ಮೀಸಲಿಟ್ಟುಕೊಳ್ಳದೆ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಬಹುದು. ನಮ್ಮ ದೃಷ್ಟಿ ಹಾಗೂ ಆಲೋಚನೆಗಳು ಬದಲಾದಾಗ ಮಾತ್ರ ನಮ್ಮ ಬದುಕು ಬಂಗಾರವಾಗುತ್ತದೆ ಎಂದು ಹೇಳಿ ಶುಭ ಕೋರಿದರು.

ಗೌರವ ಅತಿಥಿಗಳಾಗಿ ಆಗಮಿಸಿದ ಸಾಹಿತಿ ಡಾ| ಸಿದ್ಧಣ್ಣ ಲಂಗೋಟಿ ಬಸವಣ್ಣನವರ ವಚನಗಳನ್ನು ಓದಿ ಅರ್ಥೈಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಬಸವ ತತ್ವ ಕಾರ್ಲ್ ಮಾರ್ಕ್ಸ್
ಗಿಂತಲೂ ಶ್ರೇಷ್ಠವಾದದ್ದು. ಆದರೆ, ವಿಪರ್ಯಾಸದ
ಸಂಗತಿ ಎಂದರೆ ಬಸವ ತತ್ವಗಳನ್ನು ಒಪ್ಪಿಕೊಂಡ
ನಾವು ಅವುಗಳನ್ನು ಜೀವನದಲ್ಲಿ ಅಳವಡಿಸಿ
ಕೊಳ್ಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸುತ್ತ, ಬಸವ ತತ್ವ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ದೇಶವಷ್ಟೇ ಅಲ್ಲ ಇಡೀ ವಿಶ್ವವೇ ಪ್ರಗತಿ ಸಾಧಿಸಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗಣ್ಯರನ್ನು ಶಾಲು, ಶ್ರೀಫಲ ಮತ್ತು ನೆನಪಿನ ಕಾಣಿಕೆಯನ್ನು ನೀಡಿ ಪದಾಧಿಕಾರಿಗಳು ಗೌರವಿಸಿದರು. ಗಣ್ಯರು ಜ್ಯೋತಿ ಬೆಳಗಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಾಯಕಿ ರಶ್ಮಿ ಕಾಖಂಡಕಿ ವಚನ ಗಾಯನವನ್ನು ಪ್ರಸ್ತುತಪಡಿಸಿದರು.

ವೇದಿಕೆಯಲ್ಲಿ ಗಣ್ಯರಾದ ಶ್ರೀ ಗುರು ಮಹಾಂತ ಸ್ವಾಮೀಜಿ, ಡಾ ಸಿದ್ದಣ್ಣ ಲಂಗೋಟಿ, ಡಾ| ಕಲ್ಯಾಣಮ್ಮ ಲಂಗೋಟಿ, ಜಯಶ್ರೀ ತೋಡಕರ್‌, ಎಸ್‌. ಎನ್‌. ಸೋಮಾ, ಆರ್‌. ಎಂ. ಹೊಸಕೋಟಿ ಉಪಸ್ಥಿತರಿದ್ದರು. ದೂರದರ್ಶನ ಮುಂಬಯಿಯ ನಿವೃತ್ತ ಅಧಿಕಾರಿ ಶರಣ ಬಿರಾಜಾªರ್‌, ಅನ್ನದಾಸೋಹ ನೀಡಿದ ಮಲ್ಲಿಕಾರ್ಜುನ ಬಿರಾದರ ದಂಪತಿಗಳನ್ನು ಸ್ವಾಮಿಗಳು ಶಾಲು, ಶ್ರೀಫಲ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಸಂಸ್ಥೆಯ ಉಪಾಧ್ಯಕ್ಷೆ ಜಯಶ್ರೀ ತೋಡಕರ್‌ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಎಂ. ಆರ್‌. ಹೊಸಕೋಟಿ ವಂದಿಸಿದರು. ವೀರಣ್ಣ ಕನವಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಎಂ. ಜಿ. ಗವಿಮಠ, ಜಿ.ಬಿ. ಮಠಪತಿ, ನ್ಯಾಯವಾದಿ ಜಿ. ಎ. ಪಾಟೀಲ್‌, ಉಷಾ ಪಾಟೀಲ್‌, ರಾಜಶ್ರೀ ಚಿನವಳ್ಳಿ, ಸೋಮಶೇಖರ ಮಸಳಿ ಸಹಕರಿಸಿದರು. ಸಮಾರಂಭದಲ್ಲಿ ಬಸವ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಚಿತ್ರ, ವರದಿ: ಗುರುರಾಜ ಪೋತನೀಸ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ