ವಿಧಾನ ಪರಿಷತ್ ಗೆ ಬಾಬುರಾವ್ ಚಿಂಚನಸೂರ್ ಅವಿರೋಧ ಆಯ್ಕೆ
Team Udayavani, Aug 4, 2022, 4:51 PM IST
ಬೆಂಗಳೂರು: ರಾಜ್ಯ ವಿಧಾನಪರಿಷತ್ ನ ಸದಸ್ಯರಾಗಿದ್ದ ಸಿ.ಎಂ.ಇಬ್ರಾಹಿಂ ಅವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆಯಬೇಕಾಗಿದ್ದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಪ್ರಕಟಿಸಿದ್ದಾರೆ.
ರಾಜ್ಯ ವಿಧಾನಸಭೆಯ ಸದಸ್ಯರಿಂದ ಆಯ್ಕೆಯಾಗಬೇಕಿದ್ದ ಪರಿಷತ್ ನ ಒಂದು ಸ್ಥಾನಕ್ಕೆ ಆಗಸ್ಟ್ 11 ರಂದು ಚುನಾವಣೆ ನಿಗದಿಪಡಿಸಿ ಚುನಾವಣಾ ಆಯೋಗವೇಳಾಪಟ್ಟಿಯನ್ನು ಪ್ರಕಟಿಸಿತ್ತು.
ಚಿಂಚನಸೂರ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇಂದು ನಾಮಪತ್ರ ವಾಪಾಸ್ ತೆಗೆದುಕೊಳ್ಳಲು ಕೊನೆಯ ದಿನವಾಗಿತ್ತು. ಕಣದಲ್ಲಿ ಯಾರೂ ಇಲ್ಲದ ಕಾರಣ ಏಕೈಕ ಅಭ್ಯರ್ಥಿಯಾಗಿದ್ದ ಬಾಬುರಾವ್ ಚಿಂನಸೂರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.