ಅತಿ ಉದ್ದದ ಸೇತುವೆ ಲೋಕಾರ್ಪಣೆ
Team Udayavani, Oct 24, 2018, 4:01 PM IST
ಬೀಜಿಂಗ್: ಹಾಂಕಾಂಗ್, ಮಕಾವ್ ಮತ್ತು ಮೈನ್ಲ್ಯಾಂಡ್ ಚೀನವನ್ನು ಸಂಪರ್ಕಿಸುವ ವಿಶ್ವದ ಅತಿದೊಡ್ಡ ಸಮುದ್ರ ಸೇತುವೆಯು ಮಂಗಳವಾರ ಚೀನದಲ್ಲಿ ಲೋಕಾರ್ಪಣೆಗೊಂಡಿದೆ. ಬರೋಬ್ಬರಿ 55 ಕಿ.ಮೀ. ಉದ್ದದ ಈ ಸೇತುವೆಯನ್ನು ಚೀನ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಉದ್ಘಾಟಿಸಿದ್ದು, ಬುಧವಾರದಿಂದ ಇದು ಸಂಚಾರಕ್ಕೆ ಮುಕ್ತವಾಗಲಿದೆ.
ಬೀಜಿಂಗ್ಗೆ ಆರ್ಥಿಕ ಹಾಗೂ ರಾಜಕೀಯವಾಗಿ ಮಹತ್ವದ್ದು ಎನಿಸಿರುವ ಸೇತುವೆಯು ಮೂರು ನಗರಗಳನ್ನು ಸಂಪರ್ಕಿಸುವ ಕಾರಣ, ಈಗಿರುವ ಮೂರು ಗಂಟೆಗಳ ಪ್ರಯಾಣ ಅವಧಿಯು 30 ನಿಮಿಷಕ್ಕೆ ಇಳಿಕೆಯಾಗಲಿದೆ. ಹಾವಿನಂತೆ ಕಾಣುವ ಅತಿ ಉದ್ದದ ಸೇತುವೆಯು ನೀರಿನಡಿಯ ಸುರಂಗದಲ್ಲೂ ಹಾದುಹೋಗಿದೆ.
ನೆತ್ತರು-ಬೆವರಿನ ಯೋಜನೆ: 2009ರ ಡಿಸೆಂಬರ್ನಲ್ಲಿ ಕಾಮಗಾರಿ ಆರಂಭವಾಗಿದ್ದು, 2016ರಲ್ಲೇ ಇದನ್ನು ಮುಗಿಸಬೇಕಿತ್ತು. ಆದರೆ, ವಿಳಂಬ, ಬಜೆಟ್ ಕೊರತೆ, ಭ್ರಷ್ಟಾಚಾರ, ಕಾರ್ಮಿಕರ ಸಾವು ಮತ್ತಿತರ ಕಾರಣಗಳಿಂದಾಗಿ ಯೋಜನೆ ಪೂರ್ಣ ಗೊಳ್ಳಲು 9 ವರ್ಷ ಬೇಕಾಯಿತು. ಕಾಮಗಾರಿಯ ಅವಧಿಯಲ್ಲಿ ಒಟ್ಟು 10 ಮಂದಿ ಕಾರ್ಮಿಕರು ಮೃತಪಟ್ಟರೆ, 600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹೀಗಾಗಿ, ಈ ಸೇತುವೆಯನ್ನು ಕೆಲವರು “ನೆತ್ತರು ಮತ್ತು ಬೆವರಿನ ಯೋಜನೆ’ ಎಂದು ಬಣ್ಣಿಸಿದ್ದಾರೆ.