ಮೊಹಾಲಿ ಏಕದಿನ: “ಧೋನಿ’ ನಿವೃತ್ತಿ!
Team Udayavani, Dec 5, 2017, 6:50 AM IST
ಮೊಹಾಲಿ: ಶ್ರೀಲಂಕಾ ವಿರುದ್ಧದ ಮೊಹಾಲಿಯಲ್ಲಿ ನಡೆಯಲಿರುವ 2ನೇ ಏಕದಿನ ಕ್ರಿಕೆಟ್ ಪಂದ್ಯದ ಬಳಿಕ “ಧೋನಿ’ ನಿವೃತ್ತಿಯಾಗಲಿದ್ದಾರೆ!
ಟೆಸ್ಟ್ನಿಂದ ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವ ಮಹೇಂದ್ರ ಸಿಂಗ್ ಧೋನಿ ಏಕದಿನದಿಂದಲೂ ನಿವೃತ್ತಿಯಾಗುವರೇ? ಅವರು ಮುಂದಿನ ವಿಶ್ವಕಪ್ ತನಕ ಆಡುವುದಿಲ್ಲವೇ? ಎಂಬೆಲ್ಲ ಪ್ರಶ್ನೆಗಳು ಕ್ರಿಕೆಟ್ ಅಭಿಮಾನಿಗಳಿಗೆ ಎದುರಾಗುವುದು ಸಹಜ. ಆದರೆ ಧೋನಿ ಅಭಿಮಾನಿಗಳು ಚಿಂತಿಸುವ ಅಗತ್ಯವಿಲ್ಲ, ನಿವೃತ್ತಿಯಾಗುತ್ತಿರುವುದು ಭಾರತ ಮಾಜಿ ನಾಯಕ ಧೋನಿ ಅಲ್ಲ, ಮೊಹಾಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ “ಧೋನಿ’ ಎಂಬ ಹೆಸರಿನ ಶ್ವಾನ!
ಹೌದು, ಈ ಶ್ವಾನಕ್ಕೆ ಧೋನಿ ಎಂದು ಹೆಸರಿಡಲಾಗಿದ್ದು, ಸುಮಾರು 10 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದೆ. ಅತ್ಯಂತ ಚುರುಕುತನ ಹೊಂದಿರುವ ಈ ಶ್ವಾನ 2011ರ ಭಾರತ-ಪಾಕಿಸ್ಥಾನ ವಿಶ್ವಕಪ್ ಸೆಮಿಫೈನಲ್ ಪಂದ್ಯದ ವೇಳೆ ಭದ್ರತಾ ಕಾರ್ಯದಲ್ಲಿ ಪೊಲೀಸರಿಗೆ ನೆರವಾಗಿತ್ತು. ಅನೇಕ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರಿಗೆ ನೆರವು ನೀಡಿದೆ.
ಡಿ. 13ರ ಮೊಹಾಲಿ ಏಕದಿನ ಪಂದ್ಯದ ವೇಳೆ ಮಹೇಂದ್ರ ಸಿಂಗ್ ಧೋನಿ ಸಮ್ಮುಖದಲ್ಲಿ “ಧೋನಿ’ ಹೆಸರಿನ ಶ್ವಾನ ತನ್ನ ಸುದೀರ್ಘ ವೃತ್ತಿ ಜೀವನಕ್ಕೆ ವಿದಾಯ ಹೇಳಲಿದೆ. “ಧೋನಿ’ ಜತೆಗೆ ಜಾನ್, ಪ್ರೀತಿ ಎಂಬ ಹೆಸರಿನ ಇನ್ನೆರಡು ಪೊಲೀಸ್ ಇಲಾಖೆಯ ಶ್ವಾನಗಳು ಕೂಡ ನಿವೃತ್ತಿಯಾಗುತ್ತಿವೆ.