ವನಿತಾ ವಿಶ್ವ ಬಾಕ್ಸಿಂಗ್: ಸರಿತಾದೇವಿಗೆ ಸೋಲು
Team Udayavani, Oct 7, 2019, 5:45 AM IST
ಹೊಸದಿಲ್ಲಿ: ರಶ್ಯದಲ್ಲಿ ನಡೆಯುತ್ತಿರುವ ವನಿತಾ ವಿಶ್ವ ಬಾಕ್ಸಿಂಗ್ ಕೂಟದಲ್ಲಿ ಭಾರತದ ಮಾಜಿ ಚಾಂಪಿಯನ್ ಸರಿತಾದೇವಿ ಸೋಲನುಭವಿಸಿದ್ದಾರೆ. 60 ಕೆಜಿ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿದ್ದ ಅವರು, 32ರ ಸುತ್ತಿನ ಮುಖಾಮುಖೀಯಲ್ಲಿ ರಶ್ಯದ ನತಾಲಿಯಾ ಶದ್ರಿನಾ ವಿರುದ್ಧ 0-5 ಅಂತರದಿಂದ ಎಡವಿದರು. 4ನೇ ಶ್ರೇಯಾಂಕದ ಸರಿತಾಗೆ ಮೊದಲ ಸುತ್ತಿನ ಬೈ ಲಭಿಸಿತ್ತು.
ದಿಲ್ಲಿಯಲ್ಲಿ ನಡೆದ 2006ರ ವಿಶ್ವ ಕೂಟದಲ್ಲಿ ಚಿನ್ನದ ಪದಕ ಗೆದ್ದ ಹಿರಿಮೆ ಸರಿತಾದೇವಿ ಅವರದ್ದಾಗಿದೆ. 13 ವರ್ಷಗಳ ಬಳಿಕ ಇದೇ ಸಾಧನೆಯನ್ನು ಪುನರಾವರ್ತಿಸುವ ಯೋಜನೆಯಲ್ಲಿದ್ದರು. ಆರಂಭಿಕ ಸುತ್ತಿನ ಮೊದಲ 3 ನಿಮಿಷ ಸರಿತಾ ಹಿಡಿತ ಸಾಧಿಸಿದ್ದರು. ಆದರೆ ಮುಂದಿನ 2 ಸುತ್ತುಗಳ ಕಾದಾಟದಲ್ಲಿ ಶದ್ರಿನಾ ಅಮೋಘ ರೀತಿಯಲ್ಲಿ ತಿರುಗಿ ಬಿದ್ದರು. ಭಾರತೀಯಳ ಆಟ ನಡೆಯಲಿಲ್ಲ.