ಬ್ಯಾಟಿಂಗ್ ಸಾಹಸ: ಸ್ವತಃ ಕಮಿನ್ಸ್ಗೆ ಅಚ್ಚರಿ
Team Udayavani, Apr 8, 2022, 7:00 AM IST
ಪುಣೆ: ಮೂಲತಃ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯದ ಟೆಸ್ಟ್ ನಾಯಕ, ಘಾತಕ ವೇಗಿ. ಆದರೆ ಬುಧವಾರ ರಾತ್ರಿ ಸುದ್ದಿಯಾದದ್ದು ಸ್ಫೋಟಕ ಬ್ಯಾಟಿಂಗ್ ಮೂಲಕ, ಅದೂ ಟಿ20 ಲೀಗ್ ಆಗಿರುವ ಐಪಿಎಲ್ನಲ್ಲಿ!
ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಕೇವಲ 14 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಇನ್ನೂ 24 ಎಸೆತ ಉಳಿದಿರುವಂತೆಯೇ ತಂಡದ ಜಯಭೇರಿ ಮೊಳಗಿಸಿದರು. ಇದು ಐಪಿಎಲ್ ಇತಿಹಾಸದ ಅತೀ ವೇಗದ ಅರ್ಧ ಶತಕದ ಜಂಟಿ ದಾಖಲೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ 2018ರ ಮೊಹಾಲಿ ಮುಖಾಮುಖಿಯಲ್ಲಿ ಕೆ.ಎಲ್. ರಾಹುಲ್ ಕೂಡ 14 ಎಸೆತಗಳಿಂದ ಅರ್ಧ ಶತಕ ಪೂರ್ತಿಗೊಳಿಸಿದ್ದರು.
14ನೇ ಓವರ್ನಲ್ಲಿ ಕ್ರೀಸ್ ಇಳಿದ ಪ್ಯಾಟ್ ಕಮಿನ್ಸ್ ಕೇವಲ 15 ಎಸೆತಗಳಿಂದ 56 ರನ್ ಬಾರಿಸಿ ಅಜೇಯರಾಗಿ ಉಳಿದರು. ಸಿಡಿಸಿದ್ದು 6 ಸಿಕ್ಸರ್, 4 ಫೋರ್. ಈ ಅವಧಿಯಲ್ಲಿ ಡೇನಿಯಲ್ ಸ್ಯಾಮ್ಸ್ ಅವರ ಒಂದೇ ಓವರ್ನಲ್ಲಿ 35 ರನ್ ಸೋರಿ ಹೋಯಿತು! ಕಾಕತಾಳೀಯವೆಂಬಂತೆ, ಸ್ಯಾಮ್ಸ್ ಕೂಡ ಆಸ್ಟ್ರೇಲಿಯದ ಬೌಲರ್! ಕಮಿನ್ಸ್ ಅವರೊಂದಿಗೆ ಆರಂಭಕಾರ ವೆಂಕಟೇಶ್ ಅಯ್ಯರ್ 50 ರನ್ ಬಾರಿಸಿ ಅಜೇಯರಾಗಿ ಉಳಿದರು (41 ಎಸೆತ, 6 ಬೌಂಡರಿ, 1 ಸಿಕ್ಸರ್). ಇವರಿಬ್ಬರು ಸೇರಿಕೊಂಡು ಕೇವಲ 2.5 ಓವರ್ಗಳಿಂದ 61 ರನ್ ರಾಶಿ ಹಾಕಿದರು!
ಇದು ಉಳಿದವರಿಗಿರಲಿ, ಸ್ವತಃ ಪ್ಯಾಟ್ ಕಮಿನ್ಸ್ ಅವರಿಗೇ ನಂಬಲಾಗದ ಸಂಗತಿಯಾಗಿತ್ತು. “ನಾನು ಇಷ್ಟೊಂದು ಬಿರುಸಿನ ಬ್ಯಾಟಿಂಗ್ ಮಾಡಿದ್ದನ್ನು ಕಂಡು ಸ್ವತಃ ನನಗೇ ಅಚ್ಚರಿಯಾಗಿದೆ. ಅಷ್ಟೇ ಖುಷಿಯೂ ಆಗಿದೆ. ಪ್ರಸಕ್ತ ಋತುವಿನ ನನ್ನ ಮೊದಲ ಪಂದ್ಯದಲ್ಲೇ ಇಂಥದೊಂದು ಪ್ರದರ್ಶನ ನೀಡಿದ್ದಕ್ಕೆ ತೃಪ್ತಿಯಾಗಿದೆ. ಚೆಂಡು ಸ್ವಿಂಗ್ ಆಗುತ್ತಿದ್ದರೂ ನಾನದನ್ನು ಲೆಕ್ಕಿಸಲಿಲ್ಲ’ ಎಂದು ಕಮಿನ್ಸ್ ಪ್ರತಿಕ್ರಿಯಿಸಿದ್ದಾರೆ.