ಚೆಸ್: ವಿಶ್ವ ಚಾಂಪಿಯನ್ಗೆ ಆಘಾತವಿಕ್ಕಿದ ಗುಜರಾತಿ
Team Udayavani, Feb 23, 2023, 5:30 AM IST
ಚೆನ್ನೈ: ಭಾರತದ ಗ್ರ್ಯಾನ್ಮಾಸ್ಟರ್ ವಿದಿತ್ ಗುಜರಾತಿ ಅಮೋಘ ಸಾಧನೆಗೈದಿದ್ದಾರೆ. ಪ್ರೊ ಚೆಸ್ ಲೀಗ್ನಲ್ಲಿ ಹಾಲಿ ವಿಶ್ವ ಚಾಂಪಿಯನ್, ವಿಶ್ವದ ನಂ. 1 ಆಟಗಾರ, ನಾರ್ವೆಯ ಮ್ಯಾಗ್ನಸ್ ಕಾರ್ಲ್ಸೆನ್ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ.
“ಇಂಡಿಯನ್ ಯೋಗಿಸ್’ ತಂಡವನ್ನು ಪ್ರತಿನಿಧಿಸುತ್ತಿರುವ ವಿದಿತ್ ಗುಜರಾತಿ, ಎದುರಾಳಿ ಕಾರ್ಲ್ಸೆನ್ ಮಾಡಿದ ತಪ್ಪೊಂದರ ಭರಪೂರ ಲಾಭವೆತ್ತಿ ಗೆಲುವಿನ ಸಂಭ್ರಮ ಆಚರಿಸಿದರು. ಗುಜರಾತಿ ಕಪ್ಪು ಕಾಯಿಗಳೊಂದಿಗೆ ಆಡಲಿಳಿದಿದ್ದರು. ಕಾರ್ಲ್ಸೆನ್ “ಕೆನಡಾ ಚೆಸ್ಬ್ರಾಸ್’ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 150,000 ಡಾಲರ್ ಮೊತ್ತದ ಬಹುಮಾನವುಳ್ಳ ಈ ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಸ್ಪರ್ಧಿಸುತ್ತಿವೆ.
ಇದು ಮ್ಯಾಗ್ನಸ್ ಕಾರ್ಲ್ಸೆನ್ ವಿರುದ್ಧ ವಿದಿತ್ ಗುಜರಾತಿ ದಾಖಲಿಸಿದ ಮೊದಲ ಗೆಲುವು. ಹಾಗೆಯೇ ಕಾರ್ಲ್ಸೆನ್ ಅವರನ್ನು ಮಣಿಸಿದ ಭಾರತದ 4ನೇ ಚೆಸ್ಪಟು. ಉಳಿದ ಮೂವರೆಂದರೆ ಆರ್. ಪ್ರಗ್ನಾನಂದ, ಡಿ. ಗುಕೇಶ್ ಮತ್ತು ಅರ್ಜುನ್ ಎರಿಗೇಸಿ. ಇವರು 2022ರ ವಿವಿಧ ಕೂಟಗಳಲ್ಲಿ ನಾರ್ವೆಯನ್ ಆಟಗಾರನನ್ನು ಪರಾಭವಗೊಳಿಸಿದ್ದರು.