ಆಹಾರ ಸೇವನೆ ಎಂಬ ಸಂಸ್ಕೃತಿ ಮತ್ತು ಇತರ ಕತೆಗಳು


Team Udayavani, Mar 17, 2019, 12:30 AM IST

bale-ele-uta-udupi.jpg

“ಇದರಲ್ಲಿ  ಎಷ್ಟು ಕ್ಯಾಲೊರಿ ಇದೆ’,”ಅದರಲ್ಲಿ ಎಷ್ಟು ಪ್ರೊಟೀನ್‌ ಇದೆ’, “ಇದರಿಂದ ಕೊಲೆಸ್ಟರಾಲ್‌ ಉಂಟಾಗಬಹುದೆ?’ ಎಂದು ಯೋಚಿಸುತ್ತ ಊಟ ಮಾಡುವ ಕಾಲ ಬಂದಿದೆ. ರಸಗ್ರಹಣದ ಸಮಗ್ರ ಅನುಭವವನ್ನೇ ನಾವು ಮರೆಯುತ್ತಿದ್ದೇವೆ !

ದೇಹ ಉಳಿಯಬೇಕಾದರೆ ಏನಾದರೂ ತಿನ್ನಬೇಕು. ಆಧ್ಯಾತ್ಮಿಕವಾಗಿಯೂ ಲೌಕಿಕವಾಗಿಯೂ ಬದುಕಿಗೆ ದೇಹವೇ ನಿಮಿತ್ತ ! ಅಂಥ ದೇಹವನ್ನು ಪೊರೆಯುವುದು ಅತ್ಯವಶ್ಯ. ಹಾಗಾಗಿ, ತಿನ್ನುವುದಾದರೆ ಎಷ್ಟು ತಿನ್ನಬೇಕು ಎಂಬ ಪ್ರಶ್ನೆಗೆ ಸರಳ ಉತ್ತರ, ದೇಹಕ್ಕೆ ಬೇಕಾಗುವ‌ಷ್ಟು ! ಆದರೆ, ನಾವು ಇವತ್ತು ತಿನ್ನುವುದು ದೇಹ ಉಳಿಸಿಕೊಳ್ಳುವು ದಕ್ಕಾಗಿ ಅಲ್ಲ , ಬಾಯಿಚಪಲಕ್ಕಾಗಿ ! ಸ್ವಲ್ಪ ಸೂಕ್ಷ್ಮವಾಗಿ ಯೋಚಿಸೋಣ- ಪ್ರತಿದಿನ ನಾವು ಏನೇನನ್ನು ತಿನ್ನುತ್ತೇವೆ? ಅದರಲ್ಲಿ ದೇಹ ಪೋಷಣೆಗೆ ತಿಂದದ್ದೆಷ್ಟು? ಬಾಯಿಚಪಲಕ್ಕೆ ತಿಂದದ್ದೆಷ್ಟು ! 

ಆಹಾರ ಸಂಸ್ಕೃತಿಗೂ ಮನೋಸ್ಥಿತಿಗೂ ಸಂಬಂಧವಿದೆ. ಯಾಕೆ ತಿನ್ನಬೇಕೆಂಬ ಆಸೆ ಉಂಟಾಗುತ್ತದೆಯೆಂದರೆ ಮನಸ್ಸು  ಬಯಸಿದ ಕಾರಣದಿಂದ. ಹಾಗಾದರೆ, ಆಹಾರಕ್ಕೆಂದೇ ಪ್ರತ್ಯೇಕ ಮನೋವಿಜ್ಞಾನ ಇದೆಯೆಂದಾಯಿತು. ಸೇವಿಸುವ ಆಹಾರ ಮತ್ತು ಯೋಚಿಸುವ ಮನಸ್ಸಿಗೆ ಇರುವ ಸೂಕ್ಷ್ಮ ಸಂಬಂಧದ ಬಗ್ಗೆ ಒಂದಿಷ್ಟು ವಿಚಾರ ಮಾಡೋಣ.
.
ಸ್ಥೂಲಕಾಯದವರನ್ನು ಅಥವಾ ಬೊಜ್ಜು ದೇಹದವರನ್ನು ಮನೋರೋಗಿಗಳೆಂದು ಪರಿಗಣಿಸಬೇಕೆಂದು ಸಾಕಷ್ಟು ಚಿಂತನೆಗಳು ನಡೆದಿವೆ. ಪರವಾಗಿ ವಾದಿಸಿದವರಿದ್ದಾರೆ, ವಿರೋಧವಾಗಿ ಧ್ವನಿ ಎತ್ತಿದವರಿದ್ದಾರೆ. “ಅತಿಕಾಯ’ರು ಮಾನಸಿಕ ಹತೋಟಿಯನ್ನು ಕಳೆದುಕೊಂಡು ಆಹಾರವನ್ನು ಸೇವಿಸುವುದರಿಂದ ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂಬುದು ಒಂದು ಪ್ರತಿಪಾದನೆ.

ಮನೋವಿಜ್ಞಾನ ಕ್ಷೇತ್ರದಲ್ಲಿ ಬೈಬಲ್‌ ಎಂದೇ ಪರಿಗಣಿತವಾಗಿರುವ ಕೃತಿಯೊಂದಿದೆ : ಡಿಎಸ್‌ಎಂ-5 ಅಂತ. ಡಯಗ್ನೊಸ್ಟಿಕ್‌ ಆ್ಯಂಡ್‌ ಸ್ಟಾಟಿಸ್ಟಿಕಲ್‌ ಮಾನ್ಯುವಲ್‌ ಆಫ್ ಮೆಂಟಲ್‌ ಡಿಸ್‌ಆರ್ಡರ್ಸ್‌- 5ಠಿಜ ಎಡಿಶನ್‌- ಎಂಬುದು ಇದರ ಪೂರ್ಣಪಾಠ. ಈ ಕೃತಿಯಲ್ಲಿ ಬೃಹತ್‌ ಶರೀರಿಗಳನ್ನು ಮನೋರೋಗಿಗಳೆಂದು ಗುರುತಿಸಿ ಚಿಕಿತ್ಸೆಯ ವಿಧಿವಿಧಾನಗಳನ್ನು ರೂಪಿಸುವ ಪ್ರಯತ್ನ ನಡೆದಿತ್ತು. ಆದರೆ, ಅದಕ್ಕೆ ಪೂರ್ಣ ಸಾಕ್ಷ್ಯಾಧಾರಗಳು ಸಿಗದ ಕಾರಣ ಕೈಬಿಡಲಾಗಿತ್ತು. ಸಾಮಾನ್ಯವಾಗಿ ಶರೀರ ಸ್ಥೂಲವಾದಾಗ ಅದಕ್ಕೆ ಜಂಕ್‌ಫ‌ುಡ್‌ ತಯಾರಿಸುವ ಕಂಪೆನಿಗಳನ್ನು ದೂರುತ್ತೇವೆ. ಆದರೆ, ಈ ಕಂಪೆನಿಗಳು ತನ್ನ ಪ್ರಾಡಕ್ಟ್ನಿಂದ ಅಲ್ಲ , ಮನುಷ್ಯರ ಬೇಜವಾಬ್ದಾರಿಯಿಂದ ಮತ್ತು ಮಾನಸಿಕ ನಿಯಂತ್ರಣ ಇಲ್ಲದಿರುವುದರಿಂದ ಅವರಿಗೆ ಸ್ಥೂಲಕಾಯ ಉಂಟಾಗುತ್ತದೆ ಎನ್ನುತ್ತವೆ. “ಆಹಾರ ಸೇವಿಸಿದ ಮೇಲೆ ನೀವು ಎರಡು ಕಿ.ಮೀ. ಆದರೂ ಓಡಬೇಕು. ಹಾಗೆ ಓಡದಿದ್ದರೆ ಅದು ನಿಮ್ಮ ಹೊಣೆಗೇಡಿತನ’ ಎನ್ನುವುದು ಆ ಕಂಪೆನಿಗಳ ವಾದ. ಇನ್ನೊಂದು ಕುತೂಹಲದ ಸಂಗತಿ ಇದೆ. ಮೆಕ್‌ಡೊನಾಲ್ಡ್‌ ಎಂಬಂಥ ಕಂಪೆನಿಗಳ ವಿರುದ್ಧ ಕೆಲವು ಗ್ರಾಹಕರು “ನಮ್ಮ ಬೊಜ್ಜಿ ಗೆ ನೀವೇ ಕಾರಣ’ ಎಂಬಂಥ ದಾವೆ ಹೂಡಿದ್ದರು. ಅವರು ಹೇಳುವುದೇನೆಂದರೆ ಕಂಪೆನಿಗಳು ತಮ್ಮ ಜಾಹೀರಾತುಗಳ ಮೂಲಕ ಮೋಹಗೊಳಿಸಿ ಜಂಕ್‌ಫ‌ುಡ್‌ ಮತ್ತು ಪೇಯಗಳನ್ನು ಹೆಚ್ಚು ಹೆಚ್ಚು ಸೇವಿಸುವಂತೆ ಮಾಡಿರುವುದರಿಂದಲೇ ಈ ಬೊಜ್ಜು ಉಂಟಾಗಿದೆ ಎಂಬುದು ಆ ಗ್ರಾಹಕರ ಆರೋಪ. ಆದರೆ, ಇಂಥ ವಾದಕ್ಕೆ ಆಧಾರವಿಲ್ಲ ಎಂದು ನ್ಯಾಯಾಲಯ ತಳ್ಳಿಹಾಕಿತ್ತು. ಆದರೆ, ಅಂಥಾದ್ದೊಂದು “ದೂರು ಪ್ರಕರಣ’ ನಡೆದದ್ದು ಸತ್ಯ. ಅಮೆರಿಕದ ಅನೇಕ ರಾಜ್ಯಗಳಲ್ಲಿ ಆಹಾರ ಕಂಪೆನಿಗಳ ವಿರುದ್ಧ ದಾವೆ ಹೂಡದಂತೆ ನಿಯಂತ್ರಣವಿದೆ!
.
ನಾವು ತಿನ್ನುತ್ತೇವೆಯೊ, ನಮ್ಮ ದೇಹ ನಮ್ಮನ್ನು ತಿನ್ನಿಸುತ್ತದೆಯೋ ಎಂಬ ದ್ವಂದ್ವಕ್ಕೆ ನಿಖರವಾದ ಉತ್ತರವಿಲ್ಲ. ದೇಹವೇ ಸ್ವತಃ ಒಂದು ಜೀವಿಯಾಗಿ ತನ್ನನ್ನು ತಾನು ಉಳಿಸಿಕೊಳ್ಳುವುದು, ಸಂರಕ್ಷಿಸಿಕೊಳ್ಳುವುದು ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ನಡೆಯುತ್ತಲೇ ಇರುತ್ತದೆ. ನಮಗೆ ತಿಳಿಯದೆಯೇ ನಮ್ಮ ದೇಹದಲ್ಲಿ ಒಂದು ಜೀವಕೋಶ ಇನ್ನೊಂದನ್ನು ತಿನ್ನುವುದು ನಡೆಯುತ್ತಿರುತ್ತದೆ. ಜೀವಕೋಶಗಳು ಆತ್ಮಹತ್ಯೆಯನ್ನೂಮಾಡಿಕೊಳ್ಳುತ್ತವೆ. ಈ ಪ್ರಕ್ರಿಯೆ ರೋಗಗಳಿಂದ ರಕ್ಷಿಸಿಕೊಳ್ಳಲು ಸಹಾಯಕ.ಗರ್ಭಿಣಿಯರು ಮಣ್ಣು ತಿನ್ನಲು ಬಯಸುವುದಿದೆ. ಅದು ಕಬ್ಬಿಣದ ಕೊರತೆ ಅಥವಾ ರಕ್ತಹೀನತೆಯಿಂದ ಎಂಬುದು ವೈಜ್ಞಾನಿಕ ಸತ್ಯ. ಅದು ಮನಸ್ಸಿನ ಬಯಕೆಯಲ್ಲ. ತನ್ನನ್ನು ತಾನು ರಕ್ಷಿಸಿಕೊಳ್ಳುವ ಅಥವಾ ತನ್ನ ವಂಶವೃದ್ಧಿ ಸುಲಲಿತವಾಗಿ ನಡೆದು ಪೀಳಿಗೆಯು ಸಮರ್ಪಕವಾಗಿ ಬೆಳೆಯಲು ಕಂಡುಕೊಳ್ಳುವ ಹಾದಿಯಾಗಿದೆ.

ಹಾಲು ಸೇವಿಸುವ ಮಾನವ
ಹಳೆಯ ಕಾಲದ ಒಂದು ಮಾತಿದೆ: “ವಸ್ತುವಿನ ಹಿಡಿತ ಮನಸ್ಸಿನ ಮೇಲಿದೆಯೊ, ಮನಸ್ಸಿನ ಹಿಡಿತ ವಸ್ತುವಿನ ಮೇಲಿದೆಯೊ’ (Matter over mind v/s mind over matter). ಇದಕ್ಕೆ ಉತ್ತರ ಕಂಡು ಹುಡುಕುವ ಪ್ರಯತ್ನವೂ ನಡೆದಿದೆ. ನರವಿಜ್ಞಾನ (Neuroscience) ಮತ್ತು ಎಪಿಜೆನೆಟಿಕ್ಸ್‌ ಎಂಬ ಶಾಖೆಗಳು ಇದಕ್ಕೆ ಉತ್ತರ ಹುಡುಕುವಲ್ಲಿ ಸಹಕಾರಿಯಾಗಿವೆ. ಮೂಲಭೂತವಾಗಿ ದೇಹವೇ ಜಾಗೃತವಾಗಿ ತನ್ನನ್ನು ತಾನು ಉಳಿಸಿಕೊಳ್ಳಲು ಮುಂದಾಗುತ್ತದೆ. ದೇಹ ಪ್ರಕೃತಿಯಲ್ಲಿ ಇದಕ್ಕೆ ಹಲವು ಸಾಧ್ಯತೆಗಳಿವೆ. ಕೆಲವೊಮ್ಮೆ ಸಹಾಯ ಮಾಡಲು ಹೋಗಿ ಸಮಸ್ಯೆ ಆಗುವುದೂ ಇದೆ ಅಥವಾ ಬೇರೊಂದೇ ರೀತಿಯ ಬೆಳವಣಿಗೆ ಸಂಭವಿಸಬಹುದು.

ಪಾಪುವಾ ನ್ಯೂಗಿನಿ ಎಂಬ ದ್ವೀಪವಿದೆ. ಅಲ್ಲಿನ ಧಾರ್ಮಿಕ ಸಂಸ್ಕಾರಗಳಲ್ಲಿ ಸತ್ತವರ ಮಾಂಸ ಭಕ್ಷಣವೂ ಒಂದು. ಅದ‌ರಿಂದ ಅವರಿಗೆ “ಕುರು’ ಎಂಬ ಮಾನಸಿಕ ರೋಗ ಆರಂಭವಾಯಿತಂತೆ. ಆದರೆ ಸತತವಾಗಿ ಈ ಧಾರ್ಮಿಕ ಆಚರಣೆಯನ್ನು ಕೈಗೊಂಡ ದೆಸೆಯಿಂದ ಆ ಕಾಯಿಲೆಯನ್ನು ಹತ್ತಿಕ್ಕುವ ಸಾಮರ್ಥ್ಯ ಅವರ ದೇಹನಾಳಗಳಲ್ಲಿಯೇ ಬೆಳೆದಿದೆ. ದೇಹಿ (ಮನುಷ್ಯ) ತಪ್ಪು ಮಾಡಿದರೂ ದೇಹ ಅದನ್ನು ಸರಿಪಡಿಸಿಕೊಂಡು ಸಾಗುತ್ತದೆ. ಎಲ್ಲ ಸಂದರ್ಭದಲ್ಲಿ ಹೀಗಾಗುತ್ತದೆ ಎಂದು ಹೇಳಲಾಗದು. ಯಾವುದೇ ಸಸ್ತನಿ ಮೂರು ವರ್ಷ ತಾಯಿಯ ಹಾಲನ್ನು ಸೇವನೆ ಮಾಡುತ್ತದೆ. ಆಮೇಲೆ ಹಾಲು ಕುಡಿಯುವುದನ್ನು ನಿಲ್ಲಿಸುತ್ತದೆ. ಯಾವುದೇ ಸಸ್ತನಿ ಹುಟ್ಟಿನಿಂದ ಸಾಯುವವರೆಗೆ ಹಾಲು ಕುಡಿಯುವುದಿಲ್ಲ , ತಾಯಿಯ ಹಾಲನ್ನು ಮಾತ್ರವಲ್ಲ , ಅನ್ಯ ಪ್ರಾಣಿಯ ಹಾಲನ್ನೂ ಕುಡಿಯುವುದಿಲ್ಲ ! ಯಾವುದಾದರೂ ಪ್ರಾಣಿ ಅನ್ಯ ಪ್ರಾಣಿಯ ಮಾಂಸವನ್ನು ಬೇಯಿಸಿ ತಿನ್ನುತ್ತದೆಯೆ? ಆ ಸಸ್ತನಿಯ ದೇಹ ಆ ಆಹಾರ ಪರಂಪರೆಗೆ ಒಗ್ಗಿಕೊಂಡಿದೆ. ಆದರೆ, ಮನುಷ್ಯ ಈಗಲೂ ದನದ ಹಾಲನ್ನು , ಆಡಿನ ಹಾಲನ್ನು ಅಥವಾ ಕೆಲವು ಪ್ರಾಣಿಗಳ ಹಾಲನ್ನು ಸೇವಿಸುತ್ತಾನೆ! ಅದು ಮನುಷ್ಯನ ದೇಹದಲ್ಲಿ ಜೀರ್ಣವಾಗುತ್ತದೆ. 15-20 ವರ್ಷಗಳಿಂದ ಪ್ರಾಣಿಗಳನ್ನು ಸಾಕಿ ಅವುಗಳ ಹಾಲನ್ನು ಕುಡಿಯುತ್ತ ಬಂದಿರುವುದರಿಂದ ಅವನ ದೇಹ ಹಾಲನ್ನು ಜೀರ್ಣಿಸುವ ಲ್ಯಾಕ್ಟೇಸ್‌ ಕಿಣ್ವವನ್ನು ಉತ್ಪತ್ತಿ ಮಾಡಲು ಶಕ್ತವಾಗಿದೆ. ಡಾರ್ವಿನ್‌ನ ವಿಕಾಸವಾದದಲ್ಲಿ ಇದಕ್ಕೆ ಸಮರ್ಥನೆಯಿದೆ.

ನಾವು ಯಾಕೆ ಹೆಚ್ಚೆಚ್ಚು ಸಕ್ಕರೆ ತಿನ್ನುತ್ತೇವೆ?
ನಾವು ಚಿಕ್ಕವಯಸ್ಸಿನಲ್ಲಿ ಹೆಚ್ಚು ಸಕ್ಕರೆಯನ್ನು ಬಳಸುತ್ತೇವೆ. ಬೆಳೆಯುತ್ತ ಅದರ ರುಚಿಗೆ ವ್ಯಸನಿಗಳಾಗುತ್ತೇವೆ. ಸಿಹಿ ಸೇವನೆಗೆ ಹಾತೊರೆಯುತ್ತೇವೆ. ಇದಕ್ಕೆ ಮೆದುಳಿನಲ್ಲಿ ಉತ್ಪತ್ತಿಯಾಗುವ ಡೊಪಮೈನ್‌ ರಾಸಾಯನಿಕದ ಉತ್ಪತ್ತಿಯೇ ಕಾರಣ. ಬಳಕೆಯ ಪ್ರಮಾಣದ ಮೇಲೆ ತೃಪ್ತಿ ಅಥವಾ ಅತೃಪ್ತಿ ಉಂಟಾಗುತ್ತದೆ! ಇದನ್ನೇ “ವ್ಯಸನ’ ಎನ್ನುವುದು. ತಂಬಾಕು ಅಥವಾ ಸಾರಾಯಿ ವ್ಯಸನಕ್ಕೆ ಇದೇ ಕಾರಣ. ಇತ್ತೀಚೆಗೆ ಕುತೂಹಲಕರವಾದ ಅಧ್ಯಯನವೊಂದು ನಡೆದಿದೆ. ಸಕ್ಕರೆ ಕೂಡಾ ಮಾದಕವಸ್ತುವಿನ ಹಾಗೆ ಕೆಲಸಮಾಡುತ್ತದಂತೆ! ಅದಕ್ಕಾಗಿ ಒಂದು ಪ್ರಯೋಗವನ್ನೂ ನಡೆಸಲಾಯಿತು. ಇಲಿಗಳ ಎರಡು ಗುಂಪುಗಳನ್ನು ಮಾಡಲಾಯಿತು. ಒಂದು ಗುಂಪಿನ ಇಲಿಗಳಿಗೆ ಹೆಚ್ಚು ಹಣ್ಣು-ತರಕಾರಿ ಕೊಟ್ಟು ಅವುಗಳನ್ನೇ ತಿನ್ನುವ ಅಭ್ಯಾಸ ಮಾಡಲಾಯಿತು. ಇನ್ನೊಂದು ಗುಂಪನ್ನು ಸಕ್ಕರೆಯ ವ್ಯಸನಿಗಳನ್ನಾಗಿ ಮಾಡಲಾಯಿತು. ಒಮ್ಮೆ ಹಣ್ಣು-ತರಕಾರಿ ತಿನ್ನುವ ಮತ್ತು ಸಕ್ಕರೆ ತಿನ್ನುವ ಇಲಿಗಳ ಮೇಲೆ ಲೇಸರ್‌ ಬೆಳಕು ಹರಿಸಲಾಯಿತು. ತೀಕ್ಷ್ಣವಾದ ಬೆಳಕು ಬಿದ್ದದ್ದೇ ಹಣ್ಣು-ತರಕಾರಿ ತಿನ್ನುವ ಇಲಿಗಳು ಓಡಿಹೋದವು- ಬದುಕಿದರೆ ಮತ್ತೆ ತಿನ್ನುತ್ತೇವೆ ಎಂಬಂತೆ. ಸಕ್ಕರೆ ತಿನ್ನುವ ಇಲಿಗಳು ಮೈಸುಟ್ಟರೂ, ಸತ್ತುಹೋದರೂ ಹೋಗಲು ಸಿದ್ಧವಿಲ್ಲ. ಅವುಗಳು ಸಕ್ಕರೆಯ ವ್ಯಸನಿಗಳು! ನಮ್ಮಲ್ಲಿಯೇ ವಿಪರ್ಯಾಸಗಳನ್ನು ಕಾಣುತ್ತೇವೆ. ಮಧುಮೇಹ ಕಾಯಿಲೆ ಇದ್ದರೂ ಜಾಮೂನ್‌ ತಿನ್ನುವುದನ್ನು ಬಿಡರು. ಹೈ ಶುಗರ್‌ ಇದ್ದರೂ ಸಿಹಿಸೇವನೆಯ ಸುಖವನ್ನು ತ್ಯಜಿಸರು! 

ಶಿಶುಗಳಿಗೆ ವಿವಿಧ ಕಂಪೆನಿಗಳು ತಯಾರಿಸಿದ ಹಾಲಿನ ಪುಡಿಯನ್ನು ನೀಡುವ ಪದ್ಧತಿ ಇದೆ. ಅವುಗಳಿಗೆ ಸಕ್ಕರೆ ಬೆರೆಸಲಾಗಿರುತ್ತದೆ. ಕಂಪೆನಿಯವರು ಹೇಳುವ ಪ್ರಕಾರ, “ನಮ್ಮ ಕಂಪೆನಿಯ ಹಾಲಿನ ಪುಡಿಯನ್ನು ಸೇವಿಸಿದ ಕೂಸುಗಳು ತಾಯಿಯ ಹಾಲನ್ನು ಇಷ್ಟಪಡುವುದಿಲ್ಲ!’ 

ಕೆಲವೊಮ್ಮೆ ಸಂಸ್ಕರಿಸಿದ ಪೌಷ್ಟಿಕಾಂಶ ಇದೆಯೆಂದು ಭಾವಿಸಿದ ಪದಾರ್ಥಗಳೇ ನಮಗೆ ಶತ್ರುಗಳಂತೆ ಕೆಲಸಮಾಡುತ್ತವೆ. ಪ್ರಿಯವೆಂದು ನಾವು ಭಾವಿಸಿದ್ದು ನಮ್ಮ ದೇಹಕ್ಕೆ ನಿಜವಾಗಿ ಅಪ್ರಿಯವಾಗಿರುತ್ತದೆ.

ಸಕ್ಕರೆ ಎಂಬ ಕಹಿ ವಸ್ತು !
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತೀಯರು ಗರಿಷ್ಟ ಸಕ್ಕರೆ ಸೇವಿಸಿದರೆ ಅವರಿಗೆ 15 ಮಿಲಿಯನ್‌ ಟನ್‌ ಸಾಕಂತೆ. ಆದರೆ, ನಮ್ಮಲ್ಲಿ 35 ಮಿಲಿಯನ್‌ ಟನ್‌ ಸಕ್ಕರೆ ಉತ್ಪಾದನೆಯಾಗುತ್ತದೆ ಮತ್ತು ಅದರ ಅಗತ್ಯವೂ ಇದೆ. ಇಲ್ಲೊಂದು ದೇವರಿಗೆ ಸಲ್ಲಿಸುವ ಪ್ರಾರ್ಥನೆ ಇದೆ. “ದೇವರೇ, ನನ್ನನ್ನು ನನ್ನ ಮಿತ್ರರಿಂದ ರಕ್ಷಿಸು. ನನ್ನ ಶತ್ರುಗಳಿಂದ ನಾನೇ ರಕ್ಷಿಸಿಕೊಳ್ಳುವೆ’ ಇದು ನಮ್ಮ ಆಹಾರ ಸಂಸ್ಕೃತಿಗೆ ಅತ್ಯಂತ ಹೊಂದಿಕೆಯಾಗುವ ಪ್ರಾರ್ಥನೆ! ನಾವು ಬಳಸುವ ಆಹಾರ ಪದಾರ್ಥಗಳ ಆಧಾರದ ಮೇಲೆ ನಮ್ಮ ಮೆದುಳಿನ ರಚನೆ ಮತ್ತು ಸಂಪರ್ಕ ಜಾಲಗಳು ಬದಲಾಗುತ್ತವೆ. ನರಶಾಸ್ತ್ರದಲ್ಲಿ ಇದನ್ನು ನ್ಯೂರಲ್‌ ಫ‌ಯರಿಂಗ್‌ ಮತ್ತು ವಯರಿಂಗ್‌ (ನರ ಕಿಡಿ ಮತ್ತು ಕೊಂಡಿ) ಎಂದು ಕರೆಯುತ್ತಾರೆ.

ನಮ್ಮ ದೇಹದಲ್ಲಿ 5 ಲೀಟರ್‌ ರಕ್ತವಿದೆ ಎಂದು ಭಾವಿಸಿ. ಅಷ್ಟು ರಕ್ತಕ್ಕೆ 5 ಗ್ರಾಂ ಸಕ್ಕರೆಯನ್ನು ಮಾತ್ರ ಹಿಡಿದಿಡುವ ಸಾಮರ್ಥ್ಯವಿರುತ್ತದೆ. ದಕ್ಷಿಣಭಾರತದ ನಮ್ಮ ಊಟದ ಶೈಲಿಯಲ್ಲಿ ಅಂದರೆ ಬಿಳಿ ಅನ್ನದ ಗುಡ್ಡ ಮತ್ತು ಸಾರಿನ ಹೊಳೆ ದೇಹದೊಳಕ್ಕೆ ಸೇರುತ್ತದೆ. ಬಿಳಿ ಅಕ್ಕಿಯಲ್ಲಿರುವ ಕಾಬ್ಸ್ìಸಕ್ಕರೆಯಾಗಿ ರಕ್ತವನ್ನು ಸೇರುತ್ತದೆ. ಆಗ ಎರಡೇ ದಾರಿ ಇರುವುದು: ಒಂದು- ಕೆಲಸದ ಮೂಲಕ ಅದನ್ನು ಖರ್ಚು ಮಾಡುವುದು, ಎರಡು- ಇನ್ಸುಲಿನ್‌ ಮೂಲಕ ದೇಹವೇ ಅದನ್ನು ಕೊಬ್ಟಾಗಿ ಪರಿವರ್ತಿಸುತ್ತದೆ. ಈಗಿನ ಕಾಲದಲ್ಲಿ ಶ್ರಮ ಕಡಿಮೆ. ಹಾಗೆ, ಕೊಬ್ಬು ಶೇಖರಣೆಯೇ ಅಧಿಕ. ಜೈವಿಕ ನಿಯಮವೊಂದಿದೆ. ಅದರ ಪ್ರಕಾರ ದೇಹ ಕೊಬ್ಬನ್ನು ಶೇಖರಿಸಿ ಇಡುವುದು ಆಹಾರ ಅಭದ್ರತೆಯ ಅಥವಾ ಭೀಕರ ಬರಗಾಲದ ಸಮಯದಲ್ಲಿ ಬಳಕೆಗಾಗಿ. ಇದು ಮಿಲಿಯಾಂತರ ವರ್ಷಗಳಿಂದ ನಮ್ಮ ಜೀನ್‌ಗಳಲ್ಲಿ ಸಾಗಿಬಂದ ಸ್ಮತಿಶಕ್ತಿ! ಈಗ ಅಂಥ ಕೊರತೆಯ ಅವಕಾಶ ಕಡಿಮೆ. ತಿನ್ನುವುದಕ್ಕೆ ಕಡಿಮೆ ಇರಬಹುದು, ಆದರೆ ದಿನಗಟ್ಟಲೆ ಹಸಿವಿನಿಂದ ಇರಬೇಕಾದವರಿಲ್ಲ. ಆದರೆ, ಜೀನ್‌ಗಳು ತಮ್ಮ ನೆನಪನ್ನು ಬಿಡುತ್ತವೆಯೆ? ಅವು ಕೊಬ್ಬನ್ನು ಯಥಾಪ್ರಕಾರ ಸಂಗ್ರಹಿಸಲು ಮತ್ತು ಅವುಗಳ ಬಳಕೆ ಮಾಡದೇ ಇರಲು ಪ್ರೇರೇಪಿಸುತ್ತವೆ. ಜೊತೆಗೆ ಲೆಫ್ಟಿನ್‌ ಎಂಬ ಹಾರ್ಮೋನ್‌ ಮೂಲಕ ಕೃತಕ ಹಸಿವನ್ನು ಉಂಟುಮಾಡುತ್ತವೆ. ಆಗ ಕೊಬ್ಬು ಇದ್ದವರಿಗೂ ತಿನ್ನಲು ಉತ್ತೇಜನ ಸಿಗುತ್ತದೆ. ಹೀಗಾಗಿ ಬೊಜ್ಜು ಮತ್ತು ಹಸಿವು ಏಕಕಾಲದಲ್ಲಿ ಉಂಟಾಗುತ್ತದೆ ಮತ್ತು ಅವುಗಳು ಒಟ್ಟಿಗೆ ಇರುತ್ತವೆ. ಇದು ವಿವಿಧ ಕಾಯಿಲೆಗಳಿಗೆ ಎಡೆಮಾಡುತ್ತದೆ. ಆದರೆ ತೌಡು ತೆಗೆಯದ ಕೆಂಪಕ್ಕಿ ಅಥವಾ ಕಪ್ಪಕ್ಕಿ ಅಥವಾ ಕುಚ್ಚಲಕ್ಕಿ ಈ ರೀತಿ ರಕ್ತಕ್ಕೆ ಸಕ್ಕರೆಯನ್ನು ಪೂರೈಸದು. ಮನುಷ್ಯ ದೇಹ ಸಕ್ಕರೆಯನ್ನು ಏಕೆ ಸಂಗ್ರಹಿಸಿ ಇಡಲು ಶಕ್ತವಾಗದು ಎಂಬುದಕ್ಕೆ ಕಾರಣ ಇನ್ನೂ ನಿಗೂಢ. ಇದಕ್ಕೆ ಮನಶಾಸ್ತ್ರಜ್ಞರು ನೀಡುವ ಕಾರಣ ಸರಳವಾಗಿದೆ. 

ಮಂಗನಿಂದ ಮಾನವನಾಗುವ ಮೊದಲು ಹಣ್ಣು-ಹಂಪಲುಗಳನ್ನು ಸೇವಿಸುವ ವಾಡಿಕೆ ಇತ್ತು. ಹಣ್ಣುಹಂಪಲಿನಿಂದ ಹೆಚ್ಚು ಸಕ್ಕರೆ ಪಡೆಯಲು ಸಾಧ್ಯವಿಲ್ಲ. 85ರಿಂದ 90 ಶೇ. ಹಣ್ಣುಗಳಲ್ಲಿ ಇರುವುದು ನೀರೇ. ಹೊಟ್ಟೆ ತುಂಬ ತಿಂದರೂ ದೇಹ ಸೇರುವ ಸಕ್ಕರೆಯ ಪ್ರಮಾಣ ಬಹಳ ಕಡಿಮೆ. 25 ಗ್ರಾಂ ಸಕ್ಕರೆ ಸೇವಿಸಬೇಕಾದರೆ ಕಾಲು ಕೆಜಿ ಕಬ್ಬನ್ನು ಅಧ‌ì ಗಂಟೆ ಜಗಿಯಬೇಕು. ಹಾಗಾಗಿ, ಸಕ್ಕರೆ ಸೇವನೆಯ ಮಟ್ಟಿಗೆ ಮನುಷ್ಯನ ದೇಹ ತಲೆ-ತಲಾಂತರದಿಂದಲೂ ಒಗ್ಗಿಕೊಂಡು ಬಂದಿಲ್ಲ. ಇದನ್ನು ಪೂರ್ಣವಾಗಿ ಬೆಳೆಯಬೇಕಾದರೆ ಮನಶಾÏಸ್ತ್ರದ ಶರೀರ ಶಾಸ್ತ್ರ  (Physiology of Psychology) ಯನ್ನು ಅಧ್ಯಯನ ಮಾಡಬೇಕು.

ಕೆಲವೊಮ್ಮೆ ಭ್ರೂಣಾವಸ್ಥೆಯಲ್ಲಿ ಆಹಾರ ಲಭ್ಯತೆ ಕಡಿಮೆ ಇರಬಹುದು. ಆಗ ಮಗು ಅದೇ ರೀತಿಯ ಪಚನಕ್ರಿಯೆ ಮತ್ತು ದೇಹದ ನಿರ್ವಹಣೆಗೆ ಒಗ್ಗಿಕೊಂಡಿರುತ್ತದೆ. ಬೆಳೆಯುತ್ತ ಅಧಿಕ ಆಹಾರ ಸೇವಿಸಿದರೆ ಪಚನಕ್ರಿಯೆ ಮತ್ತು ದೇಹಸ್ಥಿತಿಯ ವಿರುದ್ಧವಾಗಿ ಹೋಗಿ ಅದೇ ಅನಾರೋಗ್ಯಕ್ಕೆ ಕಾರಣವಾಗಬಹುದು. ಚಿಕ್ಕ ವಯಸ್ಸಿನಲ್ಲಿ ಹಸಿವು ಮತ್ತು ಅಪೌಷ್ಟಿಕತೆಯಿಂದ ಬೆಳೆದ ಮಕ್ಕಳು ಮುಂದೆ ಹಣಕಾಸು ವ್ಯವಸ್ಥೆ , ಆಹಾರ ಲಭ್ಯತೆ ಎಲ್ಲವೂ ಇದ್ದರೂ ಗಬಗಬನೆ ತಿನ್ನುವ ರೂಢಿಯನ್ನೇ ಮುಂದುವರಿಸಬಹುದು. ಇದನ್ನು “ಬುಫೆ ಸಿಂಡ್ರೋಮ್‌’ ಎಂದು ಕರೆಯುತ್ತಾರೆ.

ಹತ್ತಾರು ಬಗೆಯ ಡಯಟ್‌ಗಳು
ಇನ್ನೊಂದು ಕುತೂಹಲದ ಸಂಗತಿ ಇದೆ. ಪೌಷ್ಟಿಕ ಆಹಾರ ಸೇವಿಸುವುದು, ಆಹಾರ ಕಾಪಾಡಿಕೊಳ್ಳುವುದು ಇತ್ತೀಚೆಗಿನ ದಿನಗಳಲ್ಲಿ ಮಾನಸಿಕ ರೋಗವಾಗಿ ಪರಿಣಿಮಿಸಿದೆ!

ಇದನ್ನು ನ್ಯೂಟ್ರಿಷನಿಸಂ ಮತ್ತು ಹೆಲ್ತಿಸಂ ಎಂದೆಲ್ಲ ವ್ಯಾಖ್ಯಾನಿಸಲಾಗುತ್ತದೆ. ಊಟ ಮಾಡುವಾಗ ನಮ್ಮ ಮಾತು ಮತ್ತೆ ಮತ್ತೆ ಇದರಲ್ಲಿ ಎಷ್ಟು ಕ್ಯಾಲೊರಿ ಇದೆ? ಕ್ಯಾಲ್ಸಿಯಂ ಇದೆಯೆ? ಕೊಲೆಸ್ಟ್ರಾಲ್‌ ಅಧಿಕವಾಗಬಹುದೆ? ಎನ್ನುವುದರತ್ತ ಹೋಗುತ್ತದೆ. ಹತ್ತಾರು ಬಗೆಯ ಡಯಟ್‌ ಪದ್ಧತಿಗಳು ಬಂದು ಊಟ ಸವಿಯುವ ಕ್ರಮವನ್ನೇ ಮರೆತಿದ್ದೇವೆ. ಕೀಟೋ ಡಯಟ್‌ ಎಂದಿದೆ. ಅಂದರೆ ಮುಕ್ಕಾಲು ಭಾಗ ಕ್ಯಾಲೊರಿಯನ್ನು ಕೊಬ್ಬಿನಿಂದಲೇ ಪಡೆಯುವ ಹಾಗೆ ಮಾಡುವುದು. ಇದನ್ನು ಮೂಛೆìರೋಗದವರಿಗೆ ಚಿಕಿತ್ಸಕ ರೀತಿಯಲ್ಲಿ ನೀಡಲಾಗುತ್ತಿತ್ತು. ಇದನ್ನೇ ಕೆಲವರು ಈಗ ತೂಕ ಇಳಿಸುವ ಡಯಟ್‌ ಆಗಿ ಅಳವಡಿಸಿಕೊಳ್ಳುತ್ತಿದ್ದಾರೆ. ಇಂಥ ಅದೆಷ್ಟೋ ಡಯಟ್‌ಗಳು ವಿಭಿನ್ನವಾಗಿ ಬಳಕೆಯಾಗುತ್ತವೆ. 125 ಎಂ.ಎಲ್‌ ಎಣ್ಣೆ ಕುಡಿದು ಒಂದಷ್ಟು ಪ್ರೊಟೀನ್‌ ಮತ್ತು ಅಲ್ಪ ಪ್ರಮಾಣದ ಸಕ್ಕರೆ ತಿನ್ನುವ ಕ್ರಮವಿದೆ. ಪೇಲಿಯೊ ಡಯಟ್‌ ಎಂಬ ಮಾತೊಂದಿದೆ, ಅದರಲ್ಲಿ ದವಸಧಾನ್ಯಗಳನ್ನು ಮುಟ್ಟುವಂತಿಲ್ಲ , ಗೆಡ್ಡೆಗೆಣಸು, ಮೀನುಮಾಂಸವನ್ನಷ್ಟೇ ಸೇವಿಸಬೇಕು. ಇಂಥ ಎಷ್ಟೋ ಡಯಟ್‌ಗಳ ಪಟ್ಟಿ ಮಾಡಬಹುದು.

ಝೆನ್‌ ಮಾದರಿಯ ಕತೆಯೊಂದಿದೆ. ಮೂವರು ಮಕ್ಕಳಿಗೆ ಬೆಳಗಿನ ತಿಂಡಿ ಕೊಟ್ಟ ಬಳಿಕ ಮೊದಲಿನವನಿಗೆ “ನೀನು ಏತಕ್ಕೆ ತಿನ್ನುತ್ತಿರುವೆ?’ ಎಂದು ಕೇಳಿದರೆ ಆತನ ಉತ್ತರ, “ನನ್ನ ದೇಹಕ್ಕೆR ಕ್ಯಾಲೊರಿ ಬೇಕು. ಅದಕ್ಕೆ’. ಮತ್ತೂಬ್ಬನಲ್ಲಿ ಕೇಳಿದರೆ ಅವನ ಉತ್ತರ, “ಇದರಲ್ಲಿ ಪ್ರೊಟೀನ್‌ ಇದೆ. ಅದಕ್ಕಾಗಿ ತಿನ್ನುತ್ತಿದ್ದೇನೆ’. ಮೂರನೆಯವನು “ನಾನು ತಿಂಡಿಗಾಗಿ ತಿನ್ನುತ್ತಿದ್ದೇನೆ’ ಎನ್ನುತ್ತಾನೆ.Whole can never be matched by some of its parts  ಎಂಬ ಮಾತಿದೆ. ರಸಗ್ರಹಣ, ರುಚಿ ಸ್ವಾದನದಂಥ ಅನುಭವಗಳನ್ನು ನಮ್ಮ ಸಮಗ್ರವನ್ನು ಅನುಭವಿಸುವುದನ್ನು ನಾವು ಮರೆಯುತ್ತಿದ್ದೇವೆ. ಗೋವಾದ ಬೋರ್ಕರ್‌ ಎಂಬ ಕವಿ ಬರೆದ ಸಾಲುಗಳು ನೆನಪಾಗುತ್ತವೆ. “ಓ ಮೃತ್ಯು ದೇವತೆಯೇ, ನನ್ನ ಸಾವು ಈ ದಿನ ಬೇಡ, ಇಂದು ಬೇಡವೇ ಬೇಡ. ರಾತ್ರಿ ಊಟಕ್ಕಿದೆ ಮೀನು ಸಾರು!’

ಇದು ಬದುಕಿನ ಕುರಿತ ಉತ್ಕಟ ಪ್ರೀತಿಯನ್ನು ತೋರಿಸುತ್ತದೆ. ಗ್ರೀಕ್‌ ಫಿಲಾಸಫ‌ರ್‌ ಎಪಿಕ್ಯೂರಸ್‌ ಹೇಳುವ ಮಾತು: “ರಸಜ್ಞನಾದವನು ತಿಂಡಿಪೋತನಾಗಲಾರ’. ತಿಂಡಿ ಪೋತನಾಗುವುದು ಬೇರೆ, ರಸಜ್ಞನಾಗುವುದು ಬೇರೆ. ಇವತ್ತು ಎಲ್ಲರೂ ಮೊದಲನೆಯವರಾಗುತ್ತಾರೆ, ಎರಡನೆಯದರ ಸಂವೇದನೆ ಕ್ಷೀಣಗೊಳಿಸಿಕೊಂಡಿದ್ದಾರೆ.ಉಪನಿಷತ್‌ ಉಕ್ತಿ ನೆನಪಾಗುತ್ತದೆ: ನಾವು ಏನನ್ನು ತಿನ್ನುತ್ತೇವೆಯೋ ಅದರಿಂದಲೇ ನಾವು ತಿನ್ನಲ್ಪಡುತ್ತೇವೆ. ಆಹಾರ ಎಂಬುದು ಹೊರಜಗತ್ತನ್ನು ಒಳ ಜಗತ್ತನ್ನಾಗಿ ಒಂದನೊಡನೊಂದು ಎಸೆದುಕೊಳ್ಳುವ ಕ್ರಿಯೆ. ಉಪನಿಷತ್ತಿನ ಮಾತಿನ ಪ್ರಕಾರವೇ ಹೇಳುವುದಾದರೆ ದೇಹ ಆವೃತ್ತವಾಗಿರುವುದು ಅನ್ನಮಯ ಕೋಶದಿಂದ. ಅದರ ಮೂಲಕವೇ ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳನ್ನು ಮೀರಬೇಕು. ಹಾಗಾಗಿ, ಆಹಾರ ಸೇವನೆಯನ್ನು ಬಾಯಿಚಪಲವನ್ನು ತೀರಿಸಿಕೊಳ್ಳುವ ಕ್ರಿಯೆಯಾಗಿ ಸೀಮಿತವಾಗಿ ಗ್ರಹಿಸಲು ಸಾಧ್ಯವಿಲ್ಲ.

ನಾವು ತಿನ್ನುವುದು ಆಹಾರವನ್ನಲ್ಲ, ಬ್ರ್ಯಾಂಡ್‌ಗಳನ್ನು !
ನಿಜವಾಗಿ ನಾವು ತಿನ್ನುವುದು “ಆಹಾರ ಪದಾರ್ಥವನ್ನಲ್ಲ , ಬ್ರ್ಯಾಂಡ್‌ಗಳನ್ನು’ (We are brand -washed) ಎಂಬ ಮಾತಿದೆ. ಇದು ಮಾರುಕಟ್ಟೆಯ ಜಾಹೀರಾತನ್ನು ಆಧರಿಸಿ ಜೀವನ ನಡೆಸುವ ಕಾಲ! ಇದು ಸ್ಟಾಕ್‌ ಹೋಂ ಸಿಂಡ್ರೋಮ್‌ ಕೂಡ ಹೌದು. ಆನೆಯ ಕಾಲಿನ ಸರಪಳಿಯನ್ನು ಬಿಚ್ಚಿದರೂ ಅದು ಅಲ್ಲಿಯೇ ನಿಂತಿರುತ್ತದಲ್ಲ , ಹಾಗೆ! ಇವತ್ತಿನ ಕಾಲ ಹೇಗಾಗಿದೆಯೆಂದರೆ ಕಿಂಗ್‌ ಫಿಷರ್‌ ಎಂದ ಕೂಡಲೇ ಹಕ್ಕಿಯ ನೆನಪಾಗುವುದಿಲ್ಲ , ಬಿಯರ್‌ ಕಣ್ಣಮುಂದೆ ಬರುತ್ತದೆ. ಮಾರಾಟ ಜಗತ್ತಿನಲ್ಲಿ ಹೇಳುವುದುಂಟು: ವಸ್ತುಗಳನ್ನು ಜನರಿಗೆ ಮಾರಲಾಗದಿದ್ದರೆ, ಜನರನ್ನು ವಸ್ತುಗಳಿಗೆ ಮಾರಿ!’ ಎಂದು. ನಮ್ಮ ಆಯ್ಕೆಗೆ, ನಮ್ಮ ಇಚ್ಛೆಗೆ ನಾವೇ ಕಾರಣರಲ್ಲ ! ಅವು ಬೇರೆ ಕಡೆಯಿಂದ ಹೇರಲ್ಪಟ್ಟಿರಬಹುದು. ಮಾರುಕಟ್ಟೆಯ ತಂತ್ರ ಹೇಗಿದೆಯೆಂದರೆ ಬರಗಾಲದ ಆಹಾರವಾಗಿದ್ದದ್ದು ಉನ್ನತ ವರ್ಗದ ಆಹಾರವಾಗಿ ಆಕರ್ಷಿಸಲ್ಪಡಬಹುದು. ಬುಡಕಟ್ಟು ಜನಾಂಗದ ಆಹಾರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಶ್ರೀಮಂತರ ಆಹಾರ ಮಾತ್ರವಾಗಿರಬಹುದು. ನಮಗೆ ಯಾರಾದರೂ ಪರಿಚಯಿಸಿದ, ನಮ್ಮ ಕಣ್ಣಿಗೆ ಬಿದ್ದ , ನಮ್ಮ ಕಿವಿಗೆ ಕೇಳಿದ, ಆಹಾರವೇ ನಮ್ಮ ಆಯ್ಕೆಯಾಗುಳಿದು ನಮ್ಮ ನಿಜವಾದ ಆಹಾರ ಸಂಸ್ಕೃತಿ ನಮ್ಮಿಂದ ಮರೆಯಾಗಬಹುದು. ಔಷಧೀಯ ಗಿಡದ ಗುಣ ತಿಳಿಯದಿದ್ದರೆ ಅದು ಕಳೆಯಾಗಿ ಬಿಡಬಹುದು. ಶೆರ್ಲಾಕ್‌ ಹೋಮ್ಸ್‌ನ ಮಾತಿದೆ: ಸುಲಭವಾಗಿ ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸಿದರೆ ನಾವು ದಾರಿ ತಪ್ಪುವ ಸಾಧ್ಯತೆ ಹೆಚ್ಚು.  We are fooled in a way by familiarity. . ವೈದ್ಯಕೀಯ ಕ್ಷೇತ್ರದಲ್ಲಿ ಪ್ಲಸೀಬೋ (Placebo) ಮತ್ತು ನಸೀಬೋ (Nocebo) ಎಂಬ ಪರಿಣಾಮಗಳಿವೆ. ಪ್ಲಸೀಬೋ ಎಂದರೆ ನಾವು ಪದಾರ್ಥಗಳಿಗೆ ಒಳ್ಳೆಯ ಗುಣಗಳನ್ನು ಆರೋಪಿಸಿ ಅದರಿಂದ ಒಳ್ಳೆಯದಾಗುತ್ತದೆ ಎಂದು ಭಾವಿಸಿ ಸೇವಿಸುವುದು. ಆಗ ಅಲ್ಪಸ್ವಲ್ಪ ಒಳ್ಳೆಯದೇ ಆಗುತ್ತದೆ. ವಸ್ತುವಿಗೆ ನಕಾರಾತ್ಮಕ ಗುಣಗಳನ್ನು ಗ್ರಹಿಸಿ ಸೇವಿಸಿದರೆ ಅದರಿಂದ ತೊಂದರೆಯೇ ಅಧಿಕ. ಇದರ ವೈಜ್ಞಾನಿಕ ಕಾರಣ ಇನ್ನೂ ನಿಗೂಢ. ಬಹುಶಃ ಮಿದುಳಿನಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ಇದಕ್ಕೆ ಕಾರಣವಾಗಿರಬಹುದು. ಆದರೆ, ಈ ಸಿದ್ಧಾಂತಕ್ಕೆ ತನ್ನದೇ ಆದ ಇತಿಮಿತಿಗಳಿವೆ.

– ಕೆ.ಸಿ.ರಘು

ಟಾಪ್ ನ್ಯೂಸ್

ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌: ಸುಪ್ರೀಂ ನೋಟಿಸ್‌

ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌: ಸುಪ್ರೀಂ ನೋಟಿಸ್‌

ಅಶೋಕ್‌ ಗೆಹ್ಲೋಟ್, ಸಚಿನ್‌ ಪೈಲಟ್‌ ಕಾಂಗ್ರೆಸ್‌ ಆಸ್ತಿ: ರಾಹುಲ್‌ ಗಾಂಧಿ

ಅಶೋಕ್‌ ಗೆಹ್ಲೋಟ್, ಸಚಿನ್‌ ಪೈಲಟ್‌ ಕಾಂಗ್ರೆಸ್‌ ಆಸ್ತಿ: ರಾಹುಲ್‌ ಗಾಂಧಿ

ಹೆಬ್ರಿ ಪಿಯು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಹೆಬ್ರಿ ಪಿಯು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಆರ್ಥಿಕ ಸ್ಥಿತಿಗೆ ಮಾನ್ಯತೆ ದೊರೆಯಲಿ: ಹೆಚ್‌.ಡಿ.ಕುಮಾರಸ್ವಾಮಿ

ಆರ್ಥಿಕ ಸ್ಥಿತಿಗೆ ಮಾನ್ಯತೆ ದೊರೆಯಲಿ: ಹೆಚ್‌.ಡಿ.ಕುಮಾರಸ್ವಾಮಿ

PM Modi

ಆಯುರ್ವೇದ ಕಾಂಗ್ರೆಸ್‍ನ ಸಮಾರೋಪ : ಡಿ.11ಕ್ಕೆ ಪ್ರಧಾನಿ ಮೋದಿ ಗೋವಾಕ್ಕೆ

1-sadsad

53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ; ಸ್ಪ್ಯಾನಿಷ್‌ ಚಿತ್ರಕ್ಕೆ ಗೋಲ್ಡನ್‌ ಪೀಕಾಕ್‌ ಪ್ರಶಸ್ತಿ

1-SAAS

ಅಫ್ತಾಬ್ ಪೂನವಾಲಾನನ್ನ ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್‌ ಮೇಲೆ ದಾಳಿ; ವಿಡಿಯೋಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌: ಸುಪ್ರೀಂ ನೋಟಿಸ್‌

ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌: ಸುಪ್ರೀಂ ನೋಟಿಸ್‌

ಅಶೋಕ್‌ ಗೆಹ್ಲೋಟ್, ಸಚಿನ್‌ ಪೈಲಟ್‌ ಕಾಂಗ್ರೆಸ್‌ ಆಸ್ತಿ: ರಾಹುಲ್‌ ಗಾಂಧಿ

ಅಶೋಕ್‌ ಗೆಹ್ಲೋಟ್, ಸಚಿನ್‌ ಪೈಲಟ್‌ ಕಾಂಗ್ರೆಸ್‌ ಆಸ್ತಿ: ರಾಹುಲ್‌ ಗಾಂಧಿ

ಹೆಬ್ರಿ ಪಿಯು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಹೆಬ್ರಿ ಪಿಯು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಆರ್ಥಿಕ ಸ್ಥಿತಿಗೆ ಮಾನ್ಯತೆ ದೊರೆಯಲಿ: ಹೆಚ್‌.ಡಿ.ಕುಮಾರಸ್ವಾಮಿ

ಆರ್ಥಿಕ ಸ್ಥಿತಿಗೆ ಮಾನ್ಯತೆ ದೊರೆಯಲಿ: ಹೆಚ್‌.ಡಿ.ಕುಮಾರಸ್ವಾಮಿ

PM Modi

ಆಯುರ್ವೇದ ಕಾಂಗ್ರೆಸ್‍ನ ಸಮಾರೋಪ : ಡಿ.11ಕ್ಕೆ ಪ್ರಧಾನಿ ಮೋದಿ ಗೋವಾಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.