ಕೊಡಗಿನಲ್ಲಿ ನಿರಂತರ ಮಳೆ: ರಸ್ತೆ ಹಾನಿ, ಸಂಚಾರ ಬಂದ್
Team Udayavani, Aug 6, 2019, 3:03 AM IST
ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ರಸ್ತೆ ಮತ್ತು ಸೇತುವೆಗಳಿಗೆ ಹಾನಿಯಾಗಿದೆ. ವಿರಾಜಪೇಟೆ-ಮಾಕುಟ್ಟ ರಸ್ತೆಯ ಒಂದು ಭಾಗ ಕುಸಿದಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಕುಸಿತವಾದ ಸ್ಥಳಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಪಡಿಸುವ ಉದ್ದೇಶ ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮೂರು ದಿನಗಳವರೆಗೆ ಪೆರುಂಬಾಡಿ ಚೆಕ್ ಪೋಸ್ಟ್‌ನಿಂದ ಮಾಕುಟ್ಟ ಚೆಕ್ ಪೋಸ್ಟ್‌ವರೆಗಿನ ರಸ್ತೆಯಲ್ಲಿ ಎಲ್ಲ ರೀತಿಯ ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ತಾತ್ಕಾಲಿಕವಾಗಿ ರಸ್ತೆ ದುರಸ್ತಿಗೊಳಿಸಿದ ನಂತರ ಸಾರ್ವಜನಿಕ ಓಡಾಟಕ್ಕೆ ಮುಕ್ತಗೊಳಿಸಲಾಗುವುದು. ರಸ್ತೆಯನ್ನು ಶಾಶ್ವತವಾಗಿ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುವ ಜಿಲ್ಲಾಧಿಕಾರಿಗಳು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.