ದಯಾಮಣಿ ಶೆಟ್ಟಿ ಅವರಿಗೆ ಯಕ್ಷಧ್ರುವ ಕಲಾ ಗೌರವ ಪ್ರಶಸ್ತಿ
ಕವಿ, ಪ್ರಸಂಗಕರ್ತೆ
Team Udayavani, Jun 2, 2019, 5:40 PM IST
ಮುಂಬಯಿ: ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಯಕ್ಷಧ್ರುವ ಪಟ್ಲ ಸಂಭ್ರಮ-2019 ಜೂ. 2 ರಂದು ಬೆಳಗ್ಗೆ 8 ರಿಂದ ರಾತ್ರಿ 12 ರವರೆಗೆ ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ದಿನಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಲಿದೆ.
ಸಮಾರಂಭದಲ್ಲಿ ಮುಂಬಯಿಯ ಲೇಖಕಿ, ಯಕ್ಷಗಾನ ಪ್ರಸಂಗಕರ್ತೆ, ಮಹಿಳಾ ಭಾಗವತೆ, ಕವಿ ದಯಾಮಣಿ ಎಸ್. ಶೆಟ್ಟಿ ಎಕ್ಕಾರು ಅವರಿಗೆ 2019ನೇ ಸಾಲಿನ ಯಕ್ಷಧ್ರುವ ಕಲಾ ಗೌರವ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಲಾಗುವುದು. ಯಕ್ಷಗಾನ ಮಹಿಳಾ ಭಾಗವತರಾಗಿ ಹೆಸರು ಮಾಡಿರುವ ದಯಾಮಣಿ ಎಸ್. ಶೆಟ್ಟಿ ಎಕ್ಕಾರು ಅವರು ಲೇಖಕಿಯಾಗಿ, ಕವಿಯಾಗಿ, ಪ್ರಸಂಗಕರ್ತೆಯಾಗಿ, ಯಕ್ಷಗಾನ ಕಲಾವಿದೆಯಾಗಿ ಹೆಸರು ಮಾಡಿದವರು.
ನಗರದ ಹಲವಾರು ಸಂಘ-ಸಂಸ್ಥೆಗಳ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಭಾಗವತರಾಗಿಯೂ ಜನಮೆಚ್ಚುಗೆ ಪಡೆದಿದ್ದಾರೆ. ಅವರ ಕವನ ಸಂಕಲನ, ಲೇಖನಗಳ ಸಂಗ್ರಹಗಳ ಕೃತಿಗಳು ಈಗಾಗಲೇ ಪ್ರಕಟಗೊಂಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದೆ. ಅವರ ಸಿದ್ಧಿ-ಸಾಧನೆಗಳಿಗೆ ವಿವಿಧ ಸಂಘ-ಸಂಸ್ಥೆಗಳ ಸಮ್ಮಾನ, ವಿವಿಧ ಪುರಸ್ಕಾರಗಳು ಲಭಿಸಿವೆ.