ಸೈನಾಗೆ ಇಂಡೋನೇಶ್ಯ ಪ್ರಶಸ್ತಿ
Team Udayavani, Jan 28, 2019, 12:30 AM IST
ಜಕಾರ್ತಾ: ಲೀಗ್ ಹಂತದಲ್ಲಿ ಅಮೋಘ ಆಟವಾಡಿ ಫೈನಲ್ ತಲುಪಿದ ಭಾರತದ ಖ್ಯಾತ ಶಟ್ಲರ್ ಸೈನಾ ನೆಹ್ವಾಲ್ “ಇಂಡೊನೇಶ್ಯ ಮಾಸ್ಟರ್’ ಬ್ಯಾಡ್ಮಿಂಟನ್ ಪ್ರಶಸ್ತಿ ಜಯಿಸಿದ್ದಾರೆ. ರವಿವಾರದ ಫೈನಲ್ನಲ್ಲಿ 3 ಬಾರಿಯ ವಿಶ್ವ ಚಾಂಪಿಯನ್ ಸ್ಪೇನಿನ ಕ್ಯಾರೋಲಿನಾ ಮರಿನ್ ಗಾಯಗೊಂಡು ಪಂದ್ಯದಿಂದ ನಿವೃತ್ತಿಯಾದ ಕಾರಣ ಸೈನಾ ಅವರನ್ನು ಚಾಂಪಿಯನ್ ಎಂದು ಘೋಷಿಸಲಾಯಿತು.
ಈ ಹಂತದಲ್ಲಿ ಮೊದಲನೇ ಗೇಮ್ ನಡೆಯುತ್ತಿತ್ತು. ಸೈನಾ 4-10 ಅಂಕಗಳಿಂದ ಹಿಂದುಳಿದಿದ್ದರು. ನೋವು ತೀವ್ರಗೊಂಡಿದ್ದರಿಂದ ಮರಿನ್ ಹಿಂದೆ ಸರಿಯುವ ನಿರ್ಧಾರ ಮಾಡಿದರು. ಇತ್ತೀಚೆಗಷ್ಟೇ ದೀರ್ಘಾವಧಿಯ ಗಾಯದಿಂದ ಸುಧಾರಿಸಿಕೊಂಡು ಬ್ಯಾಡ್ಮಿಂಟನ್ಗೆ ಮರಳಿರುವ ಸೈನಾ ನೆಹ್ವಾಲ್, ಎದುರಾಳಿ ಮರಿನ್ ಸ್ಥಿತಿಗೆ ಬೇಸರ ವ್ಯಕ್ತಪಡಿಸಿದರು.
ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಡೆನ್ಮಾರ್ಕ್ನ ಆ್ಯಂಡ್ರೆಸ್ ಆ್ಯಂಟೆನ್ಸನ್ ಪಾಲಾಯಿತು. ಅವರು ಜಪಾನಿನ ಕೆಂಟೊ ಮೊಮೊಟ ವಿರುದ್ಧ 21-16, 14-21, 21-16 ಅಂತರದಿಂದ ಗೆದ್ದರು.