ಐಟಿಎಫ್ ಸಿಂಗಾಪುರ್ ಟೆನಿಸ್: ಅಂಕಿತಾ ರೈನಾಗೆ ಪ್ರಶಸ್ತಿ
Team Udayavani, Jan 21, 2019, 12:30 AM IST
ಹೊಸದಿಲ್ಲಿ: ಭಾರತದ ಟೆನಿಸ್ ಆಟಗಾರ್ತಿ ಅಂಕಿತಾ ರೈನಾ ಸಿಂಗಾಪುರದಲ್ಲಿ ನಡೆದ “ಐಟಿಎಫ್ ಸಿಂಗಾಪುರ್’ ಟೆನಿಸ್ ಕೂಟದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಅಂಕಿತಾ ಅಗ್ರ ಶ್ರೇಯಾಂಕದ ನೆದರ್ಲ್ಯಾಂಡ್ ಆಟಗಾರ್ತಿ ಅರಾಂತ್ಸಾ ರುಸ್ ವಿರುದ್ಧ 6-3, 6-2 ಸೆಟ್ಗಳಿಂದ ಗೆಲುವು ದಾಖಲಿಸಿದರು. ಈ ಟೂರ್ನಿಯ ಫೈನಲ್ ಪ್ರವೇಶದ ಹಾದಿಯಲ್ಲಿ ಅಂಕಿತಾ ಅಗ್ರ ಶ್ರೇಯಾಂಕದ 4 ಆಟಗಾರ್ತಿಯರನ್ನು ಸೋಲಿಸಿದ್ದರು.
ಈ ಜಯದಿಂದ 50 ಅಂಕ ಸಂಪಾದಿಸಿದ ಅಂಕಿತಾ ನೂತನ ರ್ಯಾಂಕಿಂಗ್ ಯಾದಿಯಲ್ಲಿ ವೃತ್ತಿ ಜೀವನದಲ್ಲೇ ಅತ್ಯುತ್ತಮವೆನಿಸಿದ 168ನೇ ಸ್ಥಾನಕ್ಕೆ ಏರಲಿದ್ದಾರೆ.
ಸರ್ವ್ನಲ್ಲಿ ಯಶಸ್ಸು
“ಹಲವು ಸಮಯದಿಂದ ಸರ್ವ್ಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಇಂದು ಫಲ ಸಿಕ್ಕಿದೆ. ಸ್ಟ್ರೋಕ್ನಲ್ಲಿ ಹೆಚ್ಚಿನ ಶಕ್ತಿ ಅಗತ್ಯವಿದೆ ಎಂದು ನನಗನಿಸಿತು. ವರ್ಷದ ಮೊದಲ ಟೂರ್ನಿಯಾದ ಆಸ್ಟ್ರೇಲಿಯನ್ ಓಪನ್ನಿಂದ ಸಾಕಷ್ಟು ಉಪಯೋಗಗಳಾಗಿವೆ. ಇದಕ್ಕೆ ಅರ್ಹತೆ ಪಡೆಯದಿದ್ದುದು ಬೇಸರ ತಂದಿದ್ದರೂ, ಈ ಖುಷಿ ಆ ನೋವನ್ನು ಸ್ವಲ್ಪ ಮರೆಸಿದೆ’ ಎಂದು ಅಂಕಿತಾ ರೈನಾ ಹೇಳಿದರು.
ಫೆಡ್ ಕಪ್ನಲ್ಲಿ ಪಾಲ್ಗೊಳ್ಳುವ ಮುನ್ನ ಅಂಕಿತಾ 2 ಟೂರ್ನಿಗಳಲ್ಲಿ ಭಾಗವಹಿಸಲಿದ್ದಾರೆ. ಮೊದಲ ಕೂಟ ಫೆಬ್ರವರಿ ಮೊದಲ ವಾರ ಕಜಕಿಸ್ಥಾನದಲ್ಲಿ ನಡೆಯಲಿದೆ.