ಬದಲಾಗದ ಅಂಪಾಯರ್, ರೆಫ್ರಿ ಪ್ಯಾನಲ್
Team Udayavani, Jul 3, 2017, 3:50 AM IST
ದುಬಾೖ: 2017-18ನೇ ಸಾಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಾಗಿ ಅಂಪಾಯರ್ ಮತ್ತು ರೆಫ್ರಿಗಳ ಯಾದಿಯನ್ನು ಐಸಿಸಿ ರವಿವಾರ ಪ್ರಕಟಿಸಿದೆ. ಆದರೆ ಇದರಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಹಿಂದಿನ ಋತುವಿನ ಸದಸ್ಯರೇ ಮುಂದುವರಿದಿದ್ದಾರೆ.
ಚೇರ್ಮನ್ ಮತ್ತು ಐಸಿಸಿ ಜಿ.ಎಂ. (ಕ್ರಿಕೆಟ್) ಜೆಫ್ ಅಲ್ಲಡೈìಸ್, ಐಸಿಸಿಯ ಪ್ರಧಾನ ಮ್ಯಾಚ್ ರೆಫ್ರಿ ರಂಜನ್ ಮದುಗಲ್ಲೆ, ಇಂಗ್ಲೆಂಡಿನ ಮಾಜಿ ಆಟಗಾರ-ಹಾಲಿ ವೀಕ್ಷಕ ವಿವರಣಕಾರ ಡೇವಿಡ್ ಲಾಯ್ಡ ಮತ್ತು ಭಾರತದ ಮಾಜಿ ಕ್ರಿಕಟಿಗ-ಅಂಪಾಯರ್ ಎಸ್. ವೆಂಕಟರಾಘವನ್ ಅವರನ್ನೊಳಗೊಂಡ ಐಸಿಸಿ ಅಂಪಾಯರ್ ಆಯ್ಕೆ ಸಮಿತಿ ಈ ನಿರ್ಧಾರಕ್ಕೆ ಬಂತು.
ಇದರಂತೆ ಐಸಿಸಿ ಎಮಿರೇಟ್ಸ್ ಎಲೈಟ್ ಪ್ಯಾನಲ್ನಲ್ಲಿ ಮುಂದುವರಿಯಲಿರುವ ಅಂಪಾಯರ್ಗಳೆಂದರೆ ಪಾಕಿಸ್ಥಾನದ ಅಲೀಮ್ ದಾರ್, ಶ್ರೀಲಂಕಾದ ಕುಮಾರ ಧರ್ಮಸೇನ, ದಕ್ಷಿಣ ಆಫ್ರಿಕಾದ ಮರೈಸ್ ಎರಾಸ್ಮಸ್, ನ್ಯೂಜಿಲ್ಯಾಂಡಿನ ಕ್ರಿಸ್ ಗಫಾನಿ, ಇಂಗ್ಲೆಂಡಿನ ಇಯಾನ್ ಗೂಲ್ಡ್, ರಿಚರ್ಡ್ ಇಲ್ಲಿಂಗ್ವರ್ತ್, ರಿಚರ್ಡ್ ಕೆಟಲ್ಬರೋ, ನೈಜೆಲ್ ಲಾಂಗ್, ಆಸ್ಟ್ರೇಲಿಯದ ಬ್ರೂಸ್ ಆಕ್ಸೆನ್ಫೋರ್ಡ್, ಪಾಲ್ ರೀಫೆಲ್, ರಾಡ್ ಟ್ಯುಕರ್ ಮತ್ತು ಭಾರತದ ಸುಂದರಂ ರವಿ.
ಐಸಿಸಿ ಎಮಿರೇಟ್ಸ್ ಎಲೈಟ್ ಪ್ಯಾನಲ್ನಲ್ಲಿ ಮುಂದುವರಿದ 7 ಮಂದಿ ಮ್ಯಾಚ್ ರೆಫ್ರಿಗಳೆಂದರೆ ಆಸ್ಟ್ರೇಲಿಯದ ಡೇವಿಡ್ ಬೂನ್, ಇಂಗ್ಲೆಂಡಿನ ಕ್ರಿಸ್ ಬ್ರಾಡ್, ನ್ಯೂಜಿಲ್ಯಾಂಡಿನ ಜೆಫ್ ಕ್ರೋವ್, ಶ್ರೀಲಂಕಾದ ರಂಜನ್ ಮದುಗಲ್ಲೆ, ಜಿಂಬಾಬ್ವೆಯ ಆ್ಯಂಡಿ ಪೈಕ್ರಾಫ್ಟ್, ವೆಸ್ಟ್ ಇಂಡೀಸಿನ ರಿಚಿ ರಿಚರ್ಡ್ಸನ್ ಮತ್ತು ಭಾರತ ಜಾವಗಲ್ ಶ್ರೀನಾಥ್.