ನರ್ವಾಲ್ ಆಟಕ್ಕೆ ಟೈಟಾನ್ಸ್ ಪಲ್ಟಿ
Team Udayavani, Jul 30, 2017, 7:20 AM IST
ಹೈದರಾಬಾದ್: ನಾಯಕ ಪ್ರದೀಪ್ ನರ್ವಾಲ್(15 ಅಂಕ) ಭರ್ಜರಿ ರೈಡಿಂಗ್ನಿಂದ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡ ಪ್ರೊಕಬಡ್ಡಿ 5ನೇ ಆವೃತ್ತಿಯಲ್ಲಿ ತೆಲುಗು ಟೈಟಾನ್ಸ್ ವಿರುದ್ಧ 35-29 ಅಂತರದ ಜಯ ಸಾಧಿಸಿದೆ.
ಇದು ಪಾಟ್ನಾಗೆ ಶುಭಾರಂಭವಾಗಿದ್ದರೆ, ಟೈಟಾನ್ಸ್ಗೆ ಮೊದಲ ಸೋಲಾಗಿದೆ.ಶನಿವಾರ ನಡೆದ 2ನೇ ಪಂದ್ಯದ ಆರಂಭದಲ್ಲಿ ಎರಡೂ ತಂಡಗಳು ನಡುವೆ ಭಾರೀ ಸ್ಪರ್ಧೆ ಇತ್ತು. ಇದರಿಂದ ಅಂಕಗಳಿಕೆಯಲ್ಲಿ ಒಮ್ಮೆ ಪಾಟ್ನಾ ಮುನ್ನಡೆ ಪಡೆದರೆ, ಮತ್ತೂಮ್ಮೆ ಟೈಟಾನ್ಸ್ ಮುನ್ನಡೆ ಪಡೆಯುತ್ತಿತ್ತು. ಹೀಗಾಗಿ ಮೊದಲ ಅವಧಿ ಅಂತ್ಯದಲ್ಲಿ ಪಾಟ್ನಾ 15-14 ರಿಂದ ಅಲ್ಪ ಮುನ್ನಡೆಯಲ್ಲಿತ್ತು. ಆದರೆ ನಂತರ ನರ್ವಾಲ್ ಎದುರಾಳಿ ಕೋಟೆಯ ಮೇಲೆ ದಾಳಿ ಮಾಡಿ ಹೆಚ್ಚಿನ ಅಂಕ ತಂದರು. ಆದರೆ ಟೈಟಾನ್ಸ್ ನಾಯಕ ರಾಹುಲ್ ಚೌಧರಿ 2ನೇ ಅವಧಿಯಲ್ಲಿ ವೈಫಲ್ಯ ಎದುರಿಸಿದರು. ಹೀಗಾಗಿ ಟೈಟಾನ್ಸ್ ಹಿನ್ನಡೆ ಅನುಭವಿಸಲು ಕಾರಣವಾಯಿತು.