ಇವರು ರಷ್ಯಾ ಅಧ್ಯಕ್ಷ ಪುಟಿನ್ ತಾನೇ?
Team Udayavani, Feb 27, 2018, 6:35 AM IST
ಲಂಡನ್: ಇಂಗ್ಲೆಂಡ್ ತಂಡದ ಖ್ಯಾತ ಬ್ಯಾಟ್ಸ್ಮನ್, ವಿಕೆಟ್ ಕೀಪರ್ ಜೋಸ್ ಬಟ್ಲರ್ ಟ್ವೀಟರ್ನಲ್ಲಿ ಭಾರೀ ಹವಾ ಸೃಷ್ಟಿಸಿದ್ದಾರೆ.
ಸಾಮಾನ್ಯವಾಗಿ ರೋಚಕ ಕ್ರಿಕೆಟ್ ಪಂದ್ಯಗಳನ್ನು ಎರಡು ಬಣಗಳಾಗಿ ಚದುರಿ ಹೋಗಿ ಚರ್ಚೆ ಮಾಡುವ ಅಭಿಮಾನಿಗಳು ಒಂದು ಬರೀ ಟ್ವೀಟ್ಗೆ ತಲ್ಲಣಿಸಿ ಹಲವು ಬಣಗಳಾಗಿ ಚರ್ಚೆಗಿಳಿದಿದ್ದಾರೆ. ಅವರ ಟ್ವೀಟ್ನಲ್ಲಿ ಅಂತಹದ್ದೇನಿತ್ತು ಎಂಬ ಕುತೂಹಲವೇ? ಟ್ವೀಟ್ ನೋಡಿದರೆ ನೀವು ಹಾಗೆಯೇ ಗೊಂದಲಕ್ಕೊಳಗಾಗುವುದು ಸಹಜ.
ಒಂದು ಚಿತ್ರವನ್ನು ಪ್ರಕಟಿಸಿದ ಅವರು, ಇಂಗ್ಲೆಂಡ್ ಕ್ರಿಕೆಟ್ ತಂಡದ ಈ ಮಾಜಿ ನಾಯಕನನ್ನು ನೀವು ಗುರ್ತಿಸಬಲ್ಲಿರಾ? ಎಂದು ಪ್ರಶ್ನಿಸಿದರು. ಒಬ್ಬ ವ್ಯಕ್ತಿ ಸೊಂಟಕ್ಕೆ ಬಿಳಿ ಟವೆಲ್ ಸುತ್ತಿಕೊಂಡು ಬೀದಿಯಲ್ಲಿ ನಡೆದುಹೋಗುತ್ತಿರುವ ಚಿತ್ರ. ಈ ಚಿತ್ರ ನೋಡಲು ಶೇ.99ರಷ್ಟು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರನ್ನು ಹೋಲುತ್ತಿದ್ದರಿಂದ ಹಲವು ಅಭಿಮಾನಿಗಳು ಇದು ಪುಟಿನ್ ಅಲ್ಲವೇ ಎಂದರು. ಈ ಚರ್ಚೆ ಮುಂದುವರಿಯುತ್ತಲೇ ಸಾಗಿತು.
ಅದು ಪುಟಿನ್ ಹೌದೇ ಅಲ್ಲವೇ? ಅಥವಾ ಮತ್ತಿನ್ಯಾರು ಎಂದು ಜೋರಾಗುತ್ತಿದ್ದಾಗ ಅದು ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಎಂಬ ರಹಸ್ಯ ಬಯಲಾಯಿತು. ವಿಷಯ ಖಚಿತವಾದಾಗ ಅಭಿಮಾನಿಗಳು ದಂಗಾದರು. ಪುಟಿನ್ರನ್ನು ಅಷ್ಟು ಹೋಲುತ್ತಿರುವ ಈ ಖ್ಯಾತ ಕ್ರಿಕೆಟಿಗ ಹೀಗೇಕೆ ಟವೆಲ್ ಕಟ್ಟಿಕೊಂಡು ಬೀದಿಯಲ್ಲಿ ನಡೆಯುತ್ತಿದ್ದಾರೆ? ನಿಜಕ್ಕೂ ಯಾವ ಕಾಲದ ಚಿತ್ರ? ಎಂಬೆಲ್ಲ ಚರ್ಚೆಗಳು ಶುರುವಾದವು. ಕೆಲವರು ಈ ಚಿತ್ರ ಪುಟಿನ್ ಅವರದ್ದೇ ಎಂದು ವಾದಿಸಿದರು. ಅದು ಹೇಗೋ ನಾಸಿರ್ ಹುಸೇನ್ ಎಂದು ಖಚಿತವಾಗುವುದರೊಂದಿಗೆ ಚರ್ಚೆ ಅಂತ್ಯವಾಯಿತು.