ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ
Team Udayavani, Oct 1, 2019, 3:05 AM IST
ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವದ ಎರಡನೇ ದಿನವಾದ ಸೋಮವಾರ ಶಾರದಾಂಬೆಗೆ ಹಂಸವಾಹನ ಅಲಂಕಾರ (ಬ್ರಾಹ್ಮಿ) ಮಾಡಲಾಗಿತ್ತು. ಬೆಳಗ್ಗೆ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಶ್ರೀ ಚಂದ್ರಮೌಳೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದರು.
ನಂತರ ಶ್ರೀ ಶಾರದಾ ಪೀಠದ ಹೊರ ಪ್ರಾಕಾರದಲ್ಲಿರುವ ಶ್ರೀ ವಿದ್ಯಾಶಂಕರ, ಶ್ರೀ ಸುಬ್ರಹ್ಮಣ್ಯ, ಜನಾರ್ದನ ಸ್ವಾಮಿ, ಸುರೇಶ್ವರಾಚಾರ್ಯ ಅಧಿಷ್ಠಾನ ಮಂದಿರ, ಶ್ರೀ ತೋರಣ ಗಣಪತಿ ಹಾಗೂ ಶ್ರೀ ಶಂಕರಾಚಾರ್ಯ ದೇಗುಲಗಳಿಗೆ ಭೇಟಿ ನೀಡಿದರು. ಇದಕ್ಕೂ ಮೊದಲು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ತುಂಗಾ ನದಿಯಲ್ಲಿ ಗಂಗಾ ಪೂಜೆ ನೆರವೇರಿಸಿದರು.
ನಂತರ ಶ್ರೀ ಶಾರದೆಯ ಸನ್ನಿಧಿಗೆ ತೆರಳಿ ಒಳ ಪ್ರಾಕಾರದಲ್ಲಿರುವ ಶಕ್ತಿ ಗಣಪತಿಗೆ ಹಾಗೂ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಶಾರದಾಂಬೆ ಸನ್ನಿಧಿಯಲ್ಲಿ ವಿವಿಧ ಪಾರಾಯಣ, ಅರ್ಚನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ತಾಯಿ ಶಾರದೆಗೆ ಮಹಾಮಂಗಳಾರತಿ ನಡೆಯಿತು.