ಸ್ಕೀಯಿಂಗ್‌ನಲ್ಲಿ ಕೊಡಗಿನ ಭವಾನಿ ಸಾಧನೆ
Team Udayavani, Nov 12, 2019, 3:03 AM IST
ಮಡಿಕೇರಿ: ರಷ್ಯಾದ ಅತಿ ಎತ್ತರದ ಮೌಂಟ್ ಎಲ್‌ಬ್ರಸ್ ಪರ್ವತದ ಮೇಲೆ ಭಾರತದ ರಾಷ್ಟ್ರಧ್ವಜವನ್ನು ನೆಟ್ಟು ಬಂದಿರುವ ಕೊಡಗಿನ ಭವಾನಿ ಈಗ ನ್ಯೂಜಿಲ್ಯಾಂಡ್‌ನ ಮೌಂಟ್ ರೂಪೇವ್‌ನಲ್ಲಿ ತರಬೇತಿ ಪಡೆದ ಮೊದಲ ಭಾರತದ ಯುವತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಹಿಮಚ್ಛಾದಿತ ಪರ್ವತ ಆರೋಹಣ, ಈಜು, ಕುದುರೆ ಸವಾರಿ ಹೀಗೆ ಹಲವು ಸಾಹಸಮಯ ಚಟುವಟಿಕೆಯಲ್ಲಿ ತೊಡಗಿರುವ ಟಿ.ಎನ್. ಭವಾನಿ ಈಗ ನ್ಯೂಜಿಲ್ಯಾಂಡ್‌ನ ಜ್ವಾಲಾಮುಖೀ ಪರ್ವತ ಮೌಂಟ್ ರೂಪೇವ್‌ನಲ್ಲಿ ಮೂರು ತಿಂಗಳ ಕಾಲ ಸ್ಕೀಯಿಂಗ್ ತರಬೇತಿ ಮುಗಿಸಿ ಅಂತಾರಾಷ್ಟ್ರೀಯ ಸ್ಕೀಯಿಂಗ್ ಬೋಧಕರ ಅರ್ಹತೆ ಪಡೆದು, ಹೆಚ್ಚಿನ ತರಬೇತಿಗೆ ದ. ಕೊರಿಯಾಗೆ ತೆರಳುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಕೊಡಗಿನ ನಾಪೋಕ್ಲು ಸಮೀಪದ ಪೆರೂರು ಗ್ರಾಮದ ತೆಕ್ಕಡ ನಂಜುಂಡ (ಶಂಭು), ಪಾರ್ವತಿ (ದಿವ್ಯಾ) ದಂಪತಿ ಪುತ್ರಿ ಭವಾನಿ ನವೋದಯ ವಿದ್ಯಾಲಯದಲ್ಲಿ ಓದುತ್ತಾ, ಎನ್‌ಸಿಸಿಗೆ ಸೇರ್ಪಡೆಗೊಂಡ ಬಳಿಕ ಸಾಹಸಮಯ ಚಟುವಟಿಕೆಯತ್ತ ತನ್ನನ್ನು ತೊಡಗಿಸಿಕೊಂಡರು. ನಂತರ ಅನೇಕ ತರಬೇತಿ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.