ಆ್ಯಪಲ್ ಮೇಲೆ ಚೀನಾ ಸ್ಪೈ!
Team Udayavani, Oct 5, 2018, 8:15 AM IST
ನ್ಯೂಯಾರ್ಕ್: ಚೀನಾದಲ್ಲಿ ತಯಾರಿಸಿದ ಕಂಪ್ಯೂಟರುಗಳು ಮತ್ತು ಸರ್ವರುಗಳನ್ನು ಬಳಸಿ ಅಮೆರಿಕದ ಕಂಪನಿಗಳಾದ ಆ್ಯಪಲ್ ಹಾಗೂ ಅಮೆಜಾನ್ ಮೇಲೆ ಚೀನಾ ಗೂಢಚಾರಿಕೆ ನಡೆಸಿದೆ ಎಂದು ಅಮೆರಿಕದ ಸುದ್ದಿಸಂಸ್ಥೆ ವರದಿ ಮಾಡಿದೆ. ಅಷ್ಟೇ ಅಲ್ಲ, ಅಮೆರಿಕದ ತನಿಖಾ ಸಂಸ್ಥೆ FBI ಸೇರಿದಂತೆ 28 ಕಂಪನಿಗಳ ಮೇಲೂ ಗೂಢ ಚಾರಿಕೆ ನಡೆಸಲಾಗಿದೆ.
ಸೂಪರ್ ಮೈಕ್ರೋ ಎಂಬ ಕಂಪನಿಯಲ್ಲಿ ತಯಾರಾದ ಮದರ್ ಬೋರ್ಡ್ಗಳಲ್ಲಿ ಭತ್ತದಷ್ಟು ಚಿಕ್ಕ ಗಾತ್ರದ ಮೈಕ್ರೋಚಿಪ್ ಅಳವಡಿಸಿ ಚೀನಾ ಗೂಢಚಾರಿಕೆ ನಡೆಸಿದೆ ಎಂದು ವರದಿ ಹೇಳಿದೆ. ಈ ಮದರ್ಬೋರ್ಡ್ಗಳನ್ನು ಬಳಸಿದ ಎಲ್ಲ ಸರ್ವರ್ಗಳು ಹಾಗೂ ಕಂಪ್ಯೂಟರ್ಗಳನ್ನು ಸಂಪರ್ಕಿಸಲು ಚೀನಾದ ಹ್ಯಾಕರ್ಗಳಿಗೆ ಸಾಧ್ಯವಾಗುತ್ತದೆ. ಈ ಚಿಪ್ 2015ರಲ್ಲೇ ಕಂಡುಬಂದಿತ್ತು. ಯಾವುದೇ ಗ್ರಾಹಕರ ಮಾಹಿತಿ ಸೋರಿಕೆಯಾಗಿಲ್ಲ. ಆದರೆ ಕಾರ್ಪೊರೇಟ್ ಗೌಪ್ಯಗಳು ಮತ್ತು ಸೂಕ್ಷ್ಮವಾದ ಸರ್ಕಾರಿ ಮಾಹಿತಿಗಳನ್ನು ಈ ಚಿಪ್ ಬಳಸಿ ಚೀನಾ ಕದ್ದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.