ಟೀಮ್‌ ಇಂಡಿಯಾ; 203 ರನ್‌ ವಿಜಯ

Team Udayavani, Aug 23, 2018, 6:00 AM IST

ನಾಟಿಂಗ್‌ಹ್ಯಾಮ್‌: ನಿರೀಕ್ಷೆಯಂತೆ ಭಾರತ ತಂಡ ನಾಟಿಂಗ್‌ಹ್ಯಾಮ್‌ ಟೆಸ್ಟ್‌ ಪಂದ್ಯವನ್ನು ದೊಡ್ಡ ಅಂತರದಿಂದ ಗೆದ್ದಿದೆ. ಸತತ 2 ಸೋಲುಗಳಿಂದ ಕಂಗೆಟ್ಟ ಟೀಮ್‌ ಇಂಡಿಯಾ 203 ರನ್ನುಗಳ ಪ್ರಚಂಡ ಗೆಲುವು ಸಾಧಿಸಿ ಉಳಿದೆರಡು ಪಂದ್ಯಗಳ ಕುತೂಹಲವನ್ನು ಹೆಚ್ಚಿಸುವಂತೆ ಮಾಡಿದೆ.  ಗೆಲುವಿಗಾಗಿ 521 ರನ್ನುಗಳ ಕಠಿನ ಗುರಿ ಪಡೆದಿದ್ದ ಇಂಗ್ಲೆಂಡ್‌, 4ನೇ ದಿನದ ಅಂತ್ಯಕ್ಕೆ 9 ವಿಕೆಟಿಗೆ 311 ರನ್‌ ಗಳಿಸಿ ಸೋಲಿನ ಗಡಿಯಲ್ಲಿ ನಿಂತಿತ್ತು. ಭಾರತದ ಗೆಲುವಿನ ಅಂತರವಷ್ಟೇ ಬಾಕಿ ಇತ್ತು. ಅಂತಿಮ ದಿನವಾದ ಬುಧವಾರ ಕೇವಲ 2.5 ಓವರ್‌ಗಳಲ್ಲಿ ಆತಿಥೇಯರ ಅಂತಿಮ ವಿಕೆಟ್‌ ಉರುಳಿತು. 317ಕ್ಕೆ ಆಲೌಟ್‌ ಆದ ಇಂಗ್ಲೆಂಡ್‌ 203 ರನ್‌ ಅಂತರದ ಭಾರೀ ಸೋಲಿಗೆ ತುತ್ತಾಯಿತು. 11 ರನ್‌ ಮಾಡಿದ ಜೇಮ್ಸ್‌ ಆ್ಯಂಡರ್ಸನ್‌ ಅವರನ್ನು ಅಜಿಂಕ್ಯ ರಹಾನೆಗೆ ಕ್ಯಾಚ್‌ ಕೊಡಿಸುವ ಮೂಲಕ ರವಿಚಂದ್ರನ್‌ ಅಶ್ವಿ‌ನ್‌ ಭಾರತದ ಗೆಲುವನ್ನು ಸಾರಿದರು. ಇದು ಈ ಪಂದ್ಯದಲ್ಲಿ ಭಾರತದ ಸ್ಪಿನ್ನರ್‌ಗೆ ಒಲಿದ ಏಕೈಕ ವಿಕೆಟ್‌ ಆಗಿದೆ. 

ಮೊದಲ ಇನ್ನಿಂಗ್ಸ್‌ನಲ್ಲಿ ಹಾರ್ದಿಕ್‌ ಪಾಂಡ್ಯ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ 5 ವಿಕೆಟ್‌ ಕಿತ್ತು ಇಂಗ್ಲೆಂಡ್‌ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದರು. ಕ್ರಮವಾಗಿ 97 ಹಾಗೂ 103 ರನ್‌ ಬಾರಿಸಿ ಬ್ಯಾಟಿಂಗ್‌ ಪರಾಕ್ರಮ ಮೆರೆದ ನಾಯಕ ವಿರಾಟ್‌ ಕೊಹ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಇದು ನಾಯಕನಾಗಿ ವಿದೇಶದಲ್ಲಿ ಕೊಹ್ಲಿಗೆ ಒಲಿದ ಮೊದಲ ಪಂದ್ಯಶ್ರೇಷ್ಠ ಗೌರವ. ಈ ಸಂದರ್ಭದಲ್ಲಿ ಅವರು ಭಾರತದ 2ನೇ ಅತ್ಯಂತ ಯಶಸ್ವೀ ಟೆಸ್ಟ್‌ ನಾಯಕನಾಗಿ ಮೂಡಿಬಂದರು. ಈ ಸರಣಿಯಲ್ಲಿ ಕೊಹ್ಲಿ ಅವರ ರನ್‌ ಗಳಿಕೆ 440ಕ್ಕೆ ಏರಿದೆ. ಅವರು ಮೊದಲ ಹಾಗೂ ಮೂರನೇ ಟೆಸ್ಟ್‌ನಲ್ಲಿ ಸರಿಯಾಗಿ 200 ರನ್‌ ಬಾರಿಸಿದ್ದೊಂದು ವಿಶೇಷ. 

ಇದು ಶ್ರೇಷ್ಠ ಗೆಲುವು: ಕೊಹ್ಲಿ
“ನಾನು 4 ವರ್ಷಗಳಿಂದ ನಾಯಕತ್ವವನ್ನು ನಿಭಾಯಿಸುತ್ತಿದ್ದೇನೆ. ವಿದೇಶಗಳಲ್ಲೂ ನಮ್ಮ ತಂಡ ಆಗಾಗ ಗೆಲುವು ಸಾಧಿಸುತ್ತಲೇ ಬಂದಿದೆ. ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಜೊಹಾನ್ಸ್‌ಬರ್ಗ್‌ ಟೆಸ್ಟ್‌ನಲ್ಲೂ ಜಯ ಕಂಡಿದ್ದೆವು. ಆದರೆ ಈ ಎಲ್ಲ ಗೆಲುವುಗಳಲ್ಲಿ ಇಂದಿನ ಗೆಲುವೇ ಶ್ರೇಷ್ಠವಾದುದು ಎಂಬುದು ನನ್ನ ಅಭಿಪ್ರಾಯ. ಏಕೆಂದರೆ ನಾವಿಲ್ಲಿ ಎಲ್ಲ 3 ವಿಭಾಗಗಳಲ್ಲೂ ಮೇಲುಗೈ ಸಾಧಿಸಿದ್ದೇವೆ’  ಎಂಬುದಾಗಿ ವಿರಾಟ್‌ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

ಆರಂಭಿಕರಾದ ಶಿಖರ್‌ ಧವನ್‌-ಕೆ.ಎಲ್‌. ರಾಹುಲ್‌ ಎರಡೂ ಇನ್ನಿಂಗ್ಸ್‌ಗಳಲ್ಲಿ 60 ರನ್‌ ಪೇರಿಸಿ ಉತ್ತಮ ಅಡಿಪಾಯ ನಿರ್ಮಿಸಿದರು. ಹಿಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದ ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ ಇಲ್ಲಿ ಅರ್ಧ ಶತಕ ಬಾರಿಸಿ ಮೆರೆದರು. ಹಾರ್ದಿಕ್‌ ಪಾಂಡ್ಯ ಅರ್ಧ ಶತಕ ಹಾಗೂ 5 ವಿಕೆಟ್‌ ಸಾಧನೆಯಿಂದ ಆಲ್‌ರೌಂಡ್‌  ಪ್ರದರ್ಶನವೊಂದನ್ನಿತ್ತರು. 7 ಕ್ಯಾಚ್‌ ಪಡೆಯುವ ಮೂಲಕ ಕೆ.ಎಲ್‌. ರಾಹುಲ್‌ ಭಾರತದ ಸ್ಲಿಪ್‌ ಫೀಲ್ಡಿಂಗಿಗೆ ಹೊಸ ಶಕ್ತಿ ತುಂಬಿದರು. 

ಮೊದಲ ಇನ್ನಿಂಗ್ಸ್‌ನಲ್ಲೇ ಕೀಪರ್‌ ರಿಷಬ್‌ ಪಂತ್‌ 5 ಕ್ಯಾಚ್‌ ಪಡೆದು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಹೀಗೆ, ಭಾರತದ ಗೆಲುವಿನಲ್ಲಿ ಎಲ್ಲರ ಕೊಡುಗೆಯೂ ಮಹತ್ವದ ಪಾತ್ರ ವಹಿಸಿತು. ಇದೇ ಪ್ರದರ್ಶನವನ್ನು ಕಾಯ್ದುಕೊಂಡರೆ ಭಾರತ ಸರಣಿಯನ್ನು ಕನಿಷ್ಠ ಸಮಬಲಕ್ಕೆ ತರಬಹುದು ಎಂಬುದು ಕ್ರಿಕೆಟ್‌ ಪಂಡಿತರ ಅಭಿಪ್ರಾಯ.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌    329
ಇಂಗ್ಲೆಂಡ್‌ ಪ್ರಥಮ ಇನ್ನಿಂಗ್ಸ್‌    161
ಭಾರತ ದ್ವಿತೀಯ ಇನ್ನಿಂಗ್ಸ್‌    7 ವಿಕೆಟಿಗೆ ಡಿಕ್ಲೇರ್‌ 352
ಇಂಗ್ಲೆಂಡ್‌ ದ್ವಿತೀಯ ಇನ್ನಿಂಗ್ಸ್‌ 
(ಗೆಲುವಿಗೆ 521 ರನ್‌)

ಅಲಸ್ಟೇರ್‌ ಕುಕ್‌    ಸಿ ರಾಹುಲ್‌ ಬಿ ಇಶಾಂತ್‌    17
ಕೀಟನ್‌ ಜೆನ್ನಿಂಗ್ಸ್‌    ಸಿ ಪಂತ್‌ ಬಿ ಇಶಾಂತ್‌    13
ಜೋ ರೂಟ್‌    ಸಿ ರಾಹುಲ್‌ ಬಿ ಬುಮ್ರಾ    13
ಓಲೀ ಪೋಪ್‌    ಸಿ ಕೊಹ್ಲಿ ಬಿ ಶಮಿ    16
ಬೆನ್‌ ಸ್ಟೋಕ್ಸ್‌    ಸಿ ರಾಹುಲ್‌ ಬಿ ಪಾಂಡ್ಯ    62
ಜಾಸ್‌ ಬಟ್ಲರ್‌    ಸಿ ಎಲ್‌ಬಿಡಬ್ಲ್ಯು ಬುಮ್ರಾ    106
ಜಾನಿ ಬೇರ್‌ಸ್ಟೊ    ಬಿ ಬುಮ್ರಾ    0
ಕ್ರಿಸ್‌ ವೋಕ್ಸ್‌    ಸಿ ಪಂತ್‌ ಬಿ ಬುಮ್ರಾ    4
ಆದಿಲ್‌ ರಶೀದ್‌    ಔಟಾಗದೆ    33
ಸ್ಟುವರ್ಟ್‌ ಬ್ರಾಡ್‌    ಸಿ ರಾಹುಲ್‌ ಬಿ ಬುಮ್ರಾ    20
ಜೇಮ್ಸ್‌ ಆ್ಯಂಡರ್ಸನ್‌    ಸಿ ರಹಾನೆ ಬಿ ಅಶ್ವಿ‌ನ್‌    11

ಇತರ        22
ಒಟ್ಟು  (ಆಲೌಟ್‌ )        317
ವಿಕೆಟ್‌ ಪತನ: 1-27, 2-32, 3-62, 4-62, 5-231, 6-231, 7-274, 8-241, 9-291.

ಬೌಲಿಂಗ್‌:
ಜಸ್‌ಪ್ರೀತ್‌ ಬುಮ್ರಾ        29-8-85-5
ಇಶಾಂತ್‌ ಶರ್ಮ        20-4-70-2
ಆರ್‌. ಅಶ್ವಿ‌ನ್‌        22.5-8-44-1
ಮೊಹಮ್ಮದ್‌ ಶಮಿ        19-3-78-1
ಹಾರ್ದಿಕ್‌ ಪಾಂಡ್ಯ        14-5-22-1

ಪಂದ್ಯಶ್ರೇಷ್ಠ: ವಿರಾಟ್‌ ಕೊಹ್ಲಿ
4ನೇ ಟೆಸ್ಟ್‌: ಸೌತಾಂಪ್ಟನ್‌ (ಆ. 30-ಸೆ. 3)

ಎಕ್ಸ್‌ಟ್ರಾ ಇನ್ನಿಂಗ್ಸ್‌ 
ವಿರಾಟ್‌ ಕೊಹ್ಲಿ ಅತ್ಯಧಿಕ ಟೆಸ್ಟ್‌ ಪಂದ್ಯಗಳನ್ನು ಗೆದ್ದ ಭಾರತೀಯ ನಾಯಕರ ಯಾದಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದರು (38 ಟೆಸ್ಟ್‌, 22 ಜಯ). ನಾಟಿಂಗ್‌ಹ್ಯಾಮ್‌ ಜಯದೊಂದಿಗೆ ಅವರು ಸೌರವ್‌ ಗಂಗೂಲಿ ದಾಖಲೆ ಮುರಿದರು (21 ಜಯ). ಒಟ್ಟು 27 ಗೆಲುವು ಕಂಡ ಮಹೇಂದ್ರ ಸಿಂಗ್‌ ಧೋನಿ ಅಗ್ರಸ್ಥಾನದಲ್ಲಿದ್ದಾರೆ.

ಈ ಟೆಸ್ಟ್‌ನಲ್ಲಿ ಭಾರತದ ವೇಗದ ಬೌಲರ್‌ಗಳು ಒಟ್ಟು 19 ವಿಕೆಟ್‌ ಕಿತ್ತರು. ಇದು ಟೆಸ್ಟ್‌ ಪಂದ್ಯದವೊಂದರಲ್ಲಿ ಭಾರತದ ವೇಗದ ಬೌಲರ್‌ಗಳ ಅತ್ಯುತ್ತಮ ಸಾಧನೆಯಾಗಿದೆ. ಇದೇ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಜೊಹಾನ್ಸ್‌ಬರ್ಗ್‌ ಟೆಸ್ಟ್‌ನಲ್ಲಿ ಭಾರತದ ವೇಗಿಗಳು ಎಲ್ಲ 20 ವಿಕೆಟ್‌ ಹಾರಿಸಿದ್ದರು.

ಸ್ಪಿನ್ನರ್‌ಗಳ ನೆರವಿಲ್ಲದೆ, ಅಥವಾ ಸ್ಪಿನ್ನರ್ ಕೇವಲ ಒಂದೇ ವಿಕೆಟ್‌ ಕಿತ್ತ ಸಂದರ್ಭದಲ್ಲಿ ಭಾರತ 3ನೇ ಸಲ ಟೆಸ್ಟ್‌ ಪಂದ್ಯವನ್ನು ಗೆದ್ದಿತು. ಇದಕ್ಕೂ ಮುನ್ನ ಇದೇ ವರ್ಷದ ಜೊಹಾನ್ಸ್‌ಬರ್ಗ್‌ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ, 2001ರ ಕ್ಯಾಂಡಿ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಜಯ ಸಾಧಿಸಿತ್ತು. ಕ್ಯಾಂಡಿಯಲ್ಲಿ ಸ್ಪಿನ್ನಿಗೆ ಉರುಳಿದ್ದು ಒಂದೇ ವಿಕೆಟ್‌.

ವಿರಾಟ್‌ ಕೊಹ್ಲಿ ಇಂಗ್ಲೆಂಡ್‌ನ‌ಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ ಭಾರತದ ಕೇವಲ 2ನೇ ನಾಯಕ. 1986ರ ಲಾರ್ಡ್ಸ್‌ ಟೆಸ್ಟ್‌ನಲ್ಲಿ ಕಪಿಲ್‌ದೇವ್‌ ಈ ಗೌರವಕ್ಕೆ ಪಾತ್ರರಾಗಿದ್ದರು. ಇದು ಲಾರ್ಡ್ಸ್‌ನಲ್ಲಿ ಭಾರತದ ಸಾಧಿಸಿದ ಮೊದಲ ಗೆಲುವಾಗಿತ್ತು.

ವಿರಾಟ್‌ ಕೊಹ್ಲಿ ಏಶ್ಯದ ಹೊರಗಿನ 4 ಟೆಸ್ಟ್‌ಗಳಲ್ಲಿ ಜಯ ಸಾಧಿಸಿದ ಭಾರತದ 2ನೇ ನಾಯಕ. ಧೋನಿ ಕೂಡ ನಾಲ್ಕರಲ್ಲಿ ಜಯ ಕಂಡಿದ್ದರು. ಸೌರವ್‌ ಗಂಗೂಲಿ ನಾಯಕತ್ವದಲ್ಲಿ 6 ಟೆಸ್ಟ್‌ ಗೆದ್ದದ್ದು ಭಾರತೀಯ ದಾಖಲೆಯಾಗಿದೆ.

ವಿರಾಟ್‌ ಕೊಹ್ಲಿ ನಾಯಕನಾಗಿ 6ನೇ ಸಲ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ನಾಯಕನಾದ ಬಳಿಕ ವಿದೇಶದಲ್ಲಿ ಅವರು ಮೊದಲ ಸಲ ಈ ಪ್ರಶಸ್ತಿಗೆ ಭಾಜನರಾದರು.

ತಂಡವೊಂದು 4ನೇ ದಿನ 9 ವಿಕೆಟ್‌ ಕಳೆದುಕೊಂಡು, ಉಳಿದೊಂದು ವಿಕೆಟನ್ನು ಅಂತಿಮ ದಿನ ಕಳೆದುಕೊಂಡು ಟೆಸ್ಟ್‌ ಪಂದ್ಯವೊಂದನ್ನು ಸೋತ 11ನೇ ನಿದರ್ಶನ ಇದಾಗಿದೆ. ಇದೇ ವರ್ಷ ಡರ್ಬನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ಕೊನೆಯ ಸಲ ಈ ಯಾದಿಯಲ್ಲಿ ಕಂಡುಬಂದಿತ್ತು.

ಭಾರತ ಈ ಪಂದ್ಯದಲ್ಲಿ 17 ವಿಕೆಟ್‌ಗಳನ್ನು ಕ್ಯಾಚ್‌ ರೂಪದಲ್ಲಿ ಉರುಳಿಸಿತು. ಇದಕ್ಕೂ ಮುನ್ನ 2011ರ ನಾಟಿಂಗ್‌ಹ್ಯಾನಮ್‌ ಟೆಸ್ಟ್‌ನಲ್ಲೂ ಭಾರತ 17 ಕ್ಯಾಚ್‌ಗಳ ಮೂಲಕವೇ ಇಂಗ್ಲೆಂಡನ್ನು ಆಲೌಟ್‌ ಮಾಡಿತ್ತು. ಇವು ಕಳೆದ 36 ವರ್ಷಗಳ ಟೆಸ್ಟ್‌ ಇತಿಹಾದಲ್ಲಿ ಕಂಡುಬಂದ ಕೇವಲ 2 ನಿದರ್ಶನಗಳಾಗಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ