ಏಶ್ಯ ಜೂ. ಬ್ಯಾಡ್ಮಿಂಟನ್: ಲಕ್ಷ್ಯ ಸೇನ್ಗೆ ಪದಕ ಖಚಿತ
Team Udayavani, Jul 21, 2018, 6:00 AM IST
ಜಕಾರ್ತಾ: ಇಲ್ಲಿ ನಡೆಯುತ್ತಿರುವ ಏಶ್ಯ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಭಾರತದ 6ನೇ ಶ್ರೇಯಾಂಕದ ಆಟಗಾರ ಲಕ್ಷ್ಯಾ ಸೇನ್ ಪದಕವನ್ನು ಖಚಿತಪಡಿಸಿದ್ದಾರೆ.
ಚೀನದ ದ್ವಿತೀಯ ಶ್ರೇಯಾಂಕದ ಆಟಗಾರ ಲೀ ಶಿಫೆಂಗ್ ಅವರಿಗೆ 21-14, 21-12 ಅಂತರದ ಆಘಾತಕಾರಿ ಸೋಲುಣಿಸಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಲಕ್ಷ್ಯ ಕನಿಷ್ಠ ಕಂಚಿನ ಪದಕವೊಂದನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಶನಿವಾರದ ಸೆಮಿಫೈನಲ್ನಲ್ಲಿ ಲಕ್ಷ್ಯ ಸೇನ್ ಆತಿಥೇಯ ಇಂಡೋನೇಶ್ಯದ ಲಿಯೋನಾರ್ಡೊ ರುಂಬಾಯ್ ಅವರನ್ನು ಎದುರಿಸಲಿದ್ದಾರೆ.
ಡಬಲ್ಸ್ನಲ್ಲಿ ಸೋಲು
ಪುರುಷರ ಡಬಲ್ಸ್ನಲ್ಲಿ ಭಾರತದ ಮನ್ಜಿತ್ ಸಿಂಗ್-ಡಿಂಕೊ ಸಿಂಗ್ ಪ್ರೀ-ಕ್ವಾರ್ಟರ್ ಫೈನಲ್ನಲ್ಲಿ ಸೋತು ಹೊರಬಿದ್ದರು. ಇವರನ್ನು ಚೀನದ ಡಿ ಜಿಜಿಯಾನ್-ವಾಂಗ್ ಚಾಂಗ್ 21-7, 21-15 ಅಂತರದಿಂದ ಮಣಿಸಿದರು.