ಕೊಲಂಬೊ ಟೆಸ್ಟ್: ಮೊದಲ ದಿನವೇ ಪಾಕ್ ಹಿಡಿತ
Team Udayavani, Jul 25, 2023, 6:16 AM IST
ಕೊಲಂಬೊ: ಆತಿಥೇಯ ಶ್ರೀಲಂಕಾ ಎದುರಿನ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನವೇ ಪಾಕಿಸ್ಥಾನ ಬಿಗಿಯಾದ ಹಿಡಿತ ಸಾಧಿಸಿದೆ. ಲಂಕೆಯನ್ನು 166ಕ್ಕೆ ಹಿಡಿದು ನಿಲ್ಲಿಸಿದ ಬಳಿಕ 2 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಮುನ್ನಡೆಯ ಸೂಚನೆ ನೀಡಿದೆ.
ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 4 ವಿಕೆಟ್ಗಳಿಂದ ಸೋತ ಶ್ರೀಲಂಕಾ, ಸರಣಿಯನ್ನು ಸಮಬಲಗೊಳಿಸುವ ಯೋಜನೆ ಯೊಂದಿಗೆ ಆಡಲಿಳಿದಿತ್ತು. ಆದರೆ ಅಬ್ರಾರ್ ಅಹ್ಮದ್ (69ಕ್ಕೆ 4) ಮತ್ತು ನಸೀಮ್ ಶಾ (41ಕ್ಕೆ 3) ಬೌಲಿಂಗ್ ದಾಳಿಗೆ ತತ್ತರಿಸಿತು. ಧನಂಜಯ ಡಿ ಸಿಲ್ವ ಏಕಾಂಗಿಯಾಗಿ ಹೋರಾಡಿ ಅರ್ಧ ಶತಕವೊಂದನ್ನು ದಾಖಲಿಸಿದರು (57). ದಿನೇಶ್ ಚಂಡಿಮಾಲ್ 34 ರನ್ ಮಾಡಿದರು. 36ಕ್ಕೆ 4 ವಿಕೆಟ್ ಬಿದ್ದ ಬಳಿಕ ತಂಡದ ರಕ್ಷಣೆಗೆ ನಿಂತ ಈ ಜೋಡಿ, ಮೊತ್ತವನ್ನು 121ರ ತನಕ ಕೊಂಡೊಯ್ದಿತು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಕುಸಿತ ತೀವ್ರಗೊಂಡಿತು. 45 ರನ್ ಅಂತರದಲ್ಲಿ ಲಂಕೆಯ 6 ವಿಕೆಟ್ ಉದುರಿ ಹೋಯಿತು.
ಪಾಕಿಸ್ಥಾನ ಇಮಾಮ್ ಉಲ್ ಹಕ್ (6) ಅವರನ್ನು ಬೇಗನೇ ಕಳೆದು ಕೊಂಡಿತು. ಆದರೆ ಅಬ್ದುಲ್ಲ ಶಫೀಕ್ (ಬ್ಯಾಟಿಂಗ್ 74) ಮತ್ತು ಶಾನ್ ಮಸೂದ್ (51) ಅರ್ಧ ಶತಕ ಬಾರಿಸಿ ತಂಡವನ್ನು ಆಧರಿಸಿದರು. ದ್ವಿತೀಯ ವಿಕೆಟಿಗೆ 108 ರನ್ ಪೇರಿಸಿದರು. ಎರಡೂ ವಿಕೆಟ್ ಅಸಿತ ಫೆರ್ನಾಂಡೊ ಕೆಡವಿದರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-166 (ಧನಂಜಯ ಡಿ ಸಿಲ್ವ 57, ಚಂಡಿಮಾಲ್ 34, ರಮೇಶ್ ಮೆಂಡಿಸ್ 27, ಅಬ್ರಾರ್ ಅಹ್ಮದ್ 69ಕ್ಕೆ 4, ನಸೀಮ್ ಶಾ 41ಕ್ಕೆ 3). ಪಾಕಿಸ್ಥಾನ-2 ವಿಕೆಟಿಗೆ 145 (ಅಬ್ದುಲ್ಲ ಶಫೀಕ್ ಬ್ಯಾಟಿಂಗ್ 74, ಶಾನ್ ಮಸೂದ್ 51).