ಪ್ರತ್ಯೇಕ ಅಕಾಡೆಮಿಯಲ್ಲಿ ಸೈನಾ, ಪಿ.ವಿ. ಸಿಂಧು ಅವರಿಗೆ ತರಬೇತಿ
Team Udayavani, Jun 6, 2018, 6:00 AM IST
ಹೊಸದಿಲ್ಲಿ: ಗೋಲ್ಡ್ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರನ್ನು ಸೋಲಿಸಿದ ಸೈನಾ ನೆಹ್ವಾಲ್ ಚಿನ್ನ ಗೆದ್ದಿದ್ದರು. ಈ ಬೆನ್ನಲ್ಲೇ ಇಬ್ಬರನ್ನೂ ಗೋಪಿಚಂದ್ ಅಕಾಡೆಮಿಯಿಂದ ಪ್ರತ್ಯೇಕಗೊಳಿಸಿರುವುದು ಸುದ್ದಿಯಾಗಿದೆ. ಸದ್ಯ ಕೋಚ್ ಗೋಪಿಚಂದ್ ಪ್ರತ್ಯೇಕ ಅಕಾಡೆಮಿಯಲ್ಲಿ ಇಬ್ಬರಿಗೂ ಕೋಚಿಂಗ್ ನೀಡುತ್ತಿದ್ದಾರೆ ಎನ್ನಲಾಗಿದೆ.
ಪ್ರತ್ಯೇಕಗೊಳಿಸಿದ್ದೇಕೆ?: ಯಶಸ್ವಿ ವೃತ್ತಿ ಬದುಕಿನ ತುತ್ತ ತುದಿಯಲ್ಲಿದ್ದಾಗ ಗೋಪಿಚಂದ್ ಅಕಾಡೆಮಿಯಲಿದ್ದ ಸೈನಾ ಕಿರಿಕ್ ಮಾಡಿಕೊಂಡು ಅಕಾಡೆಮಿ ತೊರೆದಿದ್ದರು. ಬಳಿಕ ಮಾಜಿ ಬ್ಯಾಡ್ಮಿಂಟನ್ ಆಟಗಾರ ವಿಮಲ್ ಕುಮಾರ್ ಅವರೊಂದಿಗೆ ಸೈನಾ ತರಬೇತಿ ಪಡೆದುಕೊಂಡರು. ಆದರೆ ಫಲಿತಾಂಶ ಮಾತ್ರ ಕಾಣಲಿಲ್ಲ. ಅತ್ತ ಗೋಪಿಚಂದ್ ಅಕಾಡೆಮಿಯಲ್ಲಿದ್ದ ಸಿಂಧು ಭರ್ಜರಿ ಪ್ರದರ್ಶನ ನೀಡುವ ಮೂಲಕ ಸೈನಾರನ್ನೇ ಮೀರಿ ನಿಂತರು. ಇದಾದ ಕೆಲವು ವರ್ಷದ ಬಳಿಕ ಸೈನಾ ಮರಳಿ ಗೋಪಿಚಂದ್ ಅಕಾಡೆಮಿಗೆ ಬಂದಿದ್ದಾರೆ. ಇದೀಗ ಸೈನಾ ಮತ್ತೆ ಹಳೆಯ ಫಾರ್ಮ್ಗೆ ಮರಳಿದ್ದಾರೆ. ಸಿಂಧು, ಸೈನಾ ಜತೆಯಾಗಿಯೇ ತರಬೇತಿ ಪಡೆಯುತ್ತಿದ್ದು ಸಿಂಧು ದೌರ್ಬಲ್ಯವನ್ನು ಸೈನಾ ಕಲಿತು ಈಗ ಸಿಂಧು ಸೋಲಿಸುವ ಮಟ್ಟಿಗೆ ಬೆಳೆದಿದ್ದಾರೆ. ಇದೇ ಕಾರಣದಿಂದ ಇಬ್ಬರನ್ನು ಪ್ರತ್ಯೇಕಗೊಳಿಸಲಾಗಿದೆ.
ಅಕಾಡೆಮಿ ಬದಲಾಯಿಸಿದ ಸಿಂಧು
ಸಿಂಧು ಮೇಲಿನ ಎಲ್ಲ ಕಾರಣದಿಂದ ಅಕಾಡೆಮಿ ಬದಲಾಯಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸಿಂಧು ತಂದೆ ರಮಣ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಹೊಸ ಅಕಾಡೆಮಿಯಲ್ಲಿ ಸಿಂಧುಗೆ ಹಿತವೆನ್ನಿಸಲಿಲ್ಲ. ಈಗ ಸ್ಪರ್ಧೆ ಹೆಚ್ಚಿದೆ. ಸೈನಾ ಜತೆಗೆ ಸಿಂಧು ಒಂದೇ ಅಕಾಡೆಮಿಯಲ್ಲಿದ್ದರೆ ಸಿಂಧುವಿನ ಬಲ-ದೌರ್ಬಲ್ಯ ಗೊತ್ತಾಗುತ್ತದೆ. ಆಕೆಯದ್ದೇ ಆದ ತಂತ್ರಗಾರಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಳೆಯ ಅಕಾಡೆಮಿ ತೊರೆದಿದ್ದಾಳೆ ಎಂದು ತಿಳಿಸಿದ್ದಾರೆ.