ಎಲೆನಾ ರಿಬಕಿನಾ ವಿಂಬಲ್ಡನ್ ಕ್ವೀನ್: ಮೊದಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ
ಓನ್ಸ್ ಜಬಿಯುರ್ ವಿರುದ್ಧ 3-6, 6-2, 6-2 ಜಯ
Team Udayavani, Jul 9, 2022, 11:10 PM IST
ಲಂಡನ್: ಆಕ್ರಮಣಕಾರಿ ಆಟಗಾರ್ತಿ ಓನ್ಸ್ ಜಬಿಯುರ್ ಅವರ ಲೆಕ್ಕಾಚಾರವನ್ನೆಲ್ಲ ತಲೆಕೆಳಗಾಗಿಸಿದ ಕಜಾಕ್ಸ್ಥಾನದ ಎಲೆನಾ ರಿಬಕಿನಾ ವಿಂಬಲ್ಡನ್ ವನಿತಾ ಸಾಮ್ರಾಜ್ಯದ ನೂತನ ರಾಣಿಯಾಗಿದ್ದಾರೆ.
ಶನಿವಾರದ 3 ಸೆಟ್ಗಳ ಹೋರಾಟವನ್ನು ಅವರು 3-6, 6-2, 6-2 ಅಂತರದಿಂದ ಗೆದ್ದರು. ಜತೆಗೆ ಮೊದಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯ ಒಡತಿ ಎನಿಸಿಕೊಂಡು ಇತಿಹಾಸ ನಿರ್ಮಿಸಿದರು. ಇದು ಕಜಾಕ್ಸ್ಥಾನಕ್ಕೆ ಒಲಿದ ಮೊದಲ ಗ್ರ್ಯಾನ್ಸ್ಲಾಮ್ ಗೌರವ.
ಟುನಿಶಿಯಾದ ಓನ್ಸ್ ಜಬಿಯುರ್ ಮತ್ತು ಮಾಸ್ಕೋ ಮೂಲದ ಎಲೆನಾ ರಿಬಕಿನಾ, ಇಬ್ಬರ ಪಾಲಿಗೂ ಇದು ಮೊದಲ ಗ್ರ್ಯಾನ್ಸ್ಲಾಮ್ ಫೈನಲ್ ಆಗಿತ್ತು. ಜಬಿಯುರ್ ಎಂದಿನಂತೆ ಆಕ್ರಮಣಕಾರಿಯಾಗಿಯೇ ಆಟ ಆರಂಭಿಸಿದರು. ಮೊದಲ ಸೆಟ್ನಲ್ಲಿ 6-3 ಅಂತರದ ಸುಲಭ ಜಯ ಸಾಧಿಸಿದರು.
ಇಲ್ಲಿಂದ ಮುಂದೆ ರಿಬಕಿನಾ ಆಟ ಬಿರುಸುಗೊಳ್ಳುತ್ತ ಹೋಯಿತು. ಜತೆಗೆ ಜಬಿಯುರ್ ಮಂಕಾಗುತ್ತ ಹೋದರು. ದ್ವಿತೀಯ ಸೆಟ್ 6-2 ಅಂತರದಿಂದ ರಿಬಕಿನಾ ಪಾಲಾಯಿತು. ನಿರ್ಣಾಯಕ ಸೆಟ್ನಲ್ಲೂ ಜಬಿಯುರ್ ಬಿರುಸಿನ ಆಟಕ್ಕೆ ಕುದುರಿಕೊಳ್ಳಲಿಲ್ಲ. ರಿಬಕಿನಾ ಆಕ್ರಮಣಕಾರಿ ಆಟದಿಂದ ಹಿಂದೆ ಸರಿಯಲಿಲ್ಲ.