ವೃತ್ತಿಪರ ಕೋರ್ಸ್: ಖಾಸಗಿ ಕಾಲೇಜುಗಳ ಶುಲ್ಕಗಳು ಅಂತಿಮ
Team Udayavani, Jul 6, 2018, 6:00 AM IST
ಬೆಂಗಳೂರು: ಪ್ರಸಕ್ತ ಸಾಲಿನ ವೃತ್ತಿಪರ ಕೋರ್ಸ್ಗಳ ಖಾಸಗಿ ಕಾಲೇಜಿನ ಸರ್ಕಾರಿ ಕೋಟಾದ ಸೀಟುಗಳ ಶುಲ್ಕವನ್ನು ರಾಜ್ಯಸರ್ಕಾರ ಅಂತಿಮಗೊಳಿಸಿದೆ. ಇಂಜಿನಿಯರಿಂಗ್ ಕೋರ್ಸ್ಗೆ ಶೇ.10 ಹಾಗೂ ವೈದ್ಯಕೀಯ, ದಂತವೈದ್ಯಕೀಯ ಕೋರ್ಸ್ಗೆ ಶೇ.8ರಷ್ಟು ಶುಲ್ಕ ಹೆಚ್ಚಳ ಮಾಡಿದೆ.
ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಗುರುವಾರ ಸಂಬಂಧಪಟ್ಟ ಖಾಸಗಿ ವೃತ್ತಿಪರ ಕಾಲೇಜುಗಳ ಆಡಳಿತ ಮಂಡಳಿಯ ಸಭೆ ನಡೆಸಿದ್ದರು. ಅಂತಿಮವಾಗಿ ಇಂಜಿನಿಯರಿಂಗ್ ಕೋರ್ಸ್ಗೆ ಖಾಸಗಿ ಕಾಲೇಜಿನಲ್ಲಿ ಸರ್ಕಾರಿ ಕೋಟಾದ ಸೀಟಿಗೆ ಶೇ.10 ಏರಿಸಲು ಒಪ್ಪಿರುವುದರಿಂದ ಪ್ರಸಕ್ತ ಸಾಲಿನ ಒಟ್ಟು ಶುಲ್ಕ 65 ಸಾವಿರದಿಂದ 71,500ಕ್ಕೆ ಏರಿಕೆಯಾಗಿದೆ.
ಖಾಸಗಿ ಕಾಲೇಜಿನಲ್ಲಿ ಸರ್ಕಾರಿ ಕೋಟಾದ ವೈದ್ಯಕೀಯ ಕೋರ್ಸ್ಗಳಿಗೆ ಶೇ.8ರಷ್ಟು ಶುಲ್ಕ ಹೆಚ್ಚಳವಾಗಿರುವುದರಿಂದ 77 ಸಾವಿರದಿಂದ 83,160ಕ್ಕೆ ಏರಲಿದೆ. ಖಾಸಗಿ ಹಾಗೂ ಆಡಳಿತ ಮಂಡಳಿ ಕೋಟಾದ ಸೀಟುಗಳಿಗೆ 6.32 ಲಕ್ಷದಿಂದ 6.82 ಲಕ್ಷಕ್ಕೆ ಏರಿಕೆ ಆಗಲಿದೆ. ಸರ್ಕಾರದ ನಿರ್ಣಯಕ್ಕೆ ಖಾಸಗಿ ವೃತ್ತಿಪರ ಕಾಲೇಜಿನ ಆಡಳಿತ ಮಂಡಳಿ ಕೂಡ ಒಪ್ಪಿಗೆ ಸೂಚಿಸಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ಖಚಿತಪಡಿಸಿವೆ.